ಗುರುವಾರ , ಮೇ 13, 2021
34 °C

ಶಾಸಕ ಒತ್ತೆ ಪ್ರಕರಣ: ಸಂಧಾನಕ್ಕೆ ನಕ್ಸಲ್ ಬೆಂಬಲಿತ ಸಂಘಟನೆ ಷರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋರಾಪುಟ್/ಭುವನೇಶ್ವರ (ಪಿಟಿಐ): ಅಪಹೃತ ಬಿಜೆಡಿ ಶಾಸಕ ಜಿನಾ ಹಿಕಾಕ ಬಿಡುಗಡೆಗಾಗಿ ಸಂಧಾನ ನಡೆಸಲು ಒಡಿಶಾ ಸರ್ಕಾರ ಆಮಂತ್ರಣ ನೀಡಿದ ಮೂರು ದಿನಗಳ ಬಳಿಕ ನಕ್ಸಲ್ ಬೆಂಬಲಿತ ಚಾಸಿ ಮುಲಿಯಾ ಆದಿವಾಸಿ ಸಂಘವು  (ಸಿಎಂಎಎಸ್) ಸಂಧಾನ ನಡೆಸಲು ಕೆಲವು ಷರತ್ತುಗಳನ್ನು ಸರ್ಕಾರದ ಮುಂದಿಟ್ಟಿದೆ.

2009ರಿಂದಲೂ ತಲೆ ಮರೆಸಿಕೊಂಡಿರುವ ಸಂಘದ ಅಧ್ಯಕ್ಷ ನಾಚಿಕಾ ಲಿಂಗಾ ಲಿಂಗಾ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸಂಧಾನ ಮಾತುಕತೆಯಲ್ಲಿ ಭಾಗವಹಿಸುವುದಕ್ಕೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು, ಜೈಲಿನಲ್ಲಿರುವ ಎಲ್ಲಾ ಸಿಎಂಎಎಸ್ ಸದಸ್ಯರನ್ನು ಬಿಡುಗಡೆ ಮಾಡಬೇಕು ಮತ್ತು ಮಾವೊವಾದಿಗಳ ವಿರುದ್ಧ ನಡೆಸಲಾಗುತ್ತಿರುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಲಿಂಗಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಎಂಎಎಸ್‌ನ ಹಲವು ಸದಸ್ಯರು ಸುಳ್ಳು ಆರೋಪಗಳಿಗಾಗಿ ಕೋರಾಪುಟ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿರುವ ಲಿಂಗಾ, ಒಂದು ವೇಳೆ ಈ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದರೆ ತಕ್ಷಣ ಹಿಕಾಕ ಬಿಡುಗಡೆಗಾಗಿ ನಕ್ಸಲರೊಂದಿಗೆ ಸಂಧಾನ ಮಾತುಕತೆ ನಡೆಸಲು ಸಿದ್ಧ ಎಂದು ಹೇಳಿದ್ದಾರೆ.

ಬೇಡಿಕೆಗಳನ್ನು ಈಡೇರಿಸಿದ ಬಳಿಕ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೊದಲು ಸಂಘವು ಇತರ ಕೆಲವು ಬುಡಕಟ್ಟು ಸಂಘಟನೆಗಳೊಂದಿಗೆ ಮಾತುಕತೆ ನಡೆಸಲಿದೆ ಎಂದೂ ಅವರು ತಿಳಿಸಿದ್ದಾರೆ. ಲಿಂಗಾ ಅವರು ಮುಂದಿಟ್ಟಿರುವ ಷರತ್ತುಗಳ ಕುರಿತಂತೆ ರಾಜ್ಯ ಸರ್ಕಾರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಮಧ್ಯೆ, ನಕ್ಸಲರ ಒತ್ತೆಯಲ್ಲಿರುವ ಇಟಲಿ ಪ್ರಜೆ ಪೌಲೊ ಬೊಸೊಸ್ಕೊ ಬಿಡುಗಡೆಗಾಗಿ ಯತ್ನಗಳು ಸಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.