ಸೋಮವಾರ, ಮಾರ್ಚ್ 1, 2021
25 °C

ಶಾಸ್ತ್ರೀಯ ಸಂಗೀತದ ಅಲೆ ಏರಿಬಂತು ‘ರಾಗಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸ್ತ್ರೀಯ ಸಂಗೀತದ ಅಲೆ ಏರಿಬಂತು ‘ರಾಗಂ’

ಬೆಂಗಳೂರು: ನಗರದ ಪುರಭವನದಲ್ಲಿ ಮಂಗಳವಾರ ರಾತ್ರಿ ಸಾಂತಪುರಂ ಪಳನಿವೇಲ್‌ ಮತ್ತು ಪ್ರಭಾವತಿ ಪಳನಿವೇಲ್‌ ಅವರ ತಂಡ ಸುಶ್ರಾವ್ಯವಾದ ನಾಗಸ್ವರ ಹೊರಡಿಸಿದಾಗ ಅದು ಸಭಾಂಗಣದಲ್ಲಿ ಇದ್ದವರಿಗಷ್ಟೇ ಕೇಳಲಿಲ್ಲ; ಬದಲಾಗಿ ಪ್ರಪಂಚದಾದ್ಯಂತ ಆ ಕ್ಷಣಕ್ಕಾಗಿ ಕಾದಿದ್ದ ಶ್ರೋತೃಗಳ ಮನೆ ಮನೆಗಳಲ್ಲೂ ಪ್ರತಿಧ್ವನಿಸಿತು.ಪ್ರಸಾರ ಭಾರತಿಯಿಂದ ಶಾಸ್ತ್ರೀಯ ಸಂಗೀತದ ಪ್ರಸಾರಕ್ಕಾಗಿಯೇ ಆರಂಭಿಸಿದ ‘ರಾಗಂ’ 24X7 ಉಪಗ್ರಹ ವಾಹಿನಿ ಉದ್ಘಾಟನೆ ಸಂದರ್ಭ ಅದು. ಸಂಗೀತಕ್ಕಾಗಿಯೇ ರಾಷ್ಟ್ರೀಯ ವಾಹಿನಿಯೊಂದನ್ನು ಆರಂಭಿಸಬೇಕೆಂಬ ಆಕಾಶವಾಣಿಯ ದಶಕಗಳ ಕನಸು ನನಸಾದ ಕ್ಷಣವೂ ಅದಾಗಿತ್ತು.ಶಾಸ್ತ್ರೀಯ ಸಂಗೀತದ ದೊಡ್ಡ ಖಜಾನೆಯನ್ನೇ ತನ್ನಲ್ಲಿ ಇರಿಸಿಕೊಂಡಿರುವ ಆಕಾಶವಾಣಿ, ಅದರ ರಸದೌತಣವನ್ನು ‘ರಾಗಂ’ ವಾಹಿನಿ ಮೂಲಕ ಶ್ರೋತೃಗಳಿಗೆ ಉಣಬಡಿಸಲಿದೆ. ಭಾರತೀಯ ಶಾಸ್ತ್ರೀಯ ಸಂಗೀತದ ರಸಿಕರಿಗೆ ಇನ್ನುಮುಂದೆ ದಿನವೂ ಹಬ್ಬದೂಟ ಕಾದಿದೆ. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಎರಡನ್ನೂ ಈ ವಾಹಿನಿ ಪ್ರಸಾರ ಮಾಡಲಿದೆ.ಡಿಟಿಎಚ್‌ (ಡೈರೆಕ್ಟ್‌ ಟು ಹೋಮ್‌) ಸೌಲಭ್ಯದಿಂದ ಮಾತ್ರವಲ್ಲದೆ ಅಂತರ್ಜಾಲದ ಮೂಲಕವೂ (allindiaradio.gov.in) ‘ರಾಗಂ’ ವಾಹನಿಗೆ ನಾವು ಕಿವಿಯಾಗಬಹುದು. ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು (All India Radio) ಮೊಬೈಲ್‌ನಲ್ಲೂ ಕೇಳಬಹುದು.

ಹಳೆಯದೆಲ್ಲ ಬಂಗಾರ ಎನ್ನುವ ‘ರಾಗಂ’ ವಾಹಿನಿ, ಬೇಗಂ ಅಖ್ತರ್‌ ಅವರ ಸಂದರ್ಶನ, ಎಂ.ಎಸ್‌. ಸುಬ್ಬಲಕ್ಷ್ಮಿ ಅವರ ಭಜನ್‌, ಬಡೇ ಗುಲಾಂ ಅಲಿಖಾನ್‌ ಅವರ ಮಿಶ್ರ ಭೈರವಿ ಠುಮ್ರಿ ಭೀಮಸೇನ ಜೋಶಿ ಅವರ ಅಭಂಗದಂತಹ ಸಂಗೀತದ ರಸನಿಮಿಷಗಳನ್ನು ಬಿತ್ತರಿಸಲಿದೆ. ಆಕಾಶವಾಣಿ ಬಳಿ ಐದು ಸಾವಿರ ಗಂಟೆಗಳಷ್ಟು ಶಾಸ್ತ್ರೀಯ ಸಂಗೀತದ ರೆಕಾರ್ಡಿಂಗ್‌ ಸಂಗ್ರಹವಿದೆ.‘ಎಫ್‌ಎಂ ಕೇವಲ 60 ಕಿ.ಮೀ. ದೂರದವರೆಗೆ ಮಾತ್ರ ಕಾರ್ಯಕ್ರಮ ಬಿತ್ತರಿಸುತ್ತದೆ. ಯಾವ ತರಂಗಾಂತರದ ಮಿತಿಯಿಲ್ಲದೆ ಸೀಮೆಗಳನ್ನೆಲ್ಲ ದಾಟಿ, ಸಾಗರೋಲ್ಲಂಘನವನ್ನೂ ಮಾಡಿ ವಿದೇಶದ ನೆಲದಲ್ಲೂ ಶಾಸ್ತ್ರೀಯ ಸಂಗೀತದ ಅಲೆ ಎಬ್ಬಿಸುವ ತಾಕತ್ತು ನಮ್ಮ ‘ರಾಗಂ’ ವಾಹಿನಿಗಿದೆ’ ಎಂದು ಹೆಮ್ಮೆಯಿಂದ ಹೇಳಿದರು ಆಕಾಶವಾಣಿ ಮಹಾನಿರ್ದೇಶಕ ಎಫ್‌.ಶಹರಿಯಾರ್‌.‘ಅಂತರ್ಜಾಲ ಮತ್ತು ಮೊಬೈಲ್ ಆ್ಯಪ್‌ ಮೂಲಕವೂ ಈ ವಾಹಿನಿಗೆ ಕಿವಿಯಾಗಲು ಅವಕಾಶ ಇದೆ. ಹೀಗಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ನೀವು ಸಂಗೀತ ಆಲಿಸಬಹುದು’ ಎಂದು ಅವರು ತಿಳಿಸಿದರು. ‘ಈ ವಾಹಿನಿ ಕಾರ್ಯಕ್ರಮ ಕೇಳಲು ರೇಡಿಯೊ ಟ್ರಾನ್ಸಿಸ್ಟರ್‌ ಮೇಲೂ ಅವಲಂಬನೆ ಆಗಬೇಕಿಲ್ಲ’ ಎಂದು ಹೆಮ್ಮೆಯಿಂದ ನುಡಿದರು.ಆಕಾಶವಾಣಿ ಸಂಗ್ರಹದ ಹಳೆಯ ಸಂಗೀತ ಕಛೇರಿಗಳು ಮಾತ್ರವಲ್ಲದೆ ದೇಶದ ವಿವಿಧ ಕಡೆಗಳಲ್ಲಿ ಆಕಾಶವಾಣಿ ಕೇಂದ್ರಗಳು ನಡೆಸುವ ಕಛೇರಿಗಳು ಸಹ ‘ರಾಗಂ’ ವಾಹಿನಿ ಮೂಲಕ ಬಿತ್ತರಗೊಳ್ಳಲಿವೆ. ಈ ವಾಹಿನಿ ಬೆಂಗಳೂರನ್ನು ಕೇಂದ್ರ ಕಚೇರಿಯಾಗಿ ಹೊಂದಿರುವುದು ವಿಶೇಷವಾಗಿದೆ.ನವದೆಹಲಿ, ಮುಂಬೈ, ಪುಣೆ, ಧಾರವಾಡ, ಭೋಪಾಲ, ಲಖನೌ ಕೇಂದ್ರಗಳು ಹಿಂದೂಸ್ತಾನಿ ಮತ್ತು ತಿರುವನಂತಪುರ, ತಿರುಚಿ, ತ್ರಿಶ್ಯೂರ್, ಹೈದರಾಬಾದ್‌ ಮತ್ತು ವಿಜಯವಾಡಾ ಕೇಂದ್ರಗಳು ಕರ್ನಾಟಕ ಸಂಗೀತವನ್ನು ‘ರಾಗಂ’ ವಾಹಿನಿಗೆ ಒದಗಿಸಲಿವೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಇಸ್ರೊದ ನಿವೃತ್ತ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್‌, ‘ಶಾಸ್ತ್ರೀಯ ಸಂಗೀತದ ಪ್ರಸಾರಕ್ಕೆ ಆಧುನಿಕ ತಂತ್ರಜ್ಞಾನವನ್ನು  ಪ್ರಸಾರ ಭಾರತಿ ಬಳಸಿಕೊಂಡಿರುವ ಬಗೆ ಅನನ್ಯವಾಗಿದೆ’ ಎಂದು  ಹೇಳಿದರು.‘ನಾನು ಚಿಕ್ಕವಳಿದ್ದಾಗ ಈ ವಾಹಿನಿ ಬಂದಿದ್ದರೆ ಶಾಲಾ–ಕಾಲೇಜಿಗೆ ಹೋಗುವ ಜತೆಗೆ ಸಂಗೀತವನ್ನೂ ಕಲಿಯಬಹುದಿತ್ತು’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹಳಹಳಿಸಿದರು. ‘ಹೊಸ ವಾಹಿನಿಗೆ ನನ್ನ ಬೆಂಗಳೂರು ಕೇಂದ್ರ ಸ್ಥಾನವಾಗಿದ್ದು ಖುಷಿ ನೀಡಿದೆ’ ಎಂದು ಪ್ರಸಾರ ಭಾರತಿ ಅಧ್ಯಕ್ಷ ಡಾ.ಎ.ಸೂರ್ಯಪ್ರಕಾಶ್‌ ಸಂಭ್ರಮಿಸಿದರು.ಉದ್ಘಾಟನೆ ಕಾರ್ಯಕ್ರಮದ ಬಳಿಕ ಎಂ.ಎಸ್‌.ಶೀಲಾ ಅವರಿಂದ ಕರ್ನಾಟಕ ಸಂಗೀತ ಕಛೇರಿ ನಡೆದರೆ, ರಫೀಕ್‌ ಖಾನ್‌ (ಸಿತಾರ), ಪ್ರವೀಣ್‌ ಗೋಡ್ಖಿಂಡಿ (ಬಾನ್ಸುರಿ) ಹಿಂದೂಸ್ತಾನಿ ಜುಗಲ್‌ಬಂದಿ ನಡೆಸಿಕೊಟ್ಟರು. ಎಂ.ಸುಧಾಕರ ಮತ್ತು ಅಂಜನಾ ಸುಧಾಕರ ಅವರ ತಂಡ ಭಕ್ತಿ ಸಂಗೀತದ ಸುಧೆ ಹರಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.