ಶಾಸಕ ಮುನಿರಾಜುಗೆ ಲೋಕಾಯುಕ್ತ ಕೋರ್ಟ್ ಸಮನ್ಸ್

ಮಂಗಳವಾರ, ಜೂಲೈ 16, 2019
25 °C

ಶಾಸಕ ಮುನಿರಾಜುಗೆ ಲೋಕಾಯುಕ್ತ ಕೋರ್ಟ್ ಸಮನ್ಸ್

Published:
Updated:

ಬೆಂಗಳೂರು: ಭೂ ಕಬಳಿಕೆ ಆರೋಪದ ಮೇಲೆ ದಾಖಲಾಗಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ಇದೇ 27ರಂದು ವಿಚಾರಣೆಗೆ ಹಾಜರಾಗುವಂತೆ ದಾಸರಹಳ್ಳಿಯ ಬಿಜೆಪಿ ಶಾಸಕ ಎಸ್.ಮುನಿರಾಜು, ಬೆಂಗಳೂರು ಉತ್ತರ ತಾಲ್ಲೂಕಿನ ಹಿಂದಿನ ವಿಶೇಷ ತಹಶೀಲ್ದಾರ್ ಕೆ.ರಂಗನಾಥಯ್ಯ ಮತ್ತು ಯಶವಂತಪುರ ಹೋಬಳಿ ಕಂದಾಯ ನಿರೀಕ್ಷಕ ಸುರೇಶ್ ಅವರಿಗೆ ಸಮನ್ಸ್ ಜಾರಿಗೊಳಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.ಯಶವಂತಪುರ ಹೋಬಳಿಯ ಕೆರೆಗುಡ್ಡದಹಳ್ಳಿಯಲ್ಲಿ ಮುನಿರಾಜು ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂಕಬಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಪುಟ್ಟಸ್ವಾಮಿ ಎಂಬುವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಪೊಲೀಸರು, ಮುನಿರಾಜು, ರಂಗನಾಥಯ್ಯ ಮತ್ತು ಸುರೇಶ್ ವಿರುದ್ಧ ಜುಲೈ 13ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂ ಕಬಳಿಕೆ ನಡೆಸಿರುವುದು ಮತ್ತು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ವಂಚಿಸಿರುವ ಆರೋಪದ ಮೇಲೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಆರೋಪಪಟ್ಟಿಯನ್ನು ವಿಚಾರಣೆಗೆ ಸ್ವೀಕರಿಸಿದರು. ಇದೇ 27ರಂದು ವಿಚಾರಣೆಗೆ ಹಾಜರಾಗುವಂತೆ ಮೂವರು ಆರೋಪಿಗಳಿಗೂ ಸಮನ್ಸ್ ಜಾರಿ ಮಾಡುವಂತೆ ಆದೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry