ಶಾಸಕ ವಿಶ್ವನಾಥ್‌ಗೆ ನಿರೀಕ್ಷಣಾ ಜಾಮೀನಿಲ್ಲ

6

ಶಾಸಕ ವಿಶ್ವನಾಥ್‌ಗೆ ನಿರೀಕ್ಷಣಾ ಜಾಮೀನಿಲ್ಲ

Published:
Updated:

ಬೆಂಗಳೂರು: ಹೆಸರಘಟ್ಟ ಹೋಬಳಿಯ ಮಾದಪ್ಪನಹಳ್ಳಿಯ 32.04 ಎಕರೆ ಸರ್ಕಾರಿ ಜಮೀನು ಕಬಳಿಸುವ ಸಂಚಿನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ.ಜಮೀನು ಕಬಳಿಸುವ ಸಂಚಿಗೆ ಸಂಬಂಧಿಸಿದಂತೆ ಮಾದಪ್ಪನಹಳ್ಳಿಯ ಹರೀಶ್ ಮತ್ತಿತರರು ಸಲ್ಲಿಸಿದ್ದ ಖಾಸಗಿ ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಕೆಲ ದಿನಗಳ ಹಿಂದೆ ಬಂಧಿಸಿದ್ದರು. ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಶಾಸಕರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.ವಿಶ್ವನಾಥ್ ಅವರ ಅರ್ಜಿಯನ್ನು ಬಲವಾಗಿ ವಿರೋಧಿಸಿದ್ದ ಲೋಕಾಯುಕ್ತ ಪೊಲೀಸರು, ಶಾಸಕರು ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಪ್ರಬಲವಾದ ಸಾಂದರ್ಭಿಕ ಸಾಕ್ಷ್ಯಗಳಿವೆ ಎಂದು ವರದಿ ಸಲ್ಲಿಸಿದ್ದರು. `ಶಾಸಕರ ಹಸ್ತಕ್ಷೇಪದಿಂದಲೇ ಪ್ರಕರಣ ನಡೆದಿದೆ. ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ತನಿಖೆಗೆ ಅಡ್ಡಿಯಾಗುತ್ತದೆ' ಎಂದು ಲೋಕಾಯುಕ್ತದ ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದರು.ಈ ಕುರಿತು ಗುರುವಾರ ಆದೇಶ ಹೊರಡಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಶಾಸಕರ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ಪ್ರಕಟಿಸಿದರು.`ಪ್ರಕರಣದಲ್ಲಿ ಅರ್ಜಿದಾರರ ಕೈವಾಡ ಇರುವ ಕುರಿತು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತನಿಖಾ ತಂಡ ತಿಳಿಸಿದೆ. ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಿದಲ್ಲಿ ತನಿಖೆಗೆ ಅಡ್ಡಿಯಾಗುತ್ತದೆ ಎಂಬ ಆತಂಕವೂ ತನಿಖಾ ತಂಡದಿಂದ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದು ಸಾಧ್ಯವಿಲ್ಲ' ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry