`ಶಾಸ್ತ್ರೀಯ ಸಂಗೀತಕ್ಕೆ ತಿರುವಯ್ಯಾರು, ಭಕ್ತಿಸಂಗೀತಕ್ಕೆ ಕೈವಾರ'

ಮಂಗಳವಾರ, ಜೂಲೈ 23, 2019
20 °C
ಗುರುಪೂಜಾ ಮಹೋತ್ಸವ ಮತ್ತು ಸಂಗೀತೋತ್ಸವಕ್ಕೆ ತೆರೆ

`ಶಾಸ್ತ್ರೀಯ ಸಂಗೀತಕ್ಕೆ ತಿರುವಯ್ಯಾರು, ಭಕ್ತಿಸಂಗೀತಕ್ಕೆ ಕೈವಾರ'

Published:
Updated:

ಚಿಂತಾಮಣಿ: ದೇಶದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ತಮಿಳುನಾಡಿನ ತಿರುವಯ್ಯೊರು ಕೇಂದ್ರ ಸ್ಥಾನವಾದರೆ, ಅಧ್ಯಾತ್ಮ ಭಕ್ತಿಸಂಗೀತಕ್ಕೆ ಕೈವಾರವು ಪ್ರಧಾನ ಕೇಂದ್ರವಾಗಿದೆ. ಕೈವಾರದಲ್ಲಿ  ನಡೆಯುವ ಸಂಗೀತ ಕಛೇರಿಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದು ಹಿರಿಯ ಸಂಗೀತ ವಿದ್ವಾಂಸ ಸಂಗೀತ ಕಲಾನಿಧಿ ಡಾ. ನೇದನೂರಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಕೈವಾರ ಕ್ಷೇತ್ರದ ಯೋಗಿ ನಾರೇಯಣ ಮಠದ ಆವರಣದಲ್ಲಿ ಸೋಮವಾರ ಸಮಾರೋಪಗೊಂಡ `ಗುರುಪೂಜಾ ಮಹೋತ್ಸವ ಮತ್ತು ಸಂಗೀತೋತ್ಸವ'ದಲ್ಲಿ ಮಾತನಾಡಿ, `ಶ್ರದ್ಧಾಭಕ್ತಿ ಸಮರ್ಪಣೆಗೆ ಸಾಕ್ಷಿಯಾಗಲೆಂದೇ ಇಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ' ಎಂದರು.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿರುವ ಮೌಲ್ಯಗಳನ್ನು ಅರಿಯಲು ಯುವಜನರು ಆಸಕ್ತಿ ತೋರಬೇಕು. ಸಂಗೀತ ಮತ್ತು ನಾಟ್ಯದ ಮೂಲ ಮನಸ್ಸಿನ ಮೇಲೆ ಹಿಡಿತ ಸಾಧಿಸಬೇಕು ಎಂದು ಅವರು ತಿಳಿಸಿದರು.ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ಮತ್ತು ಸಂತರಿಗೆ ಮೇರು ಸ್ಥಾನವಿದ್ದು, ಅವರ ತತ್ವ ಮತ್ತು ಸದ್ವಿಚಾರಗಳನ್ನು ನಾವೆಲ್ಲರೂ ಪಾಲಿಸಬೇಕು. ಗುರುಪೂರ್ಣಿಮೆ ದಿನದಂದು ಗುರುಗಳನ್ನು ಸ್ಮರಿಸುವುದು ಅಷ್ಟೇ ಅಲ್ಲ, ಅವರನ್ನು ಶ್ರದ್ಧಾಭಕ್ತಿಯಿಂದ ಗೌರವಿಸಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಅಭಿಪ್ರಾಯಪಟ್ಟರು.ಗುರುಗಳನ್ನು ಸ್ಮರಿಸುವ ಮತ್ತು ಸೇವೆ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷವೂ ಇಲ್ಲಿ ಸಂಗೀತೋತ್ಸವ ನಡೆಯುತ್ತದೆ. ವಿವಿಧ ದೇಶ, ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಇಲ್ಲಿನ ಸಂಗೀತೋತ್ಸವದಲ್ಲಿ ಪಾಲ್ಗೊಂಡು ಪಾವನರಾಗುತ್ತಾರೆ ಎಂದು ತಿಳಿಸಿದರು.ಕೈವಾರದಂತಹ ಪುಟ್ಟ ಗ್ರಾಮದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರು ಒಂದೆಡೆ ಸೇರಿ ಸಂಗೀತೋತ್ಸವ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮಹಾನಗರಗಳಲ್ಲಿ ಸಂಗೀತೋತ್ಸವ ನಡೆಸಲು ಮತ್ತು ಸಂಗೀತ ಶೋತೃಗಳನ್ನು ಸೇರಿಸಲು ಕಷ್ಟವಾಗುತ್ತದೆ. ಆದರೆ ಕೈವಾರದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿರುವುದೇ ಸಂಭ್ರಮ ಎಂದು  ವೀಣಾವಾದಕಿ ಸರಸ್ವತಿ ರಾಜಗೋಪಾಲನ್ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry