ಭಾನುವಾರ, ಜೂನ್ 20, 2021
21 °C

ಶಾಸನ ರಚನೆಯಲ್ಲಿ ರಾಜ್ಯದ ಸಂಸದರ ಆಸಕ್ತಿ

ಪ್ರ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹದಿನೈದನೇ ಲೋಕಸಭೆ ಅವಧಿ­ಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮೂವರು ಸಚಿವರು ಮಂಡಿಸಿದ 20 ಮಸೂದೆಗಳ ಪೈಕಿ 11ಕ್ಕೆ ಅಂಗೀಕಾರ ದೊರೆತಿದೆ. ಇಬ್ಬರು ಸಂಸದರು ನಾಲ್ಕು ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡಿಸಿ ಗಮನ ಸೆಳೆದಿದ್ದಾರೆ.ಸಂಸದರ ನಡವಳಿಕೆಗಳು ಮತ್ತು ಕಾರ್ಯ­ವೈಖರಿ ಕುರಿತು ಅಧ್ಯಯನ ನಡೆಸಿರುವ ಬೆಂಗ­ಳೂರಿನ ರಿಜೋರ್ಸ್‌ ಸಂಶೋಧನಾ ಪ್ರತಿಷ್ಠಾನ (ಆರ್‌ಆರ್‌ಎಫ್‌), ಈ ಲೋಕಸಭೆಯ ಅವಧಿ­ಯಲ್ಲಿ ಶಾಸನ ರಚನೆಯಲ್ಲಿ ಸಚಿವರು, ಸಂಸದರ ಪಾಲ್ಗೊ­ಳ್ಳು­ವಿಕೆ­ಯನ್ನೂ ವಿಶ್ಲೇಷಿಸಿದೆ. ಈ ಅಧ್ಯಯ­ನಕ್ಕೆ ಸಂಬಂಧಿಸಿದ ವರದಿಯನ್ನು ಪ್ರತಿಷ್ಠಾನವು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದೆ.ಯುಪಿಎ ಸರ್ಕಾರದಲ್ಲಿ ಸಚಿವರಾಗಿರುವ ಎಂ.ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್‌.ಮುನಿಯಪ್ಪ ಅವರು ಶಾಸನ ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಆರ್‌ಆರ್‌ಎಫ್‌ ಗುರುತಿಸಿದೆ. ತಲಾ ಎರಡು ಖಾಸಗಿ ಸದಸ್ಯರ ಮಸೂದೆ­ಗಳನ್ನು ಮಂಡಿಸಿರುವ ಸಂಸದರಾದ ಜಿ.ಎಸ್‌.ಬಸವರಾಜು ಮತ್ತು ಅನಂತಕುಮಾರ್‌ ಹೆಗ್ಡೆ ಕೂಡ ಶಾಸನ ರಚನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸ­ಲಾಗಿದೆ.ಮೊಯಿಲಿ ಮುಂದೆ: ಯುಪಿಎ ಸರ್ಕಾರದಲ್ಲಿ ಕಾನೂನು, ಕಾರ್ಪೋರೇಟ್‌ ವ್ಯವಹಾರಗಳು, ಪೆಟ್ರೋಲಿಯಂ ಮತ್ತು ಅರಣ್ಯ ಖಾತೆಯನ್ನು ನಿರ್ವಹಿಸಿರುವ ವೀರಪ್ಪ ಮೊಯಿಲಿ ಅವರು, ಈ ಲೋಕಸಭೆಯ ಎರಡನೇ ಅಧಿವೇಶನದಿಂದ ಅಂತ್ಯದವರೆಗೆ 12 ಮಸೂದೆಗಳನ್ನು ಮಂಡಿಸಿದ್ದಾರೆ. ಈ ಪೈಕಿ ಆರಕ್ಕೆ (ಶೇಕಡ 50ರಷ್ಟು) ಸಂಸತ್ತಿನ ಒಪ್ಪಿಗೆ ದೊರೆತಿದೆ.ಮೊಯಿಲಿ ಅವರು ಮಂಡಿಸಿದ ಹೈಕೋರ್ಟ್‌­ಗಳ ವಾಣಿಜ್ಯ ವಿಭಜನೆ ಮಸೂದೆ– 2009, ನ್ಯಾಯಾಂಗದ ಗುಣಮಟ್ಟ ಮತ್ತು ಹೊಣೆಗಾರಿಕೆ ಮಸೂದೆ– 2010, ಕಂಪೆನಿಗಳ ಮಸೂದೆ– 2011, ಸ್ಪರ್ಧಾ (ತಿದ್ದುಪಡಿ) ಮಸೂದೆ– 2012, ತಮಿಳುನಾಡು ವಿಧಾನ ಪರಿಷತ್‌ ಮಸೂದೆ– 2010 ಮತ್ತು ಸಂವಿಧಾನದ (114ನೇ ತಿದ್ದುಪಡಿ) ಮಸೂದೆ–2010ಕ್ಕೆ ಸಂಸತ್ತಿನ ಅಂಗೀಕಾರ ದೊರೆತಿದೆ.ಕೇಂದ್ರ ಸರ್ಕಾರದಲ್ಲಿ ಮೊದಲು ಕಾರ್ಮಿಕ ಸಚಿವರಾಗಿದ್ದು, ಈಗ ರೈಲ್ವೆ ಸಚಿವರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಏಳು ಮಸೂದೆಗಳನ್ನು ಮಂಡಿಸಿದ್ದಾರೆ. ಈ ಪೈಕಿ ನಾಲ್ಕು (ಶೇ 57.14) ಮಸೂದೆಗಳಿಗೆ ಸಂಸತ್ತಿನ ಒಪ್ಪಿಗೆ ದೊರೆತಿದೆ.ಗ್ರಾಚ್ಯುಯಿಟಿ ಪಾವತಿ (ತಿದ್ದುಪಡಿ) ಮಸೂದೆ–2009, ಗ್ರಾಚ್ಯುಯಿಟಿ ಪಾವತಿ (ತಿದ್ದುಪಡಿ) ಮಸೂದೆ– 2010, ರಾಜ್ಯ ಕಾರ್ಮಿಕರ ವಿಮಾ (ತಿದ್ದುಪಡಿ) ಮಸೂದೆ– 2010 ಮತ್ತು ಕಾರ್ಮಿಕರ ಪರಿಹಾರ (ತಿದ್ದುಪಡಿ) ಮಸೂದೆ–2009 ಅನ್ನು ಸಂಸತ್ತಿನಲ್ಲಿ ಮಂಡಿಸಿ, ಒಪ್ಪಿಗೆ ಪಡೆಯುವಲ್ಲಿ ಖರ್ಗೆ ಯಶಸ್ವಿಯಾಗಿದ್ದಾರೆ.ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಅವಧಿಯಲ್ಲಿ ಕೆ.ಎಚ್‌.ಮುನಿಯಪ್ಪ ಅವರು ರೈಲ್ವೆ ಆಸ್ತಿಗಳ ಅನಧಿಕೃತ ಒತ್ತುವರಿ ತಡೆ (ತಿದ್ದುಪಡಿ) ಮಸೂದೆ–2011 ಮಂಡಿಸಿದ್ದರು. ಅದಕ್ಕೆ ಸಂಸತ್ತಿನ ಒಪ್ಪಿಗೆ ದೊರೆತಿದೆ.ಸದಸ್ಯರ ಖಾಸಗಿ ಮಸೂದೆಗಳು: ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ಅವರು 2009ರ ಡಿಸೆಂಬರ್‌ 4ರಂದು ಎರಡು ಖಾಸಗಿ ಮಸೂದೆ­ಗಳನ್ನು ಮಂಡಿಸಿದ್ದರು. ತುಮಕೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ ಜಿ.ಎಸ್‌.ಬಸವರಾಜು ಅವರು 2010ರ ಆಗಸ್ಟ್‌ 8ರಂದು ಎರಡು ಖಾಸಗಿ ಮಸೂದೆಗಳನ್ನು ಮಂಡಿಸಿದ್ದರು. ನಾಲ್ಕೂ ಮಸೂದೆಗಳು ಸರ್ಕಾರದ ಮುಂದೆ ಬಾಕಿ ಇವೆ.ಅರಣ್ಯ ವಾಸಿಗಳಿಗೆ ಜಮೀನಿನ ಮೇಲೆ ಹಕ್ಕು ನೀಡುವ ಉದ್ದೇಶದ ಖಾಸಗಿ ಮಸೂದೆಯನ್ನು ಅನಂತಕುಮಾರ್‌ ಹೆಗ್ಡೆ ಅವರು ಮೊದಲು ಮಂಡಿಸಿದ್ದರು. ಅವರು ಮಂಡಿಸಿದ ಎರಡನೇ ಮಸೂದೆ, ಮೀನುಗಾರರ ಅಭಿವೃದ್ಧಿಗೆ ಸಂಬಂಧಿಸಿದೆ.2009ರಲ್ಲಿ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಭಾರಿ ಹಾನಿ ಸಂಭವಿಸಿತ್ತು. ಅದರ ಬಳಿಕ ಸಂಸತ್ತಿನಲ್ಲಿ ಖಾಸಗಿ ಮಸೂದೆ ಮಂಡಿಸಿದ್ದ ಬಸವರಾಜು, ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದರು. ಶಿಲ್ಪ ಕಲಾವಿದರು ಮತ್ತು ಗ್ರಾಮೀಣ ಕರಕುಶಲ ಕರ್ಮಿಗಳ ಅಭಿವೃದ್ಧಿಗೆ ಒತ್ತಾಯಿಸಿ ಎರಡನೇ ಮಸೂದೆ ಮಂಡಿಸಿದ್ದರು.ಸುಗ್ರೀವಾಜ್ಞೆಗಳು ಮತ್ತು ಖಾಸಗಿ ಸದಸ್ಯರ ನಿರ್ಣಯಗಳ ರಚನೆ, ಮಂಡನೆ ಮತ್ತು ಜಾರಿಯಲ್ಲಿ ರಾಜ್ಯದ ಯಾವುದೇ ಸದಸ್ಯರು ಭಾಗಿಯಾಗಿ­ರಲಿಲ್ಲ ಎಂದು ಆರ್‌ಆರ್‌ಎಫ್‌ ವರದಿಯಲ್ಲಿ ತಿಳಿಸಿದೆ.ಮಲ್ಲಿಕಾರ್ಜುನ ಖರ್ಗೆಗೆ ಮೆಚ್ಚುಗೆ

ಹೈದರಾಬಾದ್‌– ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಿದ ‘ಸಂವಿಧಾನದ 114ನೇ ತಿದ್ದುಪಡಿ ಮಸೂದೆ’ಯನ್ನು ಎಂ.ವೀರಪ್ಪ ಮೊಯಿಲಿ ಮಂಡಿಸಿದ್ದರು. ಆಗ, ಮಸೂದೆಗೆ ಅಂಗೀಕಾರ ಪಡೆಯುವ ವಿಷಯದಲ್ಲಿ ಸಂಸತ್ತಿನ ಎಲ್ಲ ಸದಸ್ಯರನ್ನು ಮನವೊಲಿಸುವಲ್ಲಿ ಸಚಿವ ಮಲ್ಲಿ­ಕಾರ್ಜುನ ಖರ್ಗೆ ಮಹತ್ವದ ಪಾತ್ರ ನಿರ್ವಹಿಸಿದ್ದರು ಎಂದು ಆರ್‌ಆರ್‌ಎಫ್‌ ವರದಿಯಲ್ಲಿ ಉಲ್ಲೇಖಿಸಿದೆ.

ಮೊಯಿಲಿ ಅವರು ಮಸೂದೆ ಮಂಡಿಸಿದಾಗ ಖರ್ಗೆ ಅವರು ಸಂಪುಟದ ಸದಸ್ಯನ ಸ್ಥಾನದಲ್ಲಿ ನಿಂತು ಮಾತನಾಡದೇ ಒಬ್ಬ ಸಾಮಾನ್ಯ ಸಂಸದನ ಸ್ಥಾನದಲ್ಲಿ ನಿಂತು ಮಸೂದೆಯನ್ನು ಬೆಂಬಲಿ­ಸಿದರು. ಇದರಿಂದ ಮಸೂದೆಗೆ ಒಪ್ಪಿಗೆ ಪಡೆ­ಯಲು ಅನುಕೂಲವಾಯಿತು ಎಂದು ಪ್ರತಿಷ್ಠಾನ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.