ಶಿಕ್ಷಕರ ಅವಸರ, ಮಳೆ ಮಧ್ಯೆ ಪುಸ್ತಕ ಮೇಳ

7

ಶಿಕ್ಷಕರ ಅವಸರ, ಮಳೆ ಮಧ್ಯೆ ಪುಸ್ತಕ ಮೇಳ

Published:
Updated:

ಚಿಕ್ಕಬಳ್ಳಾಪುರ: ಒಂದೆಡೆ ಜಡಿಮಳೆಯಿಂದ ಪುಸ್ತಕಗಳನ್ನು ರಕ್ಷಿಸಿಕೊಳ್ಳಲು ಪ್ರಕಾಶಕರು ಕಷ್ಟಪಡುತ್ತಿದ್ದರೆ, ಮತ್ತೊಂದೆಡೆ ಪುಸ್ತಕಗಳನ್ನು ಖರೀದಿಸಿ ಹೋಗುವ ಅವಸರ ಶಿಕ್ಷಕರದು.ಸರ್ಕಾರಿ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸಲು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪುಸ್ತಕ ಮೇಳದಲ್ಲಿ ಕಂಡು ಬಂದ ದೃಶ್ಯವಿದು.

ಸುಮಾರು 52 ಪ್ರಕಾಶಕರು 70 ಮಳಿಗೆಗಳಲ್ಲಿ ಬೆಳಿಗ್ಗೆಯಿಂದಲೆ ಪುಸ್ತಕಗಳನ್ನು ಜೋಡಿಸತೊಡಗಿದ್ದರು. ಸೋರುವ ನೀರು, ಜಡಿಮಳೆ ಮತ್ತು ಚಳಿಗಾಳಿಯಿಂದ ಪುಸ್ತಕಗಳನ್ನು ರಕ್ಷಿಸಲು ಪ್ಲಾಸ್ಟಿಕ್ ಶೀಟ್‌ಗಳ ಮೊರೆಹೋದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್‌ಪ್ರಸಾದ್ ಪುಸ್ತಕ ಮೇಳ ಉದ್ಘಾಟಿಸಿದರು. ಜಿಲ್ಲೆಯ ಸುಮಾರು 400 ಶಾಲೆಗಳ ಶಿಕ್ಷಕರು ಗ್ರಂಥಾಲಯಕ್ಕೆ ತಲಾ 3 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಕೊಳ್ಳಲು ಬರುವರೆಂದು ಕಾದಿದ್ದ ಪ್ರಕಾಶಕರಿಗೆ ನಿರಾಸೆ ಕಾದಿತ್ತು. ಮಳೆ ಕಾರಣದಿಂದ ಶಿಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಹೆಚ್ಚು ಮಂದಿ ಪ್ರಕಾಶಕರು ಇರುವುದರಿಂದ ನಮಗೆ ಆಯ್ಕೆಗೆ ಅವಕಾಶವಿದೆ ಎಂದು ಕೆಲ ಶಿಕ್ಷಕರು ಸಂತಸಪಟ್ಟರೆ, ಕೆಲವರು ನಿಗದಿತ ಹಣದಲ್ಲಿ ಪುಸ್ತಕಗಳನ್ನು ಕೊಂಡು ಹೋಗುವ ಅವಸರದಲ್ಲಿದ್ದರು.`ಜಿಲ್ಲೆಯ ಎಲ್ಲ ಶಾಲೆಗಳ ಶಿಕ್ಷಕರು ಬಂದು ಪುಸ್ತಕಗಳನ್ನು ಖರೀದಿಸಬಹುದು ಎಂಬ ನಿರೀಕ್ಷೆಯಲ್ಲಿ ವೈವಿಧ್ಯಮಯ ಮಕ್ಕಳ ಪುಸ್ತಕಗಳನ್ನು ತಂದಿದ್ದೇವೆ. ಆದರೆ ಶಿಕ್ಷಕರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರಿಂದ ನಮಗೆ ಸಾಗಣೆ ವೆಚ್ಚವೂ ಸಿಗದಂತಾಗಿದೆ' ಎಂದು ಪುಸ್ತಕ ವ್ಯಾಪಾರಿಯೊಬ್ಬರು ತಿಳಿಸಿದರು.ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಯಾದ ಎ.ಚಂದ್ರಶೇಖರಬಾಬು, ಕೆ.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಹಿರಿಯ ಉಪನ್ಯಾಸಕ ವೆಂಕಟರಮಣಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಎನ್.ವೆಂಕಟೇಶಪ್ಪ, ವಿಷಯ ಪರಿವೀಕ್ಷಕ ರಾಮಕೃಷ್ಣಪ್ಪ, ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳಾದ ಬಿ.ವೆಂಕಟೇಶಮೂರ್ತಿ, ಪಿ.ವೆಂಕಟೇಶ್ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry