ಸೋಮವಾರ, ಅಕ್ಟೋಬರ್ 21, 2019
25 °C

ಶಾಸಕ ಶಿವನಗೌಡರ ಆಡಳಿತ ವ್ಯಾಪಾರೀಕರಣ

Published:
Updated:

ದೇವದುರ್ಗ: ಸ್ಥಳೀಯ ಶಾಸಕ ಕೆ. ಶಿವನಗೌಡ ಅವರು ರಾಜಕೀಯ ಎಂಬುವುದು ವ್ಯಾಪಾರೀಕರಣ ಮಾಡಿಕೊಂಡು ಮೂರು ವರ್ಷದ ಆಡಳಿತ ಅವದಿಯಲ್ಲಿ ಲಾಭಕ್ಕಾಗಿ ಮಾತ್ರ ಶಾಸಕರಾಗಿದ್ದಾರೆ ವಿನಃ ಜನ ಸಾಮಾನ್ಯರ ಜನಪ್ರತಿನಿಧಿಯಾಗಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಪಕ್ಷದ ಪರಿಶಿಷ್ಟ ಪಂಗಡದ ಜಿಲ್ಲಾ ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿ.ಎಂ.ಮೇಟಿ ಆರೋಪಿಸಿದರು.ಬುಧವಾರ ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಸರ್ವಾಧಿಕಾರ ಮತ್ತು ಸೇಡಿನ ಮನೋಭಾವನೆ ಹೊಂದಿದ್ದಾರೆ. ಅಧಿಕಾರ ಶಾಶ್ವತ ಅಲ್ಲ ಎಂಬುವುದನ್ನು ಅರಿಯದೆ ಯಾರನ್ನೂ ಪಕ್ಷದಲ್ಲಿ ಬೆಳೆಯಲು ಬಿಡುವುದಿಲ್ಲ. ತನಗಾಗಿ ಕಷ್ಟಪಟ್ಟವರ ಬಗ್ಗೆ ಕನಿಷ್ಠ ಸೌಜನ್ಯವಾದರೂ ತೋರಲಿಲ್ಲ. ಈ ಕ್ಷೇತ್ರದ ಶಾಸಕರು ಲಾಭಕ್ಕಾಗಿ ಇದ್ದಾರೆ ಹೊರತು ಜನಸಾಮಾನ್ಯರ ಕಷ್ಟ, ಸುಖಗಳಿಗೆ ಇಲ್ಲ ಎಂದು ದೂರಿದರು.ಕಳೆದ ಚುನಾವಣೆಯಲ್ಲಿ ಹಾಲಿ ಶಾಸಕ ಶಿವನಗೌಡರಿಗೆ ಜೆಡಿಎಸ್ ಪಕ್ಷದ ಟಿಕೆಟ್ ದೊರೆಯಲು ನಾನು ತ್ಯಾಗ ಮಾಡಬೇಕಾಯಿತು. ಚುನಾಯಿತಗೊಂಡ ಕೆಲವೇ ದಿನಗಳಲ್ಲಿ ಶಿವನಗೌಡ ನಾಯಕ ಅವರ ನಡೆ, ನುಡಿ ವರ್ತನೆಗಳ ಬಗ್ಗೆ ನನಗೆ ಬೇಸರ ಎನಿಸಿದರೂ ಎಲ್ಲವನ್ನು ಸಹಿಸಿಕೊಂಡರೆ ಅದನ್ನೇ ಶಾಸಕರು ದುರಪಯೋಗ ಪಡಿಸಿಕೊಂಡು ನನ್ನನ್ನು ರಾಜಕೀಯದಿಂದ ದೂರ ಇಡಲು ಆರಂಭಿಸಿದ ನಂತರ ನಾನು ಪಕ್ಷ ಬಿಡಲು ಕಾರಣವಾಯಿತು ಎಂದರು.ಶಿವನಗೌಡ ನಾಯಕ ಅವರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಒಂದು ದಿನವು ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಸಭೆ ಕರೆದು ಸಮಸ್ಯೆ ಕೇಳಿದ ಉದಾಹರಣೆ ಇಲ್ಲ. ಶಿವನಗೌಡ ಅವಶ್ಯಕತೆ ಇದ್ದಾಗ ಮಾತ್ರ ಮಿತ್ರನಾಗುವುದು ನಂತರ ಯಾವಾಗ ಶತ್ರುವಾಗುತ್ತಾರೆ ಎಂಬುವುದು ತಿಳಿಯುತ್ತಿಲ್ಲ. ಶಾಸಕರು ಪಕ್ಷ ದ್ರೋಹ, ಮಿತ್ರ ದ್ರೋಹ ಮತ್ತು ವಿಶ್ವಾಸ ದ್ರೋಹಕ್ಕೆ ಹೆಸರು ಪಡೆದಿದ್ದಾರೆ ಎಂದು ಆಕ್ರೋಶದಿಂದ ನುಡಿದರು.ರಾಜ್ಯದಲ್ಲಿಯೇ ವಿವಿಧ ರಂಗದಲ್ಲಿ ತೀರ ಹಿಂದೆ ಉಳಿದಿರುವ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಚಿಂತಿಸಿದೆ ತನ್ನ ವೈಯಕ್ತಿಕ ಲಾಭಕ್ಕಾಗಿ ತಾಲ್ಲೂಕು ತುಂಬ ಮದ್ಯದ ಅಂಗಡಿಗಳನ್ನು ತೆರೆದು ತಾಲ್ಲೂಕು ಅನ್ನು ಇನ್ನಷ್ಟು ಹಿಂದೆ ಉಳಿಯುವಂತೆ ಮಾಡಿದ ಕೀರ್ತಿ ಹಾಲಿ ಶಾಸಕರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಅವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು ಎಂದು ಆರೋಪಿಸಿದರು.ಗಣಜಿಲಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ 40 ಎಕರೆ ಜಮೀನು ಹಾಲಿ ಶಾಸಕರ ತಾಯಿ ಹೆಸರಿನಲ್ಲಿ ಇದ್ದು, ಸದರಿ ಜಮೀನನ್ನು ಸಣ್ಣ ನೀರಾವರಿ ಇಲಾಖೆಗೆ ಹೊಸದಾಗಿ ಕೆರೆ ನಿರ್ಮಿಸಲು ನೀಡಿದ ನಂತರ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಈಗ ಅದನ್ನು ಬದಲಾಯಿಸಿ ವಸತಿ ಯೋಜನೆಗೆ ನೀಡಲು ಶಾಸಕರು ಮುಂದಾಗಿರುವುದು ಯಾವ ಲೆಕ್ಕ ಎಂದು ಪ್ರಶ್ನಿಸಿದರು.ಸಂಸದ ಎಸ್.ಫಕೀರಪ್ಪ ಸಹ ತಾಲ್ಲೂಕನ್ನು ಮರೆತಿದ್ದಾರೆ. ತಾಲ್ಲೂಕಿನ ಮತದಾರರರನ್ನು ನಿರ್ಲಕ್ಷ್ಯಿಸಿರುವುದು ಸರಿಯಾದ ಕ್ರಮವಲ್ಲ ಎಂದರು.ಸಣ್ಣ ವಯಸ್ಸಿನಲ್ಲಿ ಅಧಿಕಾರ ಹಿಡಿದ ಕಾರಣ ತಾಲ್ಲೂಕಿನ ಜನರು ಹಾಲಿ ಶಾಸಕರ ಬಗ್ಗೆ ಸಾಕಷ್ಟು ಅಭಿವೃದ್ಧಿಯ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಲಾಭಕ್ಕಾಗಿ ಶಾಸಕರು ಜನರಿಗಾಗಿ ಅಲ್ಲ ಎಂದು ಜನ ಸಾಮಾನ್ಯರಿಗೆ ಗೊತ್ತಾಗಿದೆ ಎಂದು ದೂರಿದರು.ಶಾಸಕರ ದೌರ್ಜನ್ಯ ಮತ್ತು ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಜಿಲ್ಲಾ ಪರಿಶಿಷ್ಟ ಪಂಗಂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದ ಅವರು, ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷರಿಗೆ ಬರೆದ ಪತ್ರವನ್ನು ಪತ್ರಿಕೆಗೆ ಬಿಡುಗಡೆ ಮಾಡಿದರು.

 

ಇವರ ಜತೆಯಲ್ಲಿ ತಾಲ್ಲೂಕು ಎಸ್‌ಟಿ ಮೋರ್ಚಾ ಅಧ್ಯಕ್ಷ ದೇವೀಂದ್ರಪ್ಪನಾಯಕ ಚಿಕ್ಕಹೊನ್ನಕುಣಿ ಅವರೂ ರಾಜೀನಾಮೆ ಸಲ್ಲಿಸಿದ ಪತ್ರವನ್ನು ನೀಡಿದರು. ಮುಂದಿನ ರಾಜಕೀಯ ಕುರಿತು ನಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಸಂಕ್ರಾಂತಿ ಹಬ್ಬದ ನಂತರ ಬೇರೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಪ್ರಕಟಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗೋಪಿ ಮೇಟಿ, ಮುದುಕಪ್ಪ ನಾಯಕ, ಚಂದ್ರಾಮಪ್ಪ, ಜಿಂದಪ್ಪ ನಾಯಕ, ಪಿಡ್ಡಪ್ಪ ನಾಯಕ, ಜಿಂದಾವಲಿ ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)