ಭಾನುವಾರ, ಏಪ್ರಿಲ್ 18, 2021
32 °C

ಶಾಸಕ- ಸಚಿವರ ನಡುವೆ ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ವಾಸವಿ ಮಹಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಪತ್ರಕರ್ತರ ಸಮ್ಮೇಳನಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಅವರನ್ನು ಸ್ಥಳೀಯ ಶಾಸಕ ತಿಪ್ಪೇಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆಯಿತು.ಸಮಾರಂಭದ ವೇದಿಕೆಗೆ ಆಗಮಿಸಿದ ಸಚಿವರನ್ನು ವೇದಿಕೆಯ ಕೆಳಭಾಗದಲ್ಲಿ ನಿಂತಿದ್ದ ಶಾಸಕರು, `ನನ್ನ ಅನುಮತಿ ಇಲ್ಲದೇ ನನ್ನ ಕ್ಷೇತ್ರಕ್ಕೆ ನೀನು ಹೇಗೆ ಬಂದೆ~ ಎಂದು ವಾಗ್ವಾದಕ್ಕೆ ಇಳಿದರು. ಇದಕ್ಕೆ ಸಚಿವ ನಾರಾಯಣಸ್ವಾಮಿ ಇದು ಖಾಸಗಿ ಕಾರ್ಯಕ್ರಮವಾಗಿದ್ದರಿಂದ ಬಂದಿದ್ದೇನೆ. ಆದಾಗ್ಯೂ ನಿನ್ನೆ ನಿಮಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದೇನೆ ಎಂದು ಸಮಜಾಯಿಷಿ ನೀಡಲು ಮುಂದಾದರು.ಸಚಿವರ ಮಾತನ್ನು ಆಲಿಸದೇ ತಾಳ್ಮೆ ಕಳೆದುಕೊಂಡ ಶಾಸಕರು ಸಭೆಯಿಂದ ನಿರ್ಗಮಿಸಿದರು. ಮರುಕ್ಷಣವೇ ಸಚಿವ ನಾರಾಯಣಸ್ವಾಮಿ ಬೆಂಬಗಲಿಗರು ವೇದಿಕೆ ಮುಂಭಾಗದಲ್ಲಿ ಸಚಿವರಿಗೆ ಜಯವಾಗಲಿ, ಶಾಸಕರಿಗೆ ಧಿಕ್ಕಾರ ಎಂದು ಕೂಗಿದರು. ಈ ಸಂದರ್ಭದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ನಂತರ ಸಚಿವರು ತಮ್ಮ ಬೆಂಬಲಿಗರನ್ನು ಸಮಾಧಾನ ಪಡಿಸಿ ಕಾರ್ಯಕ್ರಮ ನಡೆಯಲು ಅನುವು ಮಾಡಿಕೊಟ್ಟರು. ಸಭೆಗೆ ಆಗಮಿಸಿದ್ದ ಸಾರ್ವಜನಿಕರು ಹಾಗೂ ಪೊಲೀಸರು ಶಾಸಕ- ಸಚಿವರ ವಾಗ್ವಾದಕ್ಕೆ ಮೂಕ ಪ್ರೇಕ್ಷಕರಾದರು.ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, `ನಾನು ಯಾರ ಕೈ, ಕಾಲುಗಳನ್ನು ಹಿಡಿದು ಪಕ್ಷದ ಟಿಕೆಟ್ ಪಡೆದಿಲ್ಲ. ಮೂರ‌್ನಾಲ್ಕು ಬಾರಿ ವಿಧಾನಸಭೆಗೆ ಆರಿಸಿ ಬಂದು ಸಚಿವನಾಗಿದ್ದೇನೆ. ನನಗೆ ಪಕ್ಷ ವಹಿಸಿದ ಖಾತೆಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಇಲಾಖೆ ವತಿಯಿಂದ ಚಳ್ಳಕೆರೆ ಕ್ಷೇತ್ರಕ್ಕೆ ವಿವಿಧ ಯೋಜನೆಗಳಿಗೆ ಸುಮಾರು ರೂ 5 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ.  ನಾನೂ ಸಹ ಹೋರಾಟದಿಂದಲೇ ಮುಂದೆ ಬಂದವನು. ಯಾವುದೋ ಒಂದು ವರ್ಗಕ್ಕೆ, ವ್ಯಕ್ತಿಗೆ ಹೆದರಿ ಓಡಿ ಹೋಗುವ ಜಾಯಮಾನ ನನ್ನದಲ್ಲ. ಹೋರಾಟದಿಂದ ಬಂದವರಿಗೆ ಹೆದರಿಕೆ ಇರುವುದಿಲ್ಲ ಎಂದರು.ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಿರಿಯೂರು ಕ್ಷೇತ್ರದ ಶಾಸಕ ಡಿ. ಸುಧಾಕರ್, ಘಟನೆಗೆ ಸಚಿವರ ಕ್ಷಮೆ ಕೋರಿ, ವಿಷಾದ ವ್ಯಕ್ತಪಡಿಸಿದರು.ಸಭೆ ಮುಗಿದ ನಂತರ ದಲಿತ ಸಂಘಟನೆಗಳ ಮುಖಂಡರು ಹಾಗೂ ಸಚಿವರ ಬೆಂಬಲಿಗರು ವೇದಿಕೆ ಇಳಿಯುತ್ತಿದ್ದ ಸಚಿವರನ್ನು ತಡೆದು ಇಲ್ಲಿ ನಡೆದ ಘಟನೆ ಇಡೀ ಸಮುದಾಯಕ್ಕೆ ಆದ ಅವಮಾನ. `ನಾವು, ನಿಮ್ಮ ಜತೆ ಮಾತನಾಡಬೇಕು~ ಎಂದು ಪಟ್ಟು ಹಿಡಿದರು. ಸಚಿವರಿಗೇ ಸಾರ್ವಜನಿಕವಾಗಿ ನಿಂದಿಸಿದರೆ, ಇನ್ನು ಸಾಮಾನ್ಯ ಜನರ ಗತಿ ಏನು? ಎಂದು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.