ಸೋಮವಾರ, ಜೂನ್ 14, 2021
26 °C

ಶಾಸಕರ ಹಕ್ಕು ಚ್ಯುತಿ: ಸಂಸದರ ವಿರುದ್ಧ ಮಹೇಶ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಕುರಿತು ತಾಲ್ಲೂಕು ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವ ಮೂಲಕ ಸಂಸದ ಎಚ್.ವಿಶ್ವನಾಥ್ ಅವರು ಶಾಸಕರ ಹಕ್ಕಿಗೆ ಚ್ಯುತಿ ಉಂಟು ಮಾಡಿದ್ದಾರೆ~ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು.`ಸಂಸದರು ತಾಲ್ಲೂಕು ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ಮಾಡಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಶಾಸಕರು ಮಾಡಬೇಕಾದ ಸಭೆಯನ್ನು ಸಂಸದರು ನಡೆಸಲು ಬರುವುದಿಲ್ಲ. ಆದರೂ ಪಿರಿಯಾಪಟ್ಟಣ, ಹುಣಸೂರಿನಲ್ಲಿ ಎಚ್.ವಿಶ್ವನಾಥ್ ಅವರು ಸಭೆ ನಡೆಸಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆ.ಆರ್.ನಗರದಲ್ಲೂ ಮಾ.6ರಂದು ಇಂಥ ಸಭೆ ನಡೆಸಲು ಸಂಸದರು ಉದ್ದೇಶಿಸಿದ್ದರು. ಆದರೆ ಅದು ನಡೆಯಲ್ಲಿಲ್ಲ~ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.`ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷರು ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಲು ಅವಕಾಶವಿದೆಯೇ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಕೇಳಲಾಗಿತ್ತು.ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್ ಸ್ಪಷ್ಟೀಕರಣ ನೀಡಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡುವ ವರೆಗೂ ಇಂಥ ಸಭೆ ನಡೆಸಲು ಅವಕಾಶವಿಲ್ಲ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಮಿತಿಯು ನಿರ್ಣಯ ತೆಗೆದುಕೊಂಡರೆ ಸ್ಥಳ ಪರಿಶೀಲನೆ ಮಾಡಬಹುದು ಎಂದು ಪತ್ರಬರೆದಿದ್ದಾರೆ~ ಎಂದರು.ಸವಲತ್ತು ಸಂತೆಗೆ ವಿರೋಧ ಸಲ್ಲದು

`ರಾಜ್ಯ ಸರ್ಕಾರ ನಡೆಸಿದ ಸವಲತ್ತುಗಳ ಸಂತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಎಚ್.ವಿಶ್ವನಾಥ್ ಅವರು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ಇದು ಬಿಜೆಪಿಯ ಕಾರ್ಯಕ್ರಮವಲ್ಲ. ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕೆಲಸ. ಹೀಗಾಗಿ ಜೆಡಿಎಸ್ `ಸಂತೆ~ಯಲ್ಲಿ ಭಾಗವಹಿಸಿತ್ತು~ ಎಂದು ಅವರು ವಿವರಿಸಿದರು.ಗೂಬೆ ಕೂರಿಸಬೇಡಿ:`ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸುವುದನ್ನು ಬಿಟ್ಟು ಸಂಸದರು ಜೆಡಿಎಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಬೇರೆಯವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಿ ರಾಜಕಾರಣ ಮಾಡಿ. 25 ವರ್ಷಗಳಿಂದ ವಕೀಲಿ ವೃತ್ತಿ ಮಾಡುತ್ತಿರುವ ನಿಮ್ಮ ಸ್ನೇಹಿತರೇ ಪತ್ರಕರ್ತರ ಮೇಲೆ ಯಾಕೆ ಹಲ್ಲೆ ಮಾಡಿರಬಾರದು~ ಎಂದು ಪ್ರಶ್ನಿಸಿದರು.ಮಾಜಿ ಮೇಯರ್ ಸಂದೇಶಸ್ವಾಮಿ ಮಾತನಾಡಿ, `ಕುಡಿಯುವ ನೀರು ಸೇರಿಂದತೆ ಅನೇಕ ಸಮಸ್ಯೆಗಳಿಂದ ಮೈಸೂರು ನಗರ ಬಳಲುತ್ತಿದೆ. ಇಂಥ ಸಂದರ್ಭದಲ್ಲಿ ಬೇರೆಯವರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿ ಸಂಸದರು ಕೆಲಸ ಮಾಡಬೇಕು~ ಎಂದು ಆಗ್ರಹಿಸಿದರು.ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಜಣ್ಣ, ಕಾರ್ಯಾಧ್ಯಕ್ಷ ಎಸ್.ಬಿ.ಮಂಜು, ಕಾರ್ಯದರ್ಶಿ ವಿಶ್ವನಾಥ್, ಹರೀಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.