ಶುಕ್ರವಾರ, ನವೆಂಬರ್ 22, 2019
22 °C

`ಶಿಕ್ಷಕರು ನಿಂತ ನೀರಾಗಬಾರದು'

Published:
Updated:
`ಶಿಕ್ಷಕರು ನಿಂತ ನೀರಾಗಬಾರದು'

ಬೆಂಗಳೂರು: `ಮಕ್ಕಳ ಮಾನಸಿಕ ಸಾಮರ್ಥ್ಯವನ್ನು ಊಹಿಸಿ ತಯಾರಿಸುವ ಪಠ್ಯಕ್ರಮ ಭಾರತೀಯ ಶಿಕ್ಷಣ ವ್ಯವಸ್ಥೆಯ ಪ್ರಮುಖ ದೋಷ' ಎಂದು ಸಿಂಗಪುರ ನ್ಯಾಷನಲ್ ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಎನ್.ಎಸ್.ಪ್ರಭು ಹೇಳಿದರು.ಜ್ಞಾನಭಾರತಿ ಆವರಣದಲ್ಲಿ `ಸೌತ್ ಇಂಡಿಯಾ ರಿಜಿನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್' (ಆರ್‌ಐಇಎಸ್‌ಐ) ಏರ್ಪಡಿಸಿರುವ `ದ್ವಿತೀಯ ಭಾಷೆಯ ಮೌಲ್ಯಮಾಪನ' ಕುರಿತ ಎರಡು ದಿನಗಳ ವಿಚಾರಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿದರು.`ಪಠ್ಯಕ್ರಮ ತಯಾರಿ ಶಿಕ್ಷಣ ವ್ಯವಸ್ಥೆಯಲ್ಲಿನ ಪ್ರಮುಖ ಘಟ್ಟ. ಆದರೆ ಮಕ್ಕಳ ಮಾನಸಿಕ ಸಾಮರ್ಥ್ಯವನ್ನು ಯಾರೋ ಕೆಲವರು ಕಲ್ಪಿಸಿಕೊಂಡು ಪಠ್ಯಕ್ರಮ ತಯಾರಿಸುವುದು ಉತ್ತಮ ಕ್ರಮವಲ್ಲ. ಮಕ್ಕಳ ಮಾನಸಿಕ ಮಟ್ಟ, ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಪಠ್ಯಕ್ರಮವನ್ನು ತಯಾರಿಸಬೇಕು' ಎಂದು ಸಲಹೆ ನೀಡಿದರು.`ಆಂಗ್ಲ ಭಾಷಾ ಶಿಕ್ಷಕರು ನಿಂತ ನೀರಾಗದೆ, ಸದಾ ಜ್ಞಾನದ ಹಸಿವಿನಿಂದ ಕೂಡಿರಬೇಕು. ಪ್ರತಿ ತರಗತಿಯಲ್ಲೂ ಮಕ್ಕಳನ್ನು ಕಲಿಕೆಗೆ ಪ್ರೇರೆಪಿಸಲು ನಾನಾ ಪ್ರಯೋಗವನ್ನು ಮಾಡುತ್ತಿರಬೇಕು. ಗುರುಗಳಾದವರು ತನ್ನ ಪ್ರತಿ ಜವಾಬ್ದಾರಿಯನ್ನು ಮೌಲ್ಯಮಾಪನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ವಿಷಯದ ಬಗ್ಗೆ ಎಷ್ಟೇ ಪಾಂಡಿತ್ಯ ಹೊಂದಿದ್ದರೂ, ತನಗೆ ಎಲ್ಲಾ ಗೊತ್ತಿದೆ ಎಂಬ ಅಹಂ  ಮನೋಭಾವ ಶಿಕ್ಷಕರಿಗೆ ಒಳ್ಳೆಯದಲ್ಲ. ವಿದ್ಯಾರ್ಥಿಗಳ ಆಸಕ್ತಿಯನ್ನು ಅರಿತು ಬೋಧನೆ ಮಾಡಿದರೆ ಮಾತ್ರ ಅದು ಪರಿಣಾಮಕಾರಿಯಾಗುತ್ತದೆ' ಎಂದರು.ಮಸ್ಕತ್ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಬಾಲಸುಬ್ರಮಣಿಯನ್ ಅವರು ಕಾರ್ಯಕ್ರಮ ಉದ್ಘಾಟಿಸಿ, `ಮೌಲ್ಯಮಾಪನ ಎಂಬುದು ಕಲಿಕೆಯ ಮಾನದಂಡವಲ್ಲ, ಅದು ಕಲಿಕೆಯನ್ನು ಉತ್ತೇಜಿಸುವ ಒಂದು ಪ್ರಕ್ರಿಯೆ' ಎಂದು ಅಭಿಪ್ರಾಯಪಟ್ಟರು. ಹೈದರಾಬಾದ್ `ಸಿಐಇಎಫ್‌ಎಸ್‌ಐ'ನ ನಿವೃತ್ತ ಪ್ರಾಧ್ಯಾಪಕ ಡಾ.ಜೇಕಬ್ ಥಾರು, ಆರ್‌ಐಇಎಸ್‌ಐನ ನಿರ್ದೇಶಕ ಎನ್.ಎಚ್.ಕಟಕದೊಂಡ   ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)