ಶನಿವಾರ, ಮೇ 8, 2021
24 °C

ಶಾಸಕ ಶ್ರೀರಾಮುಲು ಇಂದು ರಾಜೀನಾಮೆ

ಪ್ರಜಾವಾಣಿ ವಾರ್ತೆ ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: `ಹೈಕಮಾಂಡ್‌ನಿಂದ ಅವಕೃಪೆಗೆ ಒಳಗಾಗಿಯೂ ಪಕ್ಷದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ~ ಎಂಬುದನ್ನು ಮನಗಂಡಿರುವ ರೆಡ್ಡಿ ಸಹೋದರರು ಬಿಜೆಪಿ ತೊರೆಯಲು ನಿರ್ಧರಿಸಿದ್ದು, ಭಾನುವಾರ ಬಿ.ಶ್ರೀರಾಮುಲು ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಲಿದ್ದಾರೆ. ಸೋಮವಾರ ರಾಜೀನಾಮೆ ಸಲ್ಲಿಸಲಿದ್ದಾರೆ.ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡು ಹತಾಶರಾಗಿರುವ ರೆಡ್ಡಿ ಸೋದರರು, ನಂತರ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದರೂ ಯಶಸ್ಸು ಕಾಣದ ಹಿನ್ನೆಲೆಯಲ್ಲಿ, ಪಕ್ಷದಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸುವತ್ತಲೇ ಗಮನ ನೆಟ್ಟಿದ್ದಾರೆ.ಶನಿವಾರವಿಡೀ ನಗರದ ಹವಂಭಾವಿಯಲ್ಲಿರುವ ಜಿ.ಜನಾರ್ದನ ರೆಡ್ಡಿ ಅವರ ನಿವಾಸ `ಕುಟೀರ~ದಲ್ಲಿ `ಸಮಾನ ಮನಸ್ಕ~ ಶಾಸಕರು ಮತ್ತು ಕೆಲವು ಆಪ್ತ ಮುಖಂಡರೊಂದಿಗೆ ರಹಸ್ಯ ಸಭೆ ನಡೆಸಿದ ಶ್ರೀರಾಮುಲು, ಬಿಜೆಪಿಯಲ್ಲಿ ಉಳಿಗಾಲವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟು ತಮ್ಮನ್ನು ಬೆಂಬಲಿಸುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.ಶಾಸಕರಾದ ಹೂವಿನಹಡಗಲಿಯ ಚಂದ್ರಾ ನಾಯ್ಕ, ಹಗರಿ ಬೊಮ್ಮನಹಳ್ಳಿಯ ನೇಮಿರಾಜ ನಾಯ್ಕ, ಸಿರುಗುಪ್ಪದ ಎಂ.ಎಸ್. ಸೋಮಲಿಂಗಪ್ಪ, ಕಂಪ್ಲಿಯ ಸುರೇಶಬಾಬು, ಜಿ.ಸೋಮಶೇಖರರೆಡ್ಡಿ, ಸಂಸದರಾದ ಜೆ.ಶಾಂತಾ, ಸಣ್ಣಫಕೀರಪ್ಪ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಸಭೆಯಲ್ಲಿ ಭಾಗವಹಿಸ್ದ್ದಿದರು. ಶಾಸಕರಾದ ಕೂಡ್ಲಿಗಿಯ ನಾಗೇಂದ್ರ, ಹೊಸಪೇಟೆಯ ಆನಂದ್ ಸಿಂಗ್ ಹಾಗೂ ದಾವಣಗೆರೆ ಜಿಲ್ಲೆ ಹರಪನಹಳ್ಳಿ ಶಾಸಕರಾಗಿರುವ ಜಿ.ಕರುಣಾಕರ ರೆಡ್ಡಿ ಸಭೆಯಲ್ಲಿ ಭಾಗವಹಿಸಿಲ್ಲ.

 

ಕೊಪ್ಪಳದಿಂದ ಸ್ಪರ್ಧೆ ಸಂಭವ

ಬಳ್ಳಾರಿ: ಭಾನುವಾರ ಅಥವಾ ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿರುವ ಬಿ.ಶ್ರೀರಾಮುಲು, ಇದೇ 26ರಂದು ನಡೆಯಲಿರುವ ಕೊಪ್ಪಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಥವಾ ಅವಕಾಶ ದೊರೆತಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ.ಜಿ.ಜನಾರ್ದನ ರೆಡ್ಡಿ ನಿವಾಸದಲ್ಲಿ ರಾಜಕೀಯ ಭವಿಷ್ಯದ ಬಗ್ಗೆ ಚರ್ಚಿಸಲು ಸಭೆ ಸೇರಿರುವ ಶ್ರೀರಾಮುಲು ಹಾಗೂ ಬೆಂಬಲಿಗರು, ಕೊಪ್ಪಳ ಉಪ ಚುನಾವಣೆಯಲ್ಲಿ ಸ್ಫರ್ಧಿಸುವ ಮೂಲಕ ಬಲಾಬಲ ಪ್ರದರ್ಶಿಸುವ ಬಗ್ಗೆ ತೀವ್ರವಾಗಿ ಚರ್ಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲೇ ಕೊಪ್ಪಳ ಉಪ ಚುನಾವಣೆ ಎದುರಿಸಬೇಕು ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ತಕ್ಷಣಕ್ಕೇ ತಕ್ಕ ಪಾಠ ಕಲಿಸಲು ಸದವಕಾಶವಿದ್ದು, ಶ್ರೀರಾಮುಲು ಏಕೆ ಸ್ಫರ್ಧಿಸಬಾರದು? ಎಂಬ ಕುರಿತು ಗಹನವಾದ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.ತಮ್ಮ ರಾಜಕೀಯ ಹಿನ್ನಡೆಗೆ ಕಾರಣವಾಗಿರುವ ಯಡಿಯೂರಪ್ಪ ಅವರ ನಾಯಕತ್ವಕ್ಕೇ ಪೆಟ್ಟು ನೀಡಿದರಾಯಿತು ಎಂಬ ನಿಲುವನ್ನೂ ಹೊಂದಿರುವ ರೆಡ್ಡಿ ಸೋದರರು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ಬಾಕಿ ಇದೆ ಎನ್ನಲಾ ಗಿದೆ. ಬಳ್ಳಾರಿಯವರೇ ಆಗಿರುವ ಎನ್.ಆರ್. ಸೂರ್ಯನಾರಾಯಣ ರೆಡ್ಡಿ ಜೆಡಿಎಸ್‌ನಿಂದ ಸ್ಫರ್ಧಿಸಲಾರೆ ಎಂದು ಹೇಳಿದ್ದು, ಈವರೆಗೆ ಜೆಡಿಎಸ್ ಅಭ್ಯರ್ಥಿಯನ್ನು ಅಂತಿಮಗೊಳಿಸದೆ ಇರುವುದು ಶ್ರೀರಾಮುಲು ಸ್ಫರ್ಧೆಯ ಕುರಿತು ಸೂಚನೆ ನೀಡುತ್ತಿವೆ.ನಾಗಪುರಕ್ಕೆ ಸಚಿವರು

ಬೆಂಗಳೂರು: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಎದುರಿಸಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮೇಲೆ ಒತ್ತಡ ಹೇರಲು ಕೆಲ ಆಪ್ತ ಸಚಿವರು ಶನಿವಾರ ನಾಗಪುರಕ್ಕೆ ತೆರಳಿದ್ದಾರೆ.

ಸಚಿವರಾದ ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ಲಕ್ಷ್ಮಣ ಸವದಿ ನಾಗ್ಪುರಕ್ಕೆ ತೆರಳಿದ್ದಾರೆ.ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸಬೇಕೆಂದು ಈ ಮುಖಂಡರು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.ಇದಕ್ಕೂ ಮುನ್ನ ಯಡಿಯೂರಪ್ಪ ಮನೆಯಲ್ಲಿ ಸಭೆ ನಡೆಸಿ, ಗಡ್ಕರಿ ಅವರಿಗೆ ಮನವಿ ಸಲ್ಲಿಸುವ ಕುರಿತು ನಿರ್ಧರಿಸಲಾಯಿತು.ಸದಸ್ಯತ್ವಕ್ಕೆ ರಾಜೀನಾಮೆ: ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ತೆರಳಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿರುವ ಶ್ರೀರಾಮುಲು, ಸೋಮವಾರದ ನಂತರವಷ್ಟೇ ಹೊಸ ಪಕ್ಷ ಸ್ಥಾಪನೆ ವಿಷಯ ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.ಇಷ್ಟೆಲ್ಲ ಬೆಳವಣಿಗೆಗಳು ಸಂಭವಿಸಿದರೂ, ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ರಾಮಲಿಂಗಪ್ಪ ಮತ್ತಿತರರನ್ನು ಆಹ್ವಾನಿಸುವ ಗೋಜಿಗೇ ಹೋಗದ ರೆಡ್ಡಿ ಸೋದರರು, ಮಹಾನಗರ ಪಾಲಿಕೆಯ ಕೆಲವು ಸದಸ್ಯರು ಮತ್ತು ಜಿಲ್ಲಾ ಪಂಚಾಯಿತಿಯ ಕೆಲವು ಸದಸ್ಯರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.ಶ್ರೀರಾಮುಲು ಅವರಿಗೆ ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯ ಮಾತ್ರವಲ್ಲದೆ, ಅಲ್ಪಸಂಖ್ಯಾತರು, ಲಿಂಗಾಯತ ಸಮುದಾಯದ ಬೆಂಬಲವೂ ಇದ್ದು, ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೇ ಮೀಸಲಿರುವುದರಿಂದ ಚುನಾವಣೆಯಲ್ಲೂ ಗೆಲುವು ಸಾಧಿಸಬಹುದು ಎಂದು ನಂಬಿರುವ ಜನಾರ್ದನ ರೆಡ್ಡಿ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲೂ ಶ್ರೀರಾಮುಲು ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.ಕಾದು ನೋಡುವ ತಂತ್ರ: ಮೊದಲು ಕೇವಲ ಶ್ರೀರಾಮುಲು ಅವರಿಂದ ರಾಜೀನಾಮೆ ಕೊಡಿಸಿ, ಕಾದು ನೋಡುವ ತಂತ್ರವನ್ನೂ ಅನುಸರಿಸಲಿರುವ ರೆಡ್ಡಿ ಸೋದರರು, ಹೈಕಮಾಂಡ್ ಮಾತುಕತೆಗೆ ಆಹ್ವಾನಿಸಿ ಒಪ್ಪಂದಕ್ಕೆ ಸಿದ್ಧವಾದರೆ ಬಿಜೆಪಿಯಲ್ಲೇ ಮುಂದುವರಿಯುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಪಕ್ಷದ ಮುಖಂಡರು ರಾಜೀನಾಮೆ ಬೆದರಿಕೆಗೆ ಬಗ್ಗದಿದ್ದರೆ ನಂತರದ ದಿನಗಳಲ್ಲಿ ಇಬ್ಬರು ಸಂಸದರು, ಇತರ ಐದಾರು ಜನ ಆಪ್ತ ಶಾಸಕರೊಂದಿಗೆ ತಾವೂ ರಾಜೀನಾಮೆ ನೀಡಲಿದ್ದು, ಪ್ರತ್ಯೇಕ ಪಕ್ಷ ರಚಿಸಿ, `ಈಗಲ್ಲದಿದ್ದರೂ ಮುಂದೊಂದು ದಿನ ಯಶಸ್ಸು ಪಡೆಯಬಹುದು~ ಎಂಬ ವಿಶ್ವಾಸ ಹೊಂದಿದ್ದಾರೆ ಎಂದು ಅವರ ಆಪ್ತ ವಲಯ ಸ್ಪಷ್ಟಪಡಿಸಿದೆ.ಅಪಸ್ವರ: `ಮೊದಲು ಎಲ್ಲ ಶಾಸಕರಿಂದ ರಾಜೀನಾಮೆ ಕೊಡಿಸಿದರಾಯಿತು~ ಎಂದೇ ನಿರ್ಧರಿಸಿದ್ದ ರೆಡ್ಡಿ, ಇಬ್ಬರು ಶಾಸಕರಿಂದ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಶ್ರೀರಾಮುಲು ಒಬ್ಬರಿಂದಲೇ ರಾಜೀನಾಮೆ ಕೊಡಿಸುವ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ ಎಂದೂ ಬಲ್ಲ ಮೂಲಗಳು ತಿಳಿಸಿವೆ.ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ, 2009ರ ಕೊನೆಯಲ್ಲಿ ರೆಡ್ಡಿ ಸೋದರರಿಂದಲೇ ಭಿನ್ನಮತದ ಬೆದರಿಕೆ ಎದುರಾಗಿದ್ದಲ್ಲದೆ, ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಮುಖ್ಯಮಂತ್ರಿಯನ್ನೇ ಬದಲಿಸುವ ಮಟ್ಟಿಗೆ ಕಾರಣವಾಗಿರುವ ಬಳ್ಳಾರಿಯ ರಾಜಕೀಯ ಇದೀಗ ಮತ್ತೆ ರಾಜ್ಯದ ಗಮನ ಸೆಳೆಯುತ್ತಿರುವುದು ವಿಶೇಷ.ರೆಡ್ಡಿ ಸೋದರರ ಈ ತಂತ್ರಗಾರಿಕೆಯ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿ ಶ್ರೀರಾಮುಲು ಪತ್ರಿಕಾ ಗೋಷ್ಠಿಯನ್ನೂ ಕರೆದಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.