ಶಾಸಕ ಪಾಟೀಲ ಮನೆ ಮೇಲೆ ಲೋಕಾಯುಕ್ತ ದಾಳಿ

7

ಶಾಸಕ ಪಾಟೀಲ ಮನೆ ಮೇಲೆ ಲೋಕಾಯುಕ್ತ ದಾಳಿ

Published:
Updated:

ಬೆಳಗಾವಿ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ನಿವಾಸ ಹಾಗೂ ಅವರಿಗೆ ಸೇರಿದ ಆರು ಕಚೇರಿಗಳ ಮೇಲೆ ಶನಿವಾರ ಲೋಕಾಯುಕ್ತರು ಏಕಕಾಲಕ್ಕೆ ದಾಳಿ ನಡೆಸಿದರು. ಆರು ತಂಡಗಳಲ್ಲಿದ್ದ ಒಂಬತ್ತು ಮಂದಿ ಅಧಿಕಾರಿಗಳು, ಶಾಸಕರ ನಿವಾಸ `ಮಾಲಿನಿ' ಸೇರಿದಂತೆ ಪಾಟೀಲ ರೈಸ್ ಮಿಲ್, ಬಿ.ಟಿ ಕೆಮಿಕಲ್ಸ್, ಎಸ್.ಜಿ ಕನ್‌ಸ್ಟ್ರಕ್ಷನ್ಸ್, ದೇವ್ ಡೆವಲಪರ್ಸ್‌, ವಾಸ್ತು ಡೆವಲಪರ್ಸ್‌ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳಿಗಾಗಿ ಶೋಧನೆ ನಡೆಸಿದರು. ಆದರೆ ಯಾವುದೇ ಮಹತ್ವದ ದಾಖಲೆಗಳು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.`ಅವರ ಮನೆ ಹಾಗೂ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಬ್ಯಾಂಕ್ ಖಾತೆಗಳು, ಚರಾಸ್ತಿಗಳ ಬಗ್ಗೆಯೂ ತನಿಖೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ದಾಳಿ ಸಂದರ್ಭದಲ್ಲಿ ದೊರೆತ ಎಲ್ಲ ಮಾಹಿತಿಗಳನ್ನು ಈಗಲೇ ಹೇಳುವುದು ಸರಿಯಲ್ಲ' ಎಂದು ಲೋಕಾಯುಕ್ತ ಎಸ್‌ಪಿ (ಪ್ರಭಾರ) ಸಿ.ಎ.ಬಳಮಕರ್ `ಪ್ರಜಾವಾಣಿ'ಗೆ ತಿಳಿಸಿದರು.ಶಾಸಕರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿ ಸುಜಿತ್ ಮುಳಗುಂದ ಅವರು 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯವು ಲೋಕಾಯುಕ್ತ ಎಸ್‌ಪಿ ಅವರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಲೋಕಾಯುಕ್ತರು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದರು.`ದಾಖಲೆಗಳ ಪರಿಶೀಲನೆಗೆ ಲೋಕಾಯುಕ್ತರಿಗೆ ನಾವು ಎಲ್ಲ ಸಹಕಾರ ನೀಡಿದ್ದೇವೆ. ದುರುದ್ದೇಶದಿಂದ ನನ್ನ ಮೇಲೆ ಆರೋಪ ಮಾಡಲಾಗಿದೆ. ನ್ಯಾಯಾಂಗದ ಮೇಲೆ ನಂಬಿಕೆಯಿದ್ದು, ಆರೋಪದಿಂದ ಮುಕ್ತನಾಗುವ ವಿಶ್ವಾಸವಿದೆ' ಎಂದು ಅಭಯ ಪಾಟೀಲ ನಂತರ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry