ಶಿಕಾರಿಪುರದಲ್ಲಿ ಜಾನಪದ ವಿಶ್ವವಿದ್ಯಾಲಯ?

7

ಶಿಕಾರಿಪುರದಲ್ಲಿ ಜಾನಪದ ವಿಶ್ವವಿದ್ಯಾಲಯ?

Published:
Updated:

ಶಿವಮೊಗ್ಗ: ಉದ್ದೇಶಿತ ಜಾನಪದ ವಿಶ್ವವಿದ್ಯಾಲಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಸ್ಥಾಪನೆಯಾಗುವುದು ಬಹುತೇಕ ಖಚಿತವಾಗಿದೆ.

ಈ ಸಂಬಂಧ ಅಂತಿಮ ನಿರ್ಧಾರ ಫೆ. 22ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ದೃಢಪಡಿಸಿವೆ.ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ಸ್ಥಳ ಕುರಿತಂತೆ ಜಾನಪದ ತಜ್ಞರು ಹಲವು ಹೆಸರುಗಳನ್ನು ಪ್ರಸ್ತಾಪಿಸುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಉದ್ದೇಶಿತ ವಿಶ್ವವಿದ್ಯಾಲಯ ಸ್ಥಾಪನೆಗೆ ತಜ್ಞರ ಸಮಿತಿ, ಈಗಾಗಲೇ ವಿವಿಧೆಡೆ ಸ್ಥಳ ಪರಿಶೀಲನೆ ಮಾಡಿದೆ. ಹಾವೇರಿ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಭೇಟಿ ನೀಡಿದೆ. ಆದರೆ, ಎಲ್ಲೂ ವಿಶ್ವವಿದ್ಯಾಲಯ ಸ್ಥಾಪನೆಗೆ ಬೇಕಾದ 500 ಎಕರೆ ಜಮೀನು ಸಿಕ್ಕಿಲ್ಲ. ಈ ಮಧ್ಯೆ ಶಿಕಾರಿಪುರದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದ ಜಮೀನಿನ ಹುಡುಕಾಟ ಭರದಿಂದ ಸಾಗಿದೆ.‘ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ 500 ಎಕರೆ ಜಮೀನು ಬೇಕಾಗಿದೆ. ಶಿಕಾರಿಪುರ ಆಸುಪಾಸು ಜಾಗ ಹುಡುಕಿ ಎಂಬ ಪತ್ರ ಸರ್ಕಾರದಿಂದ ಬಂದಿದೆ. ಅಷ್ಟು ಜಮೀನು ಇಲ್ಲದಿದ್ದರೂ ಅದರ ಅರ್ಧದಷ್ಟು ಜಮೀನನ್ನು ಒದಗಿಸಿ ಕೊಡಬೇಕಾಗಿದೆ’ ಎಂದು ಶಿಕಾರಿಪುರ ತಹಶೀಲ್ದಾರ್ ಕೆ.ಎಚ್. ಶಿವಕುಮಾರ್ ತಿಳಿಸಿದ್ದಾರೆ.ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಸ್ಥಳ ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ಇರುವ ನಗರಕ್ಕೆ ಸಮೀಪವಾಗಿರಬೇಕು. ರಸ್ತೆ, ನೀರು, ವಿದ್ಯುತ್ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳಿರಬೇಕು ಇತ್ಯಾದಿ ಪ್ರಸ್ತಾವಗಳ ವರದಿಯನ್ನು ಜನವರಿ 29ರಂದು ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಿಶ್ವವಿದ್ಯಾಲಯವನ್ನು ಮಧ್ಯಕರ್ನಾಟಕದಲ್ಲಿ ಸ್ಥಾಪಿಸಬೇಕು ಎಂಬುದು ತಜ್ಞರ ಅಭಿಪ್ರಾಯ. ಆದರೆ ಆ ಭಾಗದ ಯಾವ ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎನ್ನುತ್ತಾರೆ ಉದ್ದೇಶಿತ ವಿವಿಯ ಆಡಳಿತಾಧಿಕಾರಿ ಡಾ.ಅಂಬಳಿಕೆ ಹಿರಿಯಣ್ಣ.

ಬಹಳಷ್ಟು ಜಿಲ್ಲೆಗಳಲ್ಲಿ ಜಮೀನು ಸಿಕ್ಕಿಲ್ಲ. ಸಿಕ್ಕರೂ ಅದು ರೈತರಿಗೆ ಅಥವಾ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಇಬ್ಬರಿಗೂ ಸೇರದ ಸರ್ಕಾರಿ ಜಮೀನು ವಿಶ್ವವಿದ್ಯಾಲಯಕ್ಕೆ ಬೇಕಾಗಿದೆ. ಅದರಂತೆ, ಈ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಜಮೀನಿನ ಹುಡುಕಾಟ ನಡೆದಿದೆ ಎಂಬ ವಿವರಣೆ ಅವರದ್ದು.ಶಿಕಾರಿಪುರದಲ್ಲಿ ಯಾವುದೇ ರಾಷ್ಟ್ರೀಯ ಹೆದ್ದಾರಿಗಳಿಲ್ಲ. ವಿಮಾನ ನಿಲ್ದಾಣ ಇಲ್ಲವೇ ಇಲ್ಲ. ಹತ್ತಿರದ ಶಿವಮೊಗ್ಗದ ಸೂಗೂರಿನಲ್ಲಿ ನಿಲ್ದಾಣದ ಕಾಮಗಾರಿಗೆ ಬಾಲಗ್ರಹ ಕಾಟ. ಅಲ್ಲದೇ, ಶಿಕಾರಿಪುರದಲ್ಲಿ 500 ಎಕರೆ ಸರ್ಕಾರಿ ಜಮೀನು ಸಿಗಲು ಸಾಧ್ಯವೇ ಇಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು ಅಲ್ಲೆ ವಿವಿ ಸ್ಥಾಪನೆಯಾಗಬೇಕು ಎಂದು ಹಠ ತೊಟ್ಟರೆ ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸಬೇಕಾಗುವುದು ಅನಿವಾರ್ಯ ಎಂಬ ಮಾತುಗಳಿವೆ.ನಕ್ಸಲ್ ನಿಗ್ರಹ ತರಬೇತಿ ಅಕಾಡೆಮಿ: ಈ ಮಧ್ಯೆ ನಕ್ಸಲ್ ನಿಗ್ರಹ ತರಬೇತಿ ಅಕಾಡೆಮಿ ಕೂಡ ಶಿಕಾರಿಪುರದ ಪಾಲಾಗಿದೆ. ಉದ್ದೇಶಿತ ನಕ್ಸಲ್ ನಿಗ್ರಹ ದಳದ ತರಬೇತಿ ಅಕಾಡೆಮಿಯನ್ನು ಚಿಕ್ಕಮಗಳೂರಿನ ಕುದುರೆಮುಖದಲ್ಲಿ ಸ್ಥಾಪನೆ ಕುರಿತಂತೆ ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದರು. ಆದರೆ, ಈಗ ಶಿಕಾರಿಪುರದಲ್ಲಿ ಸ್ಥಾಪನೆ ಮಾಡುವ ಕುರಿತು ಸರ್ಕಾರಿ ಆದೇಶ ಹೊರಬಿದ್ದಿದೆ.ಇದಕ್ಕೂ ಮೊದಲು ಜಿಲ್ಲೆಯ ಸಾಗರದಲ್ಲಿ ಈ ಅಕಾಡೆಮಿ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಸಾಗರದ ಹೊರವಲಯದಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿತ್ತು. ಈಗ ಈ ಎಲ್ಲಾ ಹುಡುಕಾಟಕ್ಕೆ ತೆರೆಬಿದ್ದಿದ್ದು, ಶಿಕಾರಿಪುರದಲ್ಲಿ ಸುಮಾರು 150 ಎಕರೆ ಭೂಮಿಯಲ್ಲಿ ಅಕಾಡೆಮಿ ಸ್ಥಾಪನೆಯಾಗಲಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ನಿರೀಕ್ಷಿಸಲಾಗಿದೆ.

ನಕ್ಸಲ್ ಪೀಡಿತ ಪ್ರದೇಶವೂ ಅಲ್ಲದ ಬಯಲುಸೀಮೆಯಾದ ಶಿಕಾರಿಪುರದಲ್ಲಿ ನಕ್ಸಲ್ ನಿಗ್ರಹ ತರಬೇತಿ ಅಕಾಡೆಮಿ ಸ್ಥಾಪನೆ ಉದ್ದೇಶ ಈಡೇರುತ್ತದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry