ಶಾಸನಸಭೆಯಲ್ಲೂ ದುಶ್ಯಾಸನರು

7

ಶಾಸನಸಭೆಯಲ್ಲೂ ದುಶ್ಯಾಸನರು

Published:
Updated:

ನವದೆಹಲಿ: ರಾಜಧಾನಿಯಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವುದರ ಜೊತೆಗೆ ಇಂಥ ಪೈಶಾಚಿಕ ಕೃತ್ಯದ ವಿರುದ್ಧ ಕಠಿಣ ಕಾನೂನನ್ನೂ ಜಾರಿಗೆ ತರಬೇಕು ಎಂಬ ಕೂಗು ಕೂಡ ಕೇಳಿ ಬರುತ್ತಿದೆ. ಆದರೆ, ಕಾನೂನನ್ನು ರೂಪಿಸಬೇಕಾದ ನಮ್ಮ ಹಲವು ಜನಪ್ರತಿನಿಧಿಗಳೇ ಅತ್ಯಾಚಾರ ಸೇರಿದಂತೆ ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿರುವ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ.ಆರು ಶಾಸಕರು ಅತ್ಯಾಚಾರ ನಡೆಸಿರುವ  ಆರೋಪ ಎದುರಿಸುತ್ತಿದ್ದಾರೆ. ಇವರಲ್ಲಿ ಮೂವರು ಉತ್ತರ ಪ್ರದೇಶದ ಸಮಾಜವಾದಿ ಪಕ್ಷಕ್ಕೆ ಸೇರಿದವರು. ಉಳಿದ ಮೂವರು  ಉತ್ತರಪ್ರದೇಶದ ಬಿಎಸ್‌ಪಿ, ಗುಜರಾತ್‌ನ ಬಿಜೆಪಿ ಮತ್ತು  ಆಂಧ್ರದ ತೆಲುಗುದೇಶಂ ಪಕ್ಷಕ್ಕೆ ಸೇರಿದವರು.ವಿವಿಧ ರಾಜ್ಯಗಳ 36 ಶಾಸಕರು ಮಹಿಳೆಯರ ಜೊತೆ ಅನುಚಿತ ವರ್ತನೆ, ಮಹಿಳೆಯರ ಮೇಲೆ ಹಲ್ಲೆ ಸೇರಿದಂತೆ ಇತರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ತಲಾ ಐವರು ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಮೂವರು   ಎಸ್‌ಪಿಗೆ ಸೇರಿದವರು...ಚುನಾವಣೆಯ ಕಾಲದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ವಯಂಪ್ರೇರಿತರಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಎಲ್ಲ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಈ ಪ್ರಮಾಣಪತ್ರಗಳ ಅಧ್ಯಯನ ನಡೆಸಿರುವ ದೇಶದ ಪ್ರಮುಖ ಸ್ವಯಂ ಸೇವಾ ಸಂಸ್ಥೆಯಾದ `ಪ್ರಜಾಪ್ರಭುತ್ವ ಸುಧಾರಣಾ ಒಕ್ಕೂಟ' (ಎಡಿಆರ್)  ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ವಿವಿಧ ರಾಜಕೀಯ ಪಕ್ಷಗಳ ಶಾಸಕರು ಹಾಗೂ ಸಂಸದರ ವಿವರಗಳನ್ನು ಬಯಲುಗೊಳಿಸಿದೆ.ಮೊದಲ ಸ್ಥಾನ: ಮಹಿಳೆ ವಿರುದ್ಧ ಅಪರಾಧ ಎಸಗಿರುವ ಆರೋಪ ಹೊತ್ತ ಹೆಚ್ಚು ಶಾಸಕರನ್ನು ಹೊಂದಿರುವ ರಾಜ್ಯಗಳ  ಪಟ್ಟಿಯಲ್ಲಿ ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ.ಅಲ್ಲಿನ 9 ಶಾಸಕರ ವಿರುದ್ಧ ಇಂತಹ ಆರೋಪಗಳಿವೆ. ನಂತರದಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳ ಇದೆ. ಈ ಎರಡೂ ರಾಜ್ಯಗಳ ತಲಾ ಏಳು ಶಾಸಕರು ಆಪಾದನೆಗಳನ್ನು ಎದುರಿಸುತ್ತಿದ್ದಾರೆ. ತಮಿಳುನಾಡಿನ ಸೇಲಂ ಕ್ಷೇತ್ರದ ಎಡಿಎಂಕೆಯ ಸಂಸತ್ ಸದಸ್ಯ ಸೆಮ್ಮಲೈ. ಎಸ್  ಮತ್ತು ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದ ಎಐಟಿಸಿಯ ಸಂಸದ ಅಧಿಕಾರಿ ಸುವೆಂಡು ಅವರು ಕೂಡ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಾವು ಎದುರಿಸುತ್ತಿರುವ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ.ಚುನಾವಣೆಯಲ್ಲಿ ಕಳಂಕಿತರು

ಪೈಪೋಟಿಗೆ ಬಿದ್ದವರಂತೆ ರಾಜಕೀಯ ಪಕ್ಷಗಳು ಕೂಡ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳನ್ನು ನಿರಂತರವಾಗಿ ಕಣಕ್ಕಿಳಿಸುತ್ತಿವೆ. ಐದು ವರ್ಷಗಳ ಅವಧಿಯಲ್ಲಿ ವಿವಿಧ ರಾಜಕೀಯ ಪಕ್ಷಗಳು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 27 ಮಂದಿ ಅತ್ಯಾಚಾರ ನಡೆಸಿರುವ ಆರೋಪ ಹೊತ್ತಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇವರಲ್ಲಿ 7 ಮಂದಿ ಸ್ವತಂತ್ರ ಅಭ್ಯರ್ಥಿಗಳು. ಅತ್ಯಾಚಾರ ಹೊರತಾಗಿ ಇತರ ಆರೋಪಗಳನ್ನು ಹೊತ್ತಿರುವ ಒಟ್ಟು  260 ಅಭ್ಯರ್ಥಿಗಳನ್ನು  ಪಕ್ಷಗಳು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಕಣಕ್ಕಿಳಿಸಿದ್ದವು. ಇವುಗಳಲ್ಲಿ 72 ಮಂದಿ ಸ್ವತಂತ್ರ ಅಭ್ಯರ್ಥಿಗಳು. ಬಿಜೆಪಿಯು ಇಂತಹ 24, ಕಾಂಗ್ರೆಸ್ 26, ಎಸ್‌ಪಿ 16, ಬಿಎಸ್‌ಪಿ 18 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು.2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತ್ಯಾಚಾರ ನಡೆಸಿರುವ ಆರೋಪ ಎದುರಿಸುತ್ತಿದ್ದ ಆರು ಮಂದಿ ಚುನಾವಣಾ ಅಖಾಡದಲ್ಲಿದ್ದರು. ಇವರಲ್ಲಿ ಇಬ್ಬರು ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಉಳಿದಂತೆ ಆರ್‌ಪಿಪಿ, ಆರ್‌ಸಿಪಿ, ಬಿಎಸ್‌ಪಿ ಮತ್ತು  ಜಿಎಂಎಂನಿಂದ ತಲಾ ಒಬ್ಬೊಬ್ಬರು ಚುನಾವಣಾ ಕಣದಲ್ಲಿದ್ದರು. ಆರು ಮಂದಿಯಲ್ಲಿ ಮೂವರು ಬಿಹಾರಕ್ಕೆ ಸೇರಿದ್ದವರಾಗಿದ್ದರೆ, ಉಳಿದವರು ನವದೆಹಲಿ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದವರು. ಅತ್ಯಾಚಾರ ಹೊರತಾಗಿ ಮಹಿಳೆಯರ ವಿರುದ್ಧ ಅಪರಾಧ ಎಸಗಿದ ಆರೋಪಗಳನ್ನು ಹೊತ್ತಿದ್ದ 36 ಅಭ್ಯರ್ಥಿಗಳು 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.ಹಾಲಪ್ಪ ಪ್ರಕರಣ: ಮಾಜಿ ಸಚಿವ, ಬಿಜೆಪಿಯ ಎಚ್.ಹಾಲಪ್ಪ ಅವರು ತಮ್ಮ ಸ್ನೆಹಿತನ ಪತ್ನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಚಿವರಾಗಿದ್ದಾಗಲೇ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 2010ರ ಮೇ 9ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry