ಶಾಸನಗಳ ಪುನರ್‌ಪರಿಶೀಲನೆ ಅಗತ್ಯ:ಸಂಶೋಧಕ ಡಾ.ಬಿ. ರಾಜಶೇಖರಪ್ಪ ಅಭಿಪ್ರಾಯ

7

ಶಾಸನಗಳ ಪುನರ್‌ಪರಿಶೀಲನೆ ಅಗತ್ಯ:ಸಂಶೋಧಕ ಡಾ.ಬಿ. ರಾಜಶೇಖರಪ್ಪ ಅಭಿಪ್ರಾಯ

Published:
Updated:

 ಚಿತ್ರದುರ್ಗ: ಶಾಸನಗಳ ಪುನರ್ ಪರಿಶೀಲನೆಯಾದಾಗ ಸತ್ಯ ಸಂಗತಿಗಳ ಬಗ್ಗೆ ಹೊಸಹೊಸ ಅಂಶಗಳು, ಆಯಾಮಗಳು ಬೆಳಕಿಗೆ ಬರುತ್ತವೆ ಎಂದು ನಿವೃತ್ತ ಪ್ರಾಂಶುಪಾಲ, ಹಿರಿಯ ಸಂಶೋಧಕ ಡಾ.ಬಿ. ರಾಜಶೇಖರಪ್ಪ ತಿಳಿಸಿದರು.



 ನಗರದ ಮದಕರಿ ನಾಯಕ ವೃತ್ತದ ಕಲಾ ಕಾಲೇಜಿನ ಸ್ನಾತಕೋತ್ತರ ವಿಭಾಗದ (ಕಾಮರ್ಸ್ ಬ್ಲಾಕ್) ಕೊಠಡಿಯಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಕಲಾ ಕಾಲೇಜು ಹಾಗೂ ಸ್ನಾತಕೋತ್ತರ ಇತಿಹಾಸ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ `ಚಿತ್ರದುರ್ಗದ ಇತಿಹಾಸ-ಕೆಲವು ಹೊಸ ನೋಟಗಳು~ ವಿಷಯ ಕುರಿತ ದತ್ತಿ ಉಪನ್ಯಾಸದಲ್ಲಿ ಅವರು ಮಾತನಾಡಿದರು. 



 ಕರ್ನಾಟಕದ ಕೆಲವೇ ಕೆಲವು ಪ್ರಸಿದ್ಧ ಇತಿಹಾಸವಿರುವ ಸ್ಥಳಗಳಲ್ಲಿ ಚಿತ್ರದುರ್ಗ ಒಂದು. ಇಲ್ಲಿನ ಚಂದ್ರವಳ್ಳಿಗೆ ಅತ್ಯಂತ ಪುರಾತನ ಐತಿಹ್ಯವಿದೆ. ಮಯೂರವರ್ಮ ಈ ಕೆರೆಯನ್ನು ಕಟ್ಟಿಸಿದ ಎಂದು ಶಾಸನದಲ್ಲಿ ಉಲ್ಲೇಖವಾಗಿದೆ. ಈತನ ಆಳ್ವಿಕೆ ಕಾಲದಲ್ಲಿ ಸೂಳಗಲ್ (ಚಂದ್ರವಳ್ಳಿ) ರಾಜಧಾನಿ ಕೂಡ ಆಗಿತ್ತು.

 

1984ರಲ್ಲಿ ಇದನ್ನು ತಾವು ಪುನರ್ ಪರಿಶೀಲಿಸಿದಾಗ ಸೂಳಗಲ್ ಎನ್ನುವುದು ಸರಿಯಾದ ಮಾಹಿತಿ ಮತ್ತು ಕನ್ನಡದ ಹೊಸ ರಾಜ್ಯ ಸ್ಥಾಪನೆಗೆ ಇಂಬು ಕೊಟ್ಟಂತ ಪ್ರಥಮ ಸ್ಥಳವಾಗಿದೆ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.



ಕ್ರಿ.ಶ. 7ನೇ ಶತಮಾನದಲ್ಲಿ ಪಂಡರಹಳ್ಳಿಯ ಗಂಜಿಗಟ್ಟೆಯ ಶಾಸನದಲ್ಲಿ ಸೂಳ್‌ಗಲ್ ಸ್ಥಳ ಕದಂಬರ ರಾಜಧಾನಿ ಎಂದು ಆಗಿನ ಏಕೈಕ ಶಾಸನಗಾರ್ತಿ ವಿಜಯಬ್ಬೆ ತನ್ನ ಸಂಶೋಧನೆಯಲ್ಲಿ ತಿಳಿಸಿದ್ದಾರೆ. ಕದಂಬ ಎಂಬ ಹೆಸರನ್ನು ಕದಂಬವಾಡಿ, ಕದಂಬಡಿಗೆ ಸಾವಿರ ಎಂಬುದಾಗಿ ಕರೆಯುವುದುಂಟು.



ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಬಳಿಯ ಹಿರೇಕೊಗಲೂರಿನ ಕ್ರಿ.ಶ. 1049ರ ಶಾಸನದಲ್ಲಿ ಚಿತ್ರದುರ್ಗದ ಪಾಳೇಗಾರರ ಹೆಸರು ಮೆದಕೇರಿ ನಾಯಕ ಎನ್ನುವುದು ತಿಳಿದು ಬಂದಿದೆ. ಚಿತ್ರದುರ್ಗಕ್ಕೆ ಭರಮಣ್ಣನಾಯಕನ ಆಳ್ವಿಕೆಯಲ್ಲಿ 20 ಕೆರೆ, ದೇವಾಲಯಗಳು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಜಗಳೂರಿನ ಮಠದ ದ್ಯಾಮವ್ವನಹಳ್ಳಿಯನ್ನು ಕ್ರಿ.ಶ. 1711ರಲ್ಲಿ ರಾಘವೇಂದ್ರ ಸ್ವಾಮೀಜಿ ಅವರ ಮೂರನೇ ತಲೆಮಾರಿನ ಸುಮತೀಂದ್ರ ಸ್ವಾಮೀಜಿ ಅವರಿಗೆ ದಾನವಾಗಿ ನೀಡಿದ್ದ ಎಂದು ವಿವರಿಸಿದರು.



ಈ ಪ್ರಾಂತ್ಯವನ್ನು ಆಳಿದವರಲ್ಲಿ ಮೆದಕೇರಿ ನಾಯಕರ ಹೆಸರಿನ ಆರು ಪಾಳೇಗಾರರು ಬರುತ್ತಾರೆ. ಆದರೆ, ಒಬ್ಬನೇ ಮೆದಕೇರಿ ನಾಯಕ ಎನ್ನುವ ಅಭಿಪ್ರಾಯ ಇಲ್ಲಿನ ಅನೇಕ ಜನರಲ್ಲಿದೆ ಎಂದು ನುಡಿದರು.

ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ಆಂಧ್ರ ಮೂಲದಿಂದ ಆಗಮಿಸಿದರು ಎನ್ನುವ ಪ್ರತೀತಿ ಇದೆ.

 

ಆದರೆ, ಗುರುತಿಪ್ಪೇರುದ್ರಸ್ವಾಮಿ ಅವರ ಮೂಲನಾಮ ರುದ್ರಮುನಿ ಸ್ವಾಮಿಗಳು. ಇವರು ತಮಿಳುನಾಡಿನ ತಿರುವಣ್ಣಾಮಲೈನಿಂದ ಮೈಸೂರು ಬಳಿಯ ಯಳಂದೂರು ಮಾರ್ಗವಾಗಿ ಪಾವಗಡಕ್ಕೆ ಬಂದು, ಅಲ್ಲಿಂದ ರಾಯದುರ್ಗಕ್ಕೆ ಆಗಮಿಸಿ ನಾಯಕನಹಟ್ಟಿ ತಲುಪುತ್ತಾರೆ.

 

ಇದು 16ನೇ ಶತಮಾನದ ಪೂರ್ವಾರ್ಧದ ಕೊನೇವರೆಗೂ ಇದ್ದ ಯಡಿಯೂರು ಸಿದ್ಧಲಿಂಗೇಶ್ವರ ಅವರಿಂದ ತಿಳಿದು ಬರುತ್ತದೆ ಎಂದು ವಿವರಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಬದಲಾವಣೆ ಕಾಣಬೇಕಾದರೆ ದತ್ತಿ ಉಪನ್ಯಾಸದಿಂದ ಮಾತ್ರ ಸಾಧ್ಯ. ಸಾಂಕೇತಿಕ ಕಾರ್ಯಕ್ರಮದಿಂದ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.



ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ವಿ. ಸುರೇಶ ಗುಪ್ತಾ ಅಧ್ಯಕ್ಷತೆ ವಹಿಸಿದ್ದರು. ಕೆ. ವೆಂಕಣ್ಣಾಚಾರ್, ಕೆ.ಆರ್. ರಮಾದೇವಿ ದತ್ತಿ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ಗುಡ್ಡದೇಶ್ವರಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry