ಶಿಕ್ಷಕರಿಗೆ ವೈದ್ಯಕೀಯ ವಿಮೆ: ಕಾಗೇರಿ ಭರವಸೆ

7

ಶಿಕ್ಷಕರಿಗೆ ವೈದ್ಯಕೀಯ ವಿಮೆ: ಕಾಗೇರಿ ಭರವಸೆ

Published:
Updated:

ಬೆಂಗಳೂರು: ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರಿಗೆ ಗುಂಪು ವೈದ್ಯಕೀಯ ವಿಮೆ ಯೋಜನೆ ಜಾರಿಗೊಳಿಸುವ ಸಂಬಂಧ ಸರ್ಕಾರ ಪ್ರಯತ್ನ ನಡೆಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದರು.ಪ್ರಶ್ನೋತ್ತರ ವೇಳೆಯಲ್ಲಿ ಪಕ್ಷೇತರ ಸದಸ್ಯ ವೈ.ಎ. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರಿಗೆ ಸರ್ಕಾರ ಸಂಬಳ ಮಾತ್ರ ನೀಡುತ್ತಿದೆ. ಎಲ್ಲ ಸವಲತ್ತುಗಳನ್ನೂ ಸರ್ಕಾರವೇ ಕೊಡಲು ಸಾಧ್ಯವಾಗಲಾರದು. ಆದರೂ, ಮಾನವೀಯ ದೃಷ್ಟಿಯಿಂದ ಶಿಕ್ಷಕರು ಒಂದು ಪಾಲಿನ ಹಣ ಭರಿಸಿದರೆ, ವಿಮಾ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡು ಗುಂಪು ವೈದ್ಯಕೀಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು~ ಎಂದರು.`ಈ ನಿಟ್ಟಿನಲ್ಲಿ ಈಗಾಗಲೇ ಚರ್ಚೆ ನಡೆದಿದೆ. ಹಣಕಾಸು ಇಲಾಖೆ ಹಾಗೂ ವಿಮಾ ಕಂಪೆನಿಗಳ ಜತೆಗೂ ಸರ್ಕಾರ ಮಾತುಕತೆ ಮುಂದುವರಿಸಲಿದೆ~ ಎಂದು ಆಶ್ವಾಸನೆ ನೀಡಿದರು.ಬಿಡುಗಡೆಗೆ ಕ್ರಮ: ಕೆಲವು ಜಿಲ್ಲೆಗಳಲ್ಲಿ ಬಾಕಿ ಉಳಿದಿರುವ ಸರ್ಕಾರಿ ಶಾಲಾ ಶಿಕ್ಷಕರ ವೈದ್ಯಕೀಯ ಚಿಕಿತ್ಸಾ ವೆಚ್ಚದ ಬಿಲ್ ಬಿಡುಗಡೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.`ಮಾಹಿತಿ ಕೊರತೆಯಿಂದ ಕೆಲವು ಜಿಲ್ಲೆಗಳ ಶಿಕ್ಷಕರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚದ ಬಾಕಿ ಬಿಲ್ ಬಿಡುಗಡೆ ಮಾಡಿಲ್ಲ. ಅಗತ್ಯ ಮಾಹಿತಿ ನೀಡಿದ ಕೂಡಲೇ ಬಾಕಿ ಬಿಲ್ ಪಾವತಿಗೆ ಕ್ರಮ ಜರುಗಿಸಲಾಗುವುದು~ ಎಂದು ಕಾಗೇರಿ ಹೇಳಿದರು. 340 ಹುದ್ದೆಗಳ ಭರ್ತಿಗೆ ಕ್ರಮ: ರಾಜ್ಯದಲ್ಲಿ ಖಾಲಿಯಿರುವ 636 ಪಶು ವೈದ್ಯಾಧಿಕಾರಿಗಳ ಹುದ್ದೆಗಳ ಪೈಕಿ 340 ಹುದ್ದೆಗಳನ್ನು ವಿಶೇಷ ನೇಮಕಾತಿ ನಿಯಮದಡಿ ನೇಮಕಾತಿ ಮಾಡಿಕೊಳ್ಳುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿದ್ದು, ಆದ್ಯತೆ ಮೇರೆಗೆ ಖಾಲಿ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನಾ ಸಚಿವ ರೇವೂ ನಾಯಕ್ ಬೆಳಮಗಿ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ವೀರಕುಮಾರ್ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಮಂಜೂರಾದ 2392 ಪಶು ವೈದ್ಯಾಧಿಕಾರಿಗಳ ಹುದ್ದೆಗಳ ಪೈಕಿ 1716 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉಳಿದ 636 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry