ಶಿಕ್ಷಕರು ಎದುರಿಸುವ ಸವಾಲುಗಳು

7

ಶಿಕ್ಷಕರು ಎದುರಿಸುವ ಸವಾಲುಗಳು

Published:
Updated:
ಶಿಕ್ಷಕರು ಎದುರಿಸುವ ಸವಾಲುಗಳು

ಕರ್ನಾಟಕ ಸರ್ಕಾರ ಬರುವ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕಗಳಲ್ಲಿ ಲೈಂಗಿಕ ಶಿಕ್ಷಣ ಅಳವಡಿಸಲು ನಿರ್ಧರಿಸಿದೆ. ಶಿಕ್ಷಣ ತಜ್ಞರು ಈ ಕುರಿತು ಪಠ್ಯವನ್ನು ಅಂತಿಮಗೊಳಿಸಿದ್ದಾರೆ. ಆರಂಭದಲ್ಲಿ ಈ ಶಿಕ್ಷಣವನ್ನು ಹೈಸ್ಕೂಲು ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗುವುದು. ಈ ಶಿಕ್ಷಣದಲ್ಲಿ ಹದಿಹರೆಯದ ಜ್ಞಾನ, ಲೈಂಗಿಕವಾಗಿ ಹರಡುವ ಕಾಯಿಲೆಗಳು, ಏಡ್ಸ್ ಬಗ್ಗೆ ಅರಿವು ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ಇರುತ್ತದೆ.

ಇದಕ್ಕೂ ಮುನ್ನ ಶಿಕ್ಷಕರಿಗೆ ಇದರ ಕುರಿತು ತರಬೇತಿ ಕೊಡುವ ಬಗ್ಗೆ ಯೋಚಿಸಲಾಗಿದೆ.

ದೇಶದಲ್ಲಿ ಶೇ 50ರಷ್ಟು ಮಂದಿ ಚಿಕ್ಕ ವಯಸ್ಸಿನಲ್ಲಿಯೇ ವಿವಾಹಿತರಾಗುತ್ತಿದ್ದಾರೆ ಎಂದು ಕೆಲವು ಸ್ವಯಂಸೇವಾ ಸಂಸ್ಥೆಗಳ ಸಮೀಕ್ಷೆಗಳು ತಿಳಿಸಿವೆ. ಎಳೆಯ ಪ್ರಾಯದಲ್ಲೇ ಗಂಡು-ಹೆಣ್ಣು ಪರಸ್ಪರ ಆಕರ್ಷಣೆಯಲ್ಲಿ ಕದ್ದು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿರುವ ಸಂದರ್ಭಗಳು ಹೆಚ್ಚುತ್ತಿವೆ. `ಲವ್~ ಎಂಬುದು ಪರಿಶುದ್ಧ ಪ್ರೀತಿ ಎಂಬುದು ನಿಜವಾದರೂ ಆ ಹೆಸರಿನಲ್ಲಿ ಸ್ವಚ್ಛಂದ ಪ್ರವೃತ್ತಿ ಈಗ ಜಾಸ್ತಿಯಾಗುತ್ತಿರುವುದು ಆತಂಕದ ಸಂಗತಿ. ಇಂತಹ ಸನ್ನಿವೇಶದಲ್ಲಿ ಲೈಂಗಿಕ ಶಿಕ್ಷಣದ ತಿಳಿವಳಿಕೆಯನ್ನು ಪ್ರೌಢ ಶಿಕ್ಷಣದಲ್ಲಿ ಅಳವಡಿಸಿ ಬೋಧಿಸುವುದು ಅವಶ್ಯಕವೆನಿಸುತ್ತದೆ.ದೇಶದ ಜನಸಂಖ್ಯೆಯಲ್ಲಿ ಶೇ 22 ರಷ್ಟು ಜನ ಹದಿ ಹರೆಯದವರಾಗಿದ್ದಾರೆ. ಎಂದರೆ 10 ರಿಂದ 19 ವರ್ಷದೊಳಗಿನ ವಯಸ್ಸಿನವರು. ಈ ಹಂತದಲ್ಲಿ ದೈಹಿಕ ಬದಲಾವಣೆಗಳು ಸಂಭವಿಸುತ್ತವೆ. ಮಾನಸಿಕ ಗೊಂದಲಗಳೂ ಕಾಡಬಹುದು. ತಮಗೆ ಎದುರಾಗಬಹುದಾದ ಸಮಸ್ಯೆಗಳನ್ನು ಮನೆಯ ಹಿರಿಯರೊಂದಿಗೆ ಚರ್ಚಿಸಲು ಹಿಂಜರಿಕೆಯುಂಟಾಗಿ, ಶಿಕ್ಷಕರೆದುರು ಪ್ರಸ್ತಾಪಿಸಲು ಭಯವುಂಟಾಗಿ, ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಕೀಳರಿಮೆಯುಂಟಾಗಿ ಒಂದು ರೀತಿಯ ತೊಳಲಾಟ, ಸಂದಿಗ್ಧತೆಯಲ್ಲಿ ಹದಿಹರೆಯದವರು ಸಿಲುಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸಿ, ಅವರ ಗೊಂದಲಗಳಿಗೂ ಪರಿಹಾರ ಹುಡುಕಿ ಕೊಡುವ ಮಹತ್ಕಾರ್ಯವನ್ನು ಶಿಕ್ಷಣ ಕ್ರಮದಲ್ಲಿ  ಮಾಡಬೇಕಾಗುತ್ತದೆ.

 

ಈ ನಿಟ್ಟಿನಲ್ಲಿ ಸರ್ಕಾರ ಶಿಕ್ಷಕರಿಗೂ ತರಬೇತಿ ಕೊಟ್ಟು ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡಲು ಅಣಿಗೊಳಿಸುತ್ತಿದೆ. ಲೈಂಗಿಕ ವಿಚಾರಗಳಲ್ಲಿ ಮಡಿವಂತಿಕೆ ಸಮಾಜದಲ್ಲಿ ಇರುವುದರಿಂದ ಶಿಕ್ಷಕರಾಗಿ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸುವಲ್ಲಿ ಕೆಲವೊಂದು ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಗಂಡು ಮಕ್ಕಳಲ್ಲಿ ಯೌವನದ ಕಾಲದಲ್ಲಿ ಮೂಡುವ ದೈಹಿಕ ಬದಲಾವಣೆಗಳೆಂದರೆ 14-16 ವರ್ಷದ ಪ್ರಾಯದಲ್ಲಿ ಶೀಘ್ರ ಬೆಳವಣಿಗೆ, ಎತ್ತರ ಮತ್ತು ತೂಕಗಳಲ್ಲಿ ಹೆಚ್ಚಳ, ಮೀಸೆ ಹಾಗೂ ಗಡ್ಡ ಮೂಡುವುದು, ಧ್ವನಿ ಗಡಸಾಗುವದು, ಜನನಾಂಗಗಳ ಬೆಳವಣಿಗೆ. ಇದಲ್ಲದೆ ಅನೇಕ ಮಾನಸಿಕ ಮತ್ತು ನಡವಳಿಕೆ ಬದಲಾವಣೆಗಳೂ ಆಗುತ್ತವೆ.

 

ಈ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಭಯ, ಸಂಕೋಚ, ಕುತೂಹಲಗಳಿರುತ್ತವೆ. ಹೆಣ್ಣು ಮಕ್ಕಳತ್ತ ಆಕರ್ಷಣೆ, ಸುಂದರವಾಗಿ ಕಾಣಬೇಕೆಂಬ ಆಸಕ್ತಿ, ಎಲ್ಲರೂ ತಮ್ಮನ್ನು ಗುರುತಿಸಬೇಕು ಎಂಬ ಹಂಬಲ ಮೂಡುತ್ತದೆ. ಈ ಹಂಬಲ ಕೆಲವೊಮ್ಮೆ ತಪ್ಪು ದಾರಿ ತುಳಿಯಲು ಪ್ರೇರೇಪಿಸಬಹುದು. ಹಿರಿಯರ ಹಾಗೂ ಶಿಕ್ಷಕರ ಬುದ್ಧಿ ಮಾತುಗಳು ಆ ಸಮಯದಲ್ಲಿ ರುಚಿಸಲಾರವು. ಇಂತಹ ಹಂತದಲ್ಲಿ ಮಕ್ಕಳಿಗೆ ಪಠ್ಯದಲ್ಲಿಯೇ ಲೈಂಗಿಕ ಶಿಕ್ಷಣದಂತಹ ಸೂಕ್ಷ್ಮ ವಿಷಯ ವಸ್ತುವನ್ನು ಅಳವಡಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗುತ್ತದೆ.ಆಗ ಶಿಕ್ಷಕರು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳು ತಮಾಷೆ ಮಾಡುತ್ತಾರೆ. ಕೆಲವರು ಮುಜುಗರ ಪಟ್ಟುಕೊಳ್ಳಬಹುದು. ಕೆಲವೊಂದು ಲೈಂಗಿಕ ಪದಗಳನ್ನು ಸಾರ್ವಜನಿಕವಾಗಿ ಉಚ್ಚರಿಸುವುದು ಕಷ್ಟವಾಗುತ್ತದೆ. ಸಾಂದರ್ಭಿಕ ಚಿತ್ರಗಳನ್ನು ಬಳಸುವಾಗ ಹಿಂಜರಿಕೆ ಉಂಟಾಗುತ್ತದೆ.ಗ್ರಾಮಾಂತರ ಪ್ರದೇಶಗಳಲ್ಲಿ ಮಡಿವಂತಿಕೆ ಅಡ್ಡಿಯಾಗುತ್ತದೆ. ಲೈಂಗಿಕ ಶಿಕ್ಷಣ ನೀಡಿದರೆ ಹುಡುಗರು ಕೆಟ್ಟು ಹೋಗಬಹುದೆನ್ನುವ ಆತಂಕ. ಈ ಅರಿವನ್ನು ಮಕ್ಕಳಲ್ಲಿ ಮೂಡಿಸುವ ಉದ್ದೇಶದ ಬಗ್ಗೆ ಅರ್ಥ ಮಾಡಿಕೊಳ್ಳಲು ಅಸಮರ್ಥರಾದ ಪಾಲಕರು ಅಸಮಾಧಾನ ಸೂಚಿಸುವ ಸಾಧ್ಯತೆಯೂ ಇದೆ. ಇದಕ್ಕೆ ಶಿಕ್ಷಕರು ಗುರಿಯಾಗುತ್ತಾರೆ.ಲೈಂಗಿಕ ಶಿಕ್ಷಣವೆಂದರೆ ಗಂಡು-ಹೆಣ್ಣಿನ ಮಿಲನವನ್ನು ಹಸಿ ಹಸಿಯಾಗಿ ಹೇಳುವದು ಎಂದು ಅನೇಕರು ತಿಳಿದಿದ್ದಾರೆ. ಅದಕ್ಕಾಗಿಯೇ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕೊಡುತ್ತೇವೆಂದು ಸರ್ಕಾರ ಮುಂದೆ ಬಂದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದು ತಪ್ಪು. ಲೈಂಗಿಕ ಶಿಕ್ಷಣವೆಂದರೆ ಸ್ತ್ರೀ ಪುರುಷರ ದೇಹ ರಚನೆಗಳನ್ನು ತಿಳಿಸಿಕೊಡುವುದು. ಒಂದು ರೀತಿಯಲ್ಲಿ ಇದು ಜೀವಶಾಸ್ತ್ರದ ತರಗತಿ.ಆಹಾರ, ನಿದ್ರೆ, ನೀರಡಿಕೆಗಳಂತೆ ಲೈಂಗಿಕತೆ ಕೂಡ ಮನುಷ್ಯನ ಪ್ರಕೃತಿ ಸಹಜ ಕ್ರಿಯೆ. ಭಾರತದಂತಹ ಮಡಿವಂತಿಕೆಯ ದೇಶದಲ್ಲಿ ಬಹಿರಂಗವಾಗಿ ಏಕೆ ಗುಪ್ತವಾಗಿಯೂ ಅದರ ಬಗ್ಗೆ ಮಾತನಾಡುವುದು ಕೆಟ್ಟದ್ದು ಎನ್ನುವ ಭಾವನೆ ಬೇರೂರಿ ಬಿಟ್ಟಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಲೈಂಗಿಕ ಶಿಕ್ಷಣ ಜಾರಿಗೊಳಿಸಲಾಗಿದೆ.ರೋಗಮುಕ್ತ ಸ್ವಾಸ್ಥ್ಯ ದೇಶವನ್ನು ನಿರ್ಮಿಸಬೇಕಾದಲ್ಲಿ ಲೈಂಗಿಕ ಶಿಕ್ಷಣವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳಲ್ಲಿ ಅಳವಡಿಸಿ, ಎಳೆಯ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿಯುವ ಮಕ್ಕಳನ್ನು ಸರಿದಾರಿಗೆ ಕರೆತರಬೇಕಾದ ಗುರುತರ ಜವಾಬ್ದಾರಿ ಸರ್ಕಾರ, ಶಿಕ್ಷಣ ಇಲಾಖೆ, ಶಿಕ್ಷಕರು ಮತ್ತು ಪಾಲಕರದ್ದಾಗಿದೆ.

 

* ಆರೋಗ್ಯ ಕಾರ್ಯಕರ್ತರ ಪ್ರಯೋಜನವನ್ನು ತೆಗೆದುಕೊಳ್ಳುವುದು* ಪ್ರೊಜೆಕ್ಟರ್‌ಗಳಲ್ಲಿ ಸ್ಲೈಡ್ಸ್‌ಗಳನ್ನು ಅಳವಡಿಸಿ ಬೋಧಿಸುವುದು*ಪಾಲಕರ ಸಭೆಗಳನ್ನು ಕರೆದು ಮಕ್ಕಳು ಮನೆಯಲ್ಲಿ ಪ್ರಶ್ನೆ ಕೇಳಿದಾಗ ಮುಜುಗರ ಪಟ್ಟುಕೊಳ್ಳದೆ ಉತ್ತರಿಸಲು ತಿಳಿಸುವುದು* ಅಸುರಕ್ಷಿತ ಲೈಂಗಿಕತೆಯಿಂದ ಹರಡುವ ಭಯಾನಕ ಕಾಯಿಲೆಗಳ ಬಗ್ಗೆ ಮನದಟ್ಟು ಮಾಡಿಕೊಡುವುದು*ಮಾಧ್ಯಮಗಳಲ್ಲಿ ಲೈಂಗಿಕ ತಿಳಿವಳಿಕೆ ಕುರಿತ ಕಾರ್ಯಕ್ರಮಗಳು ಪ್ರಸಾರವಾದಲ್ಲಿ ವೀಕ್ಷಿಸಲು ತಿಳಿಸುವುದು* ನುರಿತ ತಜ್ಞರೊಂದಿಗೆ ಚರ್ಚೆ ಏರ್ಪಡಿಸಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry