ಶಿಕ್ಷಕರಿಗೆ ಮುಕ್ತಿ ನೀಡಲು ಆಗ್ರಹ: ಪ್ರತಿಭಟನೆ

7
ಅಕ್ಷರ ದಾಸೋಹ ಯೋಜನೆ ಹಗರಣ

ಶಿಕ್ಷಕರಿಗೆ ಮುಕ್ತಿ ನೀಡಲು ಆಗ್ರಹ: ಪ್ರತಿಭಟನೆ

Published:
Updated:

ಸೋಮವಾರಪೇಟೆ: ಅಕ್ಷರ ದಾಸೋಹದಲ್ಲಿನ ಹಗರಣದಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು ಹಾಗೂ ಹಗರಣದ ನಿಜವಾದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಶಾಖೆ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಿತು.ಪ್ರತಿಭಟನೆಯನ್ನು ಚನ್ನಬಸಪ್ಪ ಸಭಾಂಗಣದ ಬಳಿಯಿಂದ ಪ್ರಾರಂಭಿಸಿ, ನಗರದ ಮುಖ್ಯ ಬೀದಿಗಳಲ್ಲಿ ತೆರಳಿ, ಬಳಿಕ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಅಕ್ಷರ ದಾಸೋಹ ಹಗರಣದಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು, ಈ ಹಗರಣದಲ್ಲಿ ಭಾಗಿಯಾದವರನ್ನು ತಕ್ಷಣವೇ ಬಂಧಿಸಿ ಶಿಕ್ಷಣ ಸಮೂಹಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ. ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.ಶಿಕ್ಷಕರನ್ನು ಈ ಹಗರಣದಿಂದ ಮುಕ್ತಿಗೊಳಿಸದೇ ಪದೇ ಪದೇ ಮಾನಸಿಕವಾಗಿ ಕಿರುಕುಳವನ್ನು ನೀಡಿದರೆ ಸೆಪ್ಟೆಂಬರ್ 13 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.2003ರಲ್ಲಿ ಪ್ರಾರಂಭವಾದ ಮಹತ್ವಾಕಾಂಕ್ಷೆಯ ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಕರು ಯಾವುದೇ ಚ್ಯುತಿ ಬಾರದ ಹಾಗೆ ನಿರ್ವಹಿಸಿಕೊಂಡುಬಂದಿದ್ದು, ದಾಸೋಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರತೀ ತಿಂಗಳು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿಗೆ ನೀಡುತ್ತಾ ಬಂದಿದೆ.ಆದರೆ, ಇತ್ತೀಚೆಗೆ ಕುಶಾಲನಗರ ಫಾತಿಮಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಮೊಹರು ಮತ್ತು ಸಹಿಯನ್ನು ಗುತ್ತಿಗೆದಾರ ಎಂ.ಇ. ಅಶ್ರಫ್ ಎಂಬುವವರು ನಕಲು ಮಾಡಿ ಸರ್ಕಾರಕ್ಕೆ ನಷ್ಟವುಂಟುಮಾಡಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ದೂರು ನೀಡಿದ್ದರು.ಈ ಪ್ರಕರಣದ ಕುರಿತು ತನಿಖೆ ನಡೆಸಲು ಕುಶಾಲನಗದ ಪೊಲೀಸ್ ಠಾಣಾಧಿಕಾರಿಗಳು, ಕುಶಾಲನಗರ ಹೋಬಳಿಯ ಎಲ್ಲಾ ಮುಖ್ಯ ಶಿಕ್ಷಕರಿಗೆ ದೂರವಾಣಿ ಕರೆ ಮಾಡಿ 72 ಮಾದರಿ ಸಹಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಮಾಹಿತಿ ನೀಡದ ಶಿಕ್ಷಕರನ್ನು ಅಪರಾಧಿಯನ್ನಾಗಿ ಹೊಣೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಾಗಿ ನೋಟೀಸು ನೀಡಿದ್ದಾರೆ. ಈ ಪ್ರಕರಣವನ್ನು ಸೋಮವಾರಪೇಟೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಯೋಗೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ಗೋಪಾಲ್, ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ. ಪ್ರಕಾಶ್, ಕಾರ್ಯದರ್ಶಿ ಮಂಜುನಾಥ್, ಪದಾಧಿಕಾರಿಗಳಾದ ಶಿವಕುಮಾರ್, ಜಯಮ್ಮ, ಬಸವರಾಜ್, ನವೀನಾ, ನಾಗೇಂದ್ರ, ಕವಿತಾ, ಯಶುಮತಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry