ಶಾಸಕ ಅಮರೇಶ್‌ಗೆ ಎರಡು ವರ್ಷ ಜೈಲು ಶಿಕ್ಷೆ

7
ದಶಕದ ಹಿಂದಿನ ವಂಚನೆ ಪ್ರಕರಣ

ಶಾಸಕ ಅಮರೇಶ್‌ಗೆ ಎರಡು ವರ್ಷ ಜೈಲು ಶಿಕ್ಷೆ

Published:
Updated:
ಶಾಸಕ ಅಮರೇಶ್‌ಗೆ ಎರಡು ವರ್ಷ ಜೈಲು ಶಿಕ್ಷೆ

ಮುಳಬಾಗಲು: ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಪ್ರಕರಣದಲ್ಲಿ ವಂಚನೆ ಸಾಬೀತಾದ್ದರಿಂದ ಸ್ಥಳೀಯ ಶಾಸಕ, ಕಾಂಗ್ರೆಸ್ ಪಕ್ಷದ ಅಮರೇಶ್ ಅವರಿಗೆ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ಮತ್ತು ರೂ 10 ಸಾವಿರ   ದಂಡ ವಿಧಿಸಿ ಗುರುವಾರ ಆದೇಶ ನೀಡಿದೆ.ಪ್ರಕರಣದಲ್ಲಿ ಒಟ್ಟು ಐವರಿಗೆ ಶಿಕ್ಷೆ ವಿಧಿಸಿ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಓಂಕಾರಮೂರ್ತಿ ಆದೇಶ ನೀಡಿದ್ದಾರೆ. ದಂಡ ತೆರಲು ತಪ್ಪಿದರೆ ಮೂರು ತಿಂಗಳ ಕಾಲ ಹೆಚ್ಚುವರಿ ಶಿಕ್ಷೆಯನ್ನೂ ವಿಧಿಸಿದ್ದಾರೆ. ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ. ಆರೋಪಿಗಳಲ್ಲಿ ಇಬ್ಬರು ಈಗಾಗಲೇ ಮೃತರಾಗಿದ್ದಾರೆ.ಶಾಸಕ ಅಮರೇಶ್, ಸಿದ್ದನಹಳ್ಳಿ ಮುನಿಯಮ್ಮ, ಚೆಂಗಲರಾಯಪ್ಪ, ರಂಗಾರೆಡ್ಡಿ ಮತ್ತು ಕೃಷ್ಣಯ್ಯ ಶಿಕ್ಷೆಗೆ ಒಳಗಾಗಿರುವವರು. ಅವರ ಪೈಕಿ, ರಂಗಾರೆಡ್ಡಿ, ಕೃಷ್ಣಯ್ಯ ಮೃತರಾಗಿದ್ದಾರೆ. ವೆಂಕಟರವಣಪ್ಪ ಎಂಬುವರ ಮೇಲಿನ ಆರೋಪ ಸಾಬೀತಾಗಿಲ್ಲ.ವಿವರ: ಮುಳಬಾಗಲು ತಾಲ್ಲೂಕಿನ ಬೇವಹಳ್ಳಿಯ ವಾಸಿ ಎಂ,ಬಿ.ಲಿಂಗಾರಾಧ್ಯ ಎಂಬುವವರಿಗೆ ಅದೇ ಗ್ರಾಮದ ಸರ್ವೆ ನಂಬರ್184ರಲ್ಲಿ 3 ಎಕರೆ 8 ಗುಂಟೆ ಜಮೀನು ಬಸವ ಇನಾಂತಿಯಲ್ಲಿ     1983ರ ಫೆ. 28ರಂದು ಮಂಜೂರಾಗಿತ್ತು. ಆ ಜಮೀನನ್ನು ಸಿದ್ದನಹಳ್ಳಿ ಮುನಿಯಮ್ಮ ಎಂಬುವವರಿಗೆ ಮಾರಾಟ ಮಾಡುವಲ್ಲಿ ಶಾಸಕ ಅಮರೇಶ್ 2002ರಲ್ಲಿ ತಾವು ಸೊನ್ನವಾಡಿ ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾಗ ಚಂಗಲರಾಯಪ್ಪ ಮತ್ತು ಇತರ ಆರೋಪಿಗಳೊಂದಿಗೆ ಸೇರಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ನಕಲಿ ದಾಖಲೆಗಳೊಂದಿಗೆ ಜಮೀನು ಮಾರಾಟ ಮಾಡಲಾಗಿದೆ. ಜಮೀನು ನೋಂದಣಿ ಸಮಯದಲ್ಲಿ ಅಮರೇಶ್ ಅವರು ಛಾಪಾ ಕಾಗದಗಳನ್ನು ಸರಬರಾಜು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಲಿಂಗಾರಾಧ್ಯ ಅವರು ಜೂ 3, 2002ರಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು.ಜನಜಂಗುಳಿ: ಮಧ್ಯಾಹ್ನ ಸುಮಾರು 12.30ರ ವೇಳೆಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ ಎಂಬ ಮಾಹಿತಿ ಹಬ್ಬಿ ಶಾಸಕರ ಬೆಂಬಲಿಗರೂ ಸೇರಿದಂತೆ ಪಟ್ಟಣ ಮತ್ತು ಹಳ್ಳಿಗಳ ನೂರಾರು ಮಂದಿ ನ್ಯಾಯಾಲಯದ ಒಳ- ಹೊರಗೆ ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು  ಕೋಲಾರದಿಂದ ಕರೆಸಿಕೊಳ್ಳಲಾಯಿತು.ಜಾಮೀನು: ತೀರ್ಪು ಪ್ರಕಟವಾಗುತ್ತಿದ್ದಂತೆ ಆರೋಪಿಗಳ ಪರ ವಕೀಲ ಗೋವಿಂದರೆಡ್ಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಸಲುವಾಗಿ ಶಿಕ್ಷೆಯನ್ನು ತಡೆಹಿಡಿಯುವಂತೆ ಕೋರಿದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ 1 ತಿಂಗಳ ಕಾಲ ಶಿಕ್ಷೆ ತಡೆ ಹಿಡಿದು ಆದೇಶಿಸಿತು. ತೀರ್ಪು ಪ್ರಕಟವಾಗುತ್ತಿದ್ದಂತೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸಂಜೆ ನಾಲ್ಕು ಗಂಟೆ ಬಳಿಕ ಬಿಡುಗಡೆ ಮಾಡಲಾಯಿತು. ಪ್ರಾಸಿಕ್ಯೂಷನ್ ಪರವಾಗಿ ಶಾಂತಿ ಮೇರಿ ವಾದ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry