ಭಾನುವಾರ, ಮೇ 22, 2022
26 °C

ಶಾಸಕ, ಸಂಸದರ ಎದುರೇ ಕಾಂಗ್ರೆಸಿಗರ ರಂಪಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ಇಲ್ಲಿಯ ಪುರಸಭೆಯ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಯಾರಾಗಬೇಕು ಎಂದು ನಿರ್ಧರಿಸಲು ಶಾಸಕ ವಿ.ಶ್ರೀನಿವಾಸಪ್ರಸಾದ್ ಮತ್ತು ಸಂಸದ ಆರ್.ಧ್ರುವನಾರಾಯಣ ಸಮ್ಮುಖದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಕಾಂಗ್ರೆಸಿಗರ ನಡುವೆ ರಂಪಾಟ ನಡೆದು ಸಭೆಯನ್ನು ಶನಿವಾರಕ್ಕೆ ಮುಂದೂಡಿದ ಘಟನೆ ಶುಕ್ರವಾರ ಸಂಜೆ ನಡೆಯಿತು.27 ಸದಸ್ಯ ಬಲದ ಪುರಸಭೆಯಲ್ಲಿ ಯಾವ ಪಕ್ಷವೂ ಬಹುಮತ ಹೊಂದಿಲ್ಲ. ಹಾಗಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟದ ಒಳ ಒಪ್ಪಂದದಂತೆ ತಲಾ 10 ತಿಂಗಳ ಅಧಿಕಾರ ಹಂಚಿಕೆಯ ಸೂತ್ರದಂತೆ ಉಳಿದಿರುವ 8 ತಿಂಗಳ ಅವಧಿಗೆ ಕಾಂಗ್ರೆಸ್ ಅಭ್ಯರ್ಥಿ ನಿರ್ಧರಿಸಲು ಪ್ರವಾಸಿ ಮಂದಿರದಲ್ಲಿ ಸಭೆ ನಡೆಯಿತು. ಕಳೆದ 10 ತಿಂಗಳ ಅವಧಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪುರಸಭೆ ಅಧ್ಯಕ್ಷರಾಗಿದ್ದರು. ಈಗ ಕಾಂಗ್ರೆಸ್ ಸರದಿ ಬಂದಿದ್ದು, ಕಾಂಗ್ರೆಸ್ ಚಿಹ್ನೆ ಮೇಲೆ ಗೆದ್ದಿರುವ ಸದಸ್ಯರನ್ನು ಮಾತ್ರವೇ ಪರಿಗಣಿಸಬೇಕು ಎಂದು ಸದಸ್ಯರಾದ ಎನ್.ಸಿ.ಶ್ರೀಕಂಠಜೋಯಿಸ್, ಕೆ.ಶ್ರೀಕಂಠ, ಅನುಸೂಯ ಪ್ರತಿಪಾದಿಸಿದರು. ಇದಕ್ಕೆ ಜೆಡಿಎಸ್ ಸದಸ್ಯೆ ಸರಸ್ವತಿ ಮತ್ತು ಮುಖಂಡ  ಎನ್.ನರಸಿಂಹಸ್ವಾಮಿ ಸಹ ದನಿಗೂಡಿಸಿದರು. ಆದರೆ, ಕಾಂಗ್ರೆಸ್ ವರಿಷ್ಠರ ನಿಲುವು ಜೆಡಿಎಸ್‌ನಲ್ಲಿ ಗೆದ್ದು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಸಿ.ಎಂ.ಶಂಕರ್ ಅವರ ಪರವಾಗಿದೆ ಎಂದು ತಿಳಿಯುತ್ತಿದ್ದಂತೆ ಕಾಂಗ್ರೆಸ್‌ನ ಶ್ರೀಕಂಠಜೋಯಿಸ್ ಮತ್ತು ಜೆಡಿಎಸ್ ಮುಖಂಡ ಎನ್.ನರಸಿಂಹಸ್ವಾಮಿ ಸಭೆಯಲ್ಲಿ ಕೂಗಾಡಿ, ಹೊರ ಬಂದರು. ಇತ್ತ ಹೊರ ಬರುತ್ತಿದ್ದಂತೆ ಜೋಯಿಸ್ ಮತ್ತು ಮಾಜಿ ಅಧ್ಯಕ್ಷ ಎಂ.ಶ್ರೀಧರ್ ಮಧ್ಯೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಅಷ್ಟರಲ್ಲಿ ಇತರೆ ಕಾರ್ಯಕರ್ತರು ಸಮಾಧಾನಪಡಿಸಿದರು.ಜೆಡಿಎಸ್ ವರಿಷ್ಠೆ ಮತ್ತು ಸದಸ್ಯೆ ಸರಸ್ವತಿ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಚಿಹ್ನೆ ಮೇಲೆ ಗೆದ್ದಿರುವ ಯಾರನ್ನೇ ಅಭ್ಯರ್ಥಿ ಮಾಡಿದರೂ ಜೆಡಿಎಸ್ ಬೆಂಬಲ ನೀಡುತ್ತದೆ. ಬೇರೆ ಯಾರೇ ಆದರೂ ನಮ್ಮ ಪಕ್ಷದ ಬೆಂಬಲ ಸಿಗುವುದಿಲ್ಲ ಎಂದು ಹೇಳಿದರು. ಈ ನಡುವೆ ಕಾಂಗ್ರೆಸ್‌ನ ಕೆಲ ಸದಸ್ಯರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.