ಶಿಕ್ಷಕರು ಅಧ್ಯಯನಶೀಲರಾಗಲು ಕರೆ

7

ಶಿಕ್ಷಕರು ಅಧ್ಯಯನಶೀಲರಾಗಲು ಕರೆ

Published:
Updated:

ದಾವಣಗೆರೆ: ದುರ್ಬಲವಾಗುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು ಎಂದು ವೀರೇಶಾನಂದ ಸರಸ್ವತಿ ಸ್ವಾಮೀಜಿ ಶಿಕ್ಷಕರಿಗೆ ಕರೆ ನೀಡಿದರು.ಹರಿಹರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ಮತ್ತು ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಬಾಪೂಜಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಪ್ರೌಢಶಾಲಾ ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನ' ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.ರಾಷ್ಟ್ರ ಸರ್ಕಾರದ ಕೈಯಲ್ಲಿ ಇಲ್ಲ; ಸೈನಿಕರ ಕೈಯಲಿಲ್ಲ; ಅದು ಶಿಕ್ಷಕರ ಕೈಯಲ್ಲಿದೆ. ಹಾಗಾಗಿ, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನಿರ್ಲಕ್ಷಿಸುವಂತಿಲ್ಲ. ದಿನದಿಂದ ದಿನಕ್ಕೆ ಆರ್ಥಿಕವಾಗಿ ಸದೃಢರಾಗುತ್ತಿರುವ ನಾವು, ಭಾವನಾತ್ಮಕವಾಗಿ ದುರ್ಬಲ ರಾಗುತ್ತಿದ್ದೇವೆ. ಪರಸ್ಪರರ ನಡುವೆ ಸಾಮರಸ್ಯ ಕಳೆದುಕೊಳ್ಳುತ್ತಿರುವುದರಿಂದ ನೈತಿಕ ಮತ್ತು ಕೌಟುಂಬಿಕ ಮೌಲ್ಯಗಳು ನಶಿಸುತ್ತಿವೆ. ಎಲ್ಲರ ಮನಸ್ಸುಗಳು ಶುಷ್ಕವಾಗಿವೆ. ಇದು ಆಘಾತಕಾರಿ ವಿಷಯ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಮಾಜದ ಸ್ವಾಸ್ಥ್ಯ ಕೆಡುತ್ತದೆ ಎಂದು ಅವರು ಎಚ್ಚರಿಸಿದರು.ಮೃಗತ್ವದಿಂದ ಮನುಷತ್ವದೆಡೆ; ಅಲ್ಲಿಂದ ದೈವತ್ವದೆಡೆ ಕೊಂಡೊಯ್ಯುವ ಸಂಸ್ಕಾರವನ್ನು ಶಿಕ್ಷಣ ನೀಡುತ್ತದೆ. ಅಂತಹ ಶಿಕ್ಷಣದಲ್ಲಿ ಸಂಸ್ಕಾರವೇ ಇಲ್ಲದಿದ್ದರೆ ಮೃಗೀಯ ಮನಸ್ಸುಗಳು ಜನ್ಮತಳೆಯುತ್ತವೆ. ಅವುಗಳಿಂದ ವಿಶ್ವನಾಶದಂತಹ ಕೃತ್ಯಗಳು ಸಂಭವಿಸುತ್ತವೆ. ಇಂತಹ ಅವಘಡಗಳನ್ನು ನಿಯಂತ್ರಿಸುವ ಶಕ್ತಿ ನಮ್ಮಲ್ಲಿದೆ ಎಂಬುದನ್ನು ಶಿಕ್ಷಕರು ಮನಗಾಣಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಶಿಕ್ಷಣ ಇಲಾಖೆ ಎಲ್ಲ ಇಲಾಖೆಗಳ ಮಾತೃ ಇದ್ದಂತೆ. ಈಗ ಅಲ್ಲೂ ಭ್ರಷ್ಟಾಚಾರ ಕಂಡುಬರುತ್ತಿದೆ. ಶಿಕ್ಷಕರು ರಾಜಕಾರಣಿಗಳ ಬೆನ್ನಿಗೆ ಬಿದ್ದಿದ್ದಾರೆ. ಇದರಿಂದ ಶಿಕ್ಷಕ-ಶಿಕ್ಷಕರ ನಡುವೆ ಸಾಮರಸ್ಯ ಹದಗೆಟ್ಟಿದೆ. ಪರಿಣಾಮ ಮಕ್ಕಳ ಕಲಿಕಾ ಗುಣಮಟ್ಟ ಕುಸಿದಿದೆ ಎಂದು ವಿಷಾದಿಸಿದರು.ಶಿಕ್ಷಕರಿಗೂ ಕರ್ತವ್ಯದ ಒತ್ತಡ ಹೆಚ್ಚುತ್ತಿದೆ. ಇದರಿಂದ ಶಿಕ್ಷಕರು ಮಾನಸಿಕ ಕ್ಷೋಬೆಗೆ ಒಳಗಾಗುತ್ತಿದ್ದಾರೆ. ಮಾನಸಿಕ ಚೈತನ್ಯಕ್ಕೆ ವ್ಯಕ್ತಿತ್ವ ವಿಕಸನದಂತಹ ಕಾರ್ಯಾಗಾರ ಚೇತೋಹಾರಿಯಾಗಬಲ್ಲುದು. ಶಿಕ್ಷಕರು ಇಂತಹ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವೀರೇಶಾನಂದ ಜೀ ಮಹಾರಾಜ್, ಪ್ರಕಾಶಾನಂದ ಜೀ ಸ್ವಾಮೀಜಿ, ಉಪ ನಿರ್ದೇಶಕ ಡಿ.ಕೆ. ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ, ಗುರುಪ್ರಸಾದ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry