ಶನಿವಾರ, ಮೇ 21, 2022
26 °C

ಶಾಸ್ತ್ರೀಯ ನೃತ್ಯಕ್ಕೆ ಆದ್ಯತೆ: ವೈಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನೃತ್ಯ ಕ್ಷೇತ್ರ ಸಪ್ತಪದಿ ಇದ್ದ ಹಾಗೆ. ಇದರಲ್ಲಿ ನಿರಂತರವಾಗಿ ಕೆಲಸ ಮಾಡುವುದು ಕಷ್ಟ. ಆದ್ದರಿಂದ ಶಾಸ್ತ್ರೀಯ ನೃತ್ಯಕ್ಕೆ ಒತ್ತು ನೀಡಬೇಕು ಎಂದು ನೃತ್ಯ ಸಂಗೀತ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಅಭಿಪ್ರಾಯಪಟ್ಟರು.ಗುರುದೇವ ಲಲಿತ ಕಲಾ ಅಕಾಡೆಮಿ ವತಿಯಿಂದ ಇಲ್ಲಿನ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ನೃತ್ಯೋತ್ಸವ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ನೃತ್ಯದಲ್ಲಿ ಪರಿಣತಿ ಪಡೆಯಬೇಕು ಎಂದರೆ ಕನಿಷ್ಠ 10 ವರ್ಷಗಳಾದರೂ ಬೇಕು. ಈಗಿನ ಸಂದರ್ಭದಲ್ಲಿ ಇಷ್ಟು ವರ್ಷ ಯಾರು ಅಭ್ಯಾಸ ಮಾಡುವುದಿಲ್ಲ. ನೃತ್ಯ ಕಲಿಯುತ್ತಿರುವ ಎಷ್ಟೋ ಮಕ್ಕಳನ್ನು ಅರ್ಧದಲ್ಲಿಯೇ ಬಿಡಿಸುತ್ತಾರೆ. ಇದರಿಂದ ನೃತ್ಯ ಕ್ಷೇತ್ರ ಬೆಳೆಯುತ್ತಿಲ್ಲ. ವಿದ್ಯಾಭ್ಯಾಸ ಹಾಗೂ ವೃತ್ತಿನಿರತರಿಗೆ  ಏಕಾಗ್ರತೆ, ಸಂಯಮ, ಶಿಸ್ತು ಹಾಗೂ ಸಂವಹನ ಕಲಿಸುವ ಮಾಧ್ಯಮವಾಗಿದೆ ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಣಿತರಾಗಬೇಕು. ನೃತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಓದಬೇಕು. ದೊಡ್ಡ ಕಲಾವಿದರ ನೃತ್ಯ ನೋಡುವ ಮೂಲಕ ಅವರಲ್ಲಿರುವ ಗುಣಗಳನ್ನು ಬೆಳೆಸಿಕೊಂಡರೆ ಅದು ನಮಗೆ ನೃತ್ಯ ಕಲಿಯಲು ಮೈಲುಗಲ್ಲಾಗುತ್ತದೆ. ಆಗ ಮಾತ್ರ ಉತ್ತಮ ನೃತ್ಯಗಾರ್ತಿಯರಾಗಲು ಸಾಧ್ಯ. ಚಿತ್ರೋದ್ಯಮದಂತೆ ನೃತ್ಯ ಕ್ಷೇತ್ರ ಬೆಳೆಯಬೇಕಾದರೆ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ನೃತ್ಯವನ್ನು ಕೇವಲ ಹವ್ಯಾಸವಾಗಿ ನೋಡಬಾರದು. ಬದಲಾಗಿ ವೃತ್ತಿಯಾಗಿ ಸ್ವೀಕರಿಸಬೇಕು. ನೃತ್ಯ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಪಡೆಯಬೇಕಾ ದರೆ ಅದನ್ನು  ಸವಾಲಾಗಿ ತೆಗೆದುಕೊಳ್ಳಬೇಕು. ಗುರುಗಳ ಮಾರ್ಗದರ್ಶನ, ತಂದೆ- ತಾಯಿಯರ ಸಲಹೆ, ನೃತ್ಯ ಅಕಾಡೆಮಿಯ ಜೊತೆ ಚರ್ಚಿಸುವ ಮೂಲಕ ನೃತ್ಯದಲ್ಲಿ ಪರಿ ಣತಿ ಪಡೆಯಬೇಕು. ನೃತ್ಯ ಕ್ಷೇತ್ರ ದಲ್ಲಿ ರಾಜಕೀಯ ನಡೆಯುವುದಿಲ್ಲ. ಪ್ರತಿಭೆ ಇದ್ದವರಿಗಷ್ಟೇ ಅವಕಾಶ ಎಂದರು.ಜನವರಿಯಲ್ಲಿ ನೃತ್ಯ ಜಾತ್ರೆ


ರಾಜ್ಯದಲ್ಲಿರುವ ಎಲ್ಲಾ ನೃತ್ಯಗಾರ್ತಿಯರನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಜನವರಿ 7 ಹಾಗೂ 8ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ನೃತ್ಯಜಾತ್ರೆ ನಡೆಯಲಿದೆ. ಇದರಲ್ಲಿ ನೃತ್ಯ ಕಲಾವಿದರ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ `ಡ್ಯಾನ್ಸ್ ವಾಲ್~ ಸ್ಥಾಪಿಸಲಾಗುವುದು.ಇದರಲ್ಲಿ ಗುರುಗಳ ಚಿತ್ರದ ಜೊತೆಗೆ ಕಲಾವಿದೆಯ ಸಾಧನೆಯನ್ನು ಅಲ್ಲಿ ಪರಿಚಯ ಮಾಡಿಕೊಡಲಾಗುವುದು. ನೃತ್ಯಕ್ಕೆ ಸಂಬಂಧಿಸಿದ ಜಡೆಗಳ ಜೋಡಣೆ, ನೃತ್ಯ ಚಿತ್ರಗಳು ಹಾಗೂ ವಸ್ತ್ರ ವಿನ್ಯಾಸಕ್ಕೆ ಸಂಬಂಧಿಸಿದ ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಅಣ್ಣೇಗೌಡ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಉದಯರಾಜ್ ನಾಯಕ್, ಮೈಸೂರು ಪಶ್ಚಿಮ ಲಯನ್ಸ್ ಸೇವಾನಿಕೇತನ ಶಾಲೆಯ ಪ್ರಾಂಶುಪಾಲ ಎನ್.ವಿ.ಶಿವಕುಮಾರ್, ಸಿಂಡಿಕೇಟ್ ಮಾಜಿ ಸದಸ್ಯ ಎಚ್.ಎ.ವೆಂಕಟೇಶ್ ಇತರರು  ವೇದಿಕೆಯಲ್ಲಿದ್ದರು. ನೃತ್ಯಾಲಯ ಟ್ರಸ್ಟ್‌ನ ಡಾ.ತುಳಸಿ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.3 ವಿಭಾಗಗಳಲ್ಲಿ ನಡೆದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ 126 ಮಂದಿ ಕಲಾವಿದೆಯರು ಭಾಗವಹಿಸಿದ್ದರು. ಡಾ.ಚೇತನಾ ರಾಮಕೃಷ್ಣ ಮತ್ತು ಶಿಷ್ಯ ವೃಂದ ನಡೆಸಿಕೊಟ್ಟ ಭರತನಾಟ್ಯ ಎಲ್ಲರನ್ನು ಆಕರ್ಷಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.