ಭಾನುವಾರ, ಡಿಸೆಂಬರ್ 15, 2019
26 °C

`ಶಿಕ್ಷಕರಾಗುವುದು ಕಠಿಣ ಕಾರ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಶಿಕ್ಷಕರಾಗುವುದು ಕಠಿಣ ಕಾರ್ಯ'

ಬೀರೂರು: ಜಗತ್ತಿನಲ್ಲಿ ಯಾರು ಏನು ಬೇಕಾದರೂ ಆಗಬಹುದು ಆದರೆ ಗುರುವಾಗುವುದು ಕಠಿಣ ಎಂದು ಶಾಸಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟರು.ಬೀರೂರು ಶೈಕ್ಷಣಿಕ ವಲಯದಲ್ಲಿ ಗುರುವಾರ ಪಟ್ಟಣದ ಗುರುಭವನದಲ್ಲಿ ಆಚರಿಸಲಾದ 52ನೇ ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಮಾಜದಲ್ಲಿ ಗುರುವಿಗೆ ಉನ್ನತ ಸ್ಥಾನದ ಜೊತೆಗೆ ಹೆಚ್ಚು ಜವಾಬ್ದಾರಿಯ ಹೊರೆಯೂ ಇದೆ. ಶಿಕ್ಷಕ ತಪ್ಪು ಮಾಡುವುದನ್ನು ಸಮಾಜ ಒಪ್ಪುವುದಿಲ್ಲ, ಶಿಕ್ಷಕ ವೃತ್ತಿಯ ಬದ್ಧತೆಯಲ್ಲಿ ಸಾಮಾಜಿಕ ಮತ್ತು ವೈಯಕ್ತಿಕವಾಗಿ ನಾನು ಜವಾಬ್ದಾರಿಯುತನಾಗಿ ಇರುತ್ತೇನೆ ಎನ್ನುವುದೇ ಕಟ್ಟಳೆ. ಸಮಾಜ ಯಾವಾಗಲೂ ಗುರುವನ್ನು ಪೂಜ್ಯ ಸ್ಥಾನದ ಜೊತೆಗೆ ಸೂಕ್ಷ್ಮವಾಗಿ ಗಮನಿಸುತ್ತದೆ. ಉತ್ತಮ ಶಿಕ್ಷಕನಾಗ ಬಯಸುವವನು ಸದಾ ಅಧ್ಯಯನಶೀಲನಾಗಿರಬೇಕು ಮತ್ತು ಮಕ್ಕಳಿಗೆ ಸರಳವಾಗಿ, ರಂಜನೀಯವಾಗಿ ವಿಷಯಗಳನ್ನು ಮನದಟ್ಟು ಮಾಡಿಸಲು ಪ್ರಯತ್ನಿಸಬೇಕು, ಬೋಧನೆ ಮಾಡುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಬೇಕು. ಮಕ್ಕಳಿಗೆ ದೇಶದ ಮಹನೀಯರ ಮತ್ತು ಪ್ರತಿಭಾವಂತರ ಇತಿಹಾಸದ ಅರಿವು ಮೂಡಿಸಬೇಕು. ನಾನು ಅನಿವಾರ್ಯವಾಗಿ ಅವಲಂಬಿಸಿದ್ದ ಬೋಧಕ ವೃತ್ತಿ ನನಗೆ ಸಂತಸ ನೀಡಿದೆ, ಈ ವೃತ್ತಿಯಲ್ಲಿ ದೊರೆಯುವ ಸಂಭ್ರಮ ಎಲ್ಲಿಯೂ ದೊರೆಯಲು ಸಾಧ್ಯವಿಲ್ಲ ಎಂದು ನುಡಿದರು.ರಾಷ್ಟ್ರ ಮತ್ತು ಮನಸ್ಸುಗಳನ್ನು ಕಟ್ಟಲು ಉತ್ತಮ ಶಿಕ್ಷಣದ ಅಗತ್ಯವಿದ್ದು ಶಿಕ್ಷಣವನ್ನು ಕಡೆಗಣಿಸಿ ಬದಲಾವಣೆ ತರುವುದು ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಸ್ವಾಭಿಮಾನಿ, ಸ್ವಾವಲಂಬಿ ಮತ್ತು ಉತ್ತಮ ಗುಣದ ಜನಸಮೂಹದ ಅಗತ್ಯ ದೇಶಕ್ಕಿದ್ದು ಜನಸಂಪನ್ಮೂಲವನ್ನು ರಾಷ್ಟ್ರೀಯ ಸಂಪನ್ಮೂಲವಾಗಿಸುವವರು ಶಿಕ್ಷಕರು. ಮಕ್ಕಳಲ್ಲಿ ಮಾನವೀಯತೆ, ಆದರ್ಶ ಗುಣಗಳನ್ನು ಮೈಗೂಡಿಸಿ ನೈತಿಕತೆಯ ಪಾಠ ಕಲಿಸುವ ಮೂಲಕ ದೇಶದ ಮೌಲ್ಯಗಳನ್ನು ಉಳಿಸುವಲ್ಲಿ ಶಿಕ್ಷಕರು ನೆರವಾಗಬೇಕು. ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳು ನೀವು ಎಂದು ಶ್ಲಾಘಿಸಿದರು.ಜಿ.ಪಂ ಸದಸ್ಯ ಬಿ.ಪಿ.ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ವೀರಭದ್ರಸ್ವಾಮಿ ದೇವಾಲಯದಿಂದ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆಗೆ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ಮತ್ತು ಜಿ.ಪಂ ಸದಸ್ಯೆ ಹೇಮಾವತಿ ಕೃಷ್ಣಪ್ಪ, ತಾ.ಪಂ ಅಧ್ಯಕ್ಷ ಓಂಕಾರಪ್ಪ ಪುಷ್ಪಾಂಜಲಿ ಅರ್ಪಿಸಿ ಚಾಲನೆ ನೀಡಿದರು.ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ವಿದ್ಯಾರ್ಥಿನಿಯರು, ಡೊಳ್ಳು, ಮಹಿಳಾ ವೀರಗಾಸೆ, ನಾಸಿಕ್ ಬ್ಯಾಂಡ್‌ಗಳು ಮೆರುಗು ನೀಡಿದವು. ಯುಗಧರ್ಮ ರಾಮಣ್ಣ ಸಂಗಡಿಗರ ಜಾನಪದ ಗಾಯನ ಮತ್ತು ಹುಮಾಯೂನ್ ಹರ್ಲಾಪುರ ಅವರ ಸಂಗೀತ ಮುದ ನೀಡಿತು.ಶಿವಮೊಗ್ಗ ಕಸ್ತೂರಬಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಎಸ್.ನಟೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು, ಚಿಕ್ಕಮಗಳೂರು ಡಯಟ್‌ನ ಕೆ.ಎನ್.ಜಯಣ್ಣ, ಜಿ.ಪಂ ಸದಸ್ಯ ಎಚ್.ಸಿ.ಕಲ್ಮರುಡಪ್ಪ, ತಾ.ಪಂ ಉಪಾಧ್ಯಕ್ಷೆ ಶೋಭಾವೆಂಕಟೇಶ್,  ಸದಸ್ಯರಾದ ಶಶಿಕುಮಾರ್, ಯಶೋದಾ ತಿಪ್ಪೇಶ್, ಗೀತಾಪ್ರಭಾಕರ್, ಚಂದ್ರಕಲಾ ಮೋಹನ್, ಬೀರೂರು ಪುರಸಭೆಯ ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರ ಸಂಘದ ಪದಾಧಿಕಾರಿಗಳು ಪಾಲ್ಗೊಂಡರು.

ಪ್ರತಿಕ್ರಿಯಿಸಿ (+)