ಗುರುವಾರ , ಮೇ 28, 2020
27 °C

ಶಿಕ್ಷಕರ ಕುಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾದೇವ ಗೋವಿಂದ ರಾನಡೆಯವರು ನಮ್ಮ ದೇಶ ಕಂಡ ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳಲ್ಲಿ ಅಗ್ರಗಣ್ಯರು. ಅವರೊಬ್ಬ ಖ್ಯಾತ ವಿದ್ವಾಂಸರು. ಅನೇಕ ಭಾಷೆಗಳಲ್ಲಿ ಪರಿಣತರಾದವರು. ನ್ಯಾಯಶಾಸ್ತ್ರದಲ್ಲಿ ಸಾಧನೆ ಮಾಡಿ ಹೈಕೋರ್ಟಿನ ನ್ಯಾಯಾಧೀಶರಾಗಿದ್ದವರು. ಅವರ ನ್ಯಾಯಪರತೆ, ಜ್ಞಾನ ಹಾಗೂ ನಿಷ್ಪಕ್ಷಪಾತ ವರ್ತನೆಗಳು ದಂತಕಥೆಗಳಾಗಿದ್ದವು.ರಾನಡೆಯವರು ಕೆಲವು ವರ್ಷ ಕಲಕತ್ತೆಯ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದರು. ಆಗ ಅವರಿಗೆ ಎಷ್ಟು ದೊಡ್ಡ ಹೆಸರಿತ್ತು ಎಂದರೆ ವಕೀಲರು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರಂತೆ ‘ಇಂದು ರಾನಡೆಯವರ ಕೋರ್ಟಿನಲ್ಲಿ ತೀರ್ಮಾನ ನನ್ನಂತೆ ಆಯಿತು.’ ರಾನಡೆಯವರು ತಮ್ಮ ವಾದವನ್ನು ಮೆಚ್ಚಿ ತೀರ್ಪು ಕೊಟ್ಟರೆ ಅದು ಆ ವಕೀಲರಿಗೆ ಸರ್ಟಿಫಿಕೇಟು ಇದ್ದ ಹಾಗೆ.ಮೊದಲೇ ರಾನಡೆಯವರಿಗೆ ಹೊಸ ಹೊಸ ಭಾಷೆಗಳನ್ನು ಕಲಿಯುವ ಹವ್ಯಾಸ. ಅವರಿಗೆ ಬಂಗಾಳಿ ಭಾಷೆ ಕಲಿಯುವ ಮನಸ್ಸಾಯಿತು. ಆದರೆ ಅದಕ್ಕೆ ಸಮಯದ ಅಭಾವ ಕಾಡತೊಡಗಿತು. ದಿನನಿತ್ಯ ಕೇಸುಗಳನ್ನು ಕೇಳಬೇಕು, ತೀರ್ಪುಗಳನ್ನು ಬರೆಯಬೇಕು, ಬರೆದು ಟೈಪು ಮಾಡಿದ ತೀರ್ಪುಗಳನ್ನು ತಪ್ಪಿಲ್ಲದಂತೆ ತಿದ್ದಬೇಕು ಹೀಗೆ ನೂರೆಂಟು ಕೆಲಸಗಳಲ್ಲಿ ದಿನ ಸವೆದು ಹೋಗುತ್ತಿದ್ದವು. ಆದರೆ ಅವರ ಭಾಷಾ ಕಲಿಕೆಯ ಅಪೇಕ್ಷೆ ಮಾತ್ರ ಹಾಗೆಯೇ ಉಳಿದಿತ್ತು.ಆಗೆಲ್ಲ ದೊಡ್ಡ ಅಧಿಕಾರಿಗಳಿಗೆ ಕ್ಷೌರ ಮಾಡಲು ಕ್ಷೌರಿಕರು ಮನೆಗೇ ಬರುತ್ತಿದ್ದರು. ಒಂದು ದಿನ ಒಬ್ಬ ಹಿರಿಯ ಕ್ಷೌರಿಕ ಇವರ ಮನೆಗೆ ಬೆಳಿಗ್ಗೆ ಬಂದ. ರಾನಡೆಯವರು ಸಜ್ಜಾಗಿ ಬಂದು ಅವನ ಮುಂದೆ ಕುಳಿತರು. ‘ತಮ್ಮ ಮಾತೃಭಾಷೆ ಯಾವುದು?’ ಎಂದು ತಮ್ಮ ವಿನಯದ ಮಾತುಗಳಲ್ಲೇ ಕೇಳಿದರು. ‘ಬಂಗಾಳಿ ಸ್ವಾಮಿ’ ಎಂದನಾತ.‘ಹಾಗಾದರೆ ನೀವು ನಿಮ್ಮ ಕೆಲಸ ಮುಗಿಸುವ ವರೆಗೆ ಆ ಭಾಷೆಯಲ್ಲೇ ಮಾತನಾಡುತ್ತಿರಿ, ಏನನ್ನಾದರೂ ಹೇಳುತ್ತಿರಿ. ನನಗೆ ಅರ್ಥವಾಗಲಿಕ್ಕಿಲ್ಲ ಎಂಬ ಚಿಂತೆ ಬೇಡ’ ಎಂದರು ರಾನಡೆ. ‘ಆಯ್ತು ಸ್ವಾಮಿ’ ಎಂದು ಆತ ತನ್ನ ಕೆಲಸ ಮತ್ತು ಮಾತು ಪ್ರಾರಂಭಿಸಿದ. ಅತನಿಗೆ ಬಂಗಾಳಿ ಭಾಷೆ ಮಾತನಾಡುವುದು ಮಾತ್ರವಲ್ಲ, ಸಾಹಿತ್ಯ ಪರಿಚಯವೂ ಸಾಕಷ್ಟಿದೆ ಎಂಬ ಅರಿವಾಯಿತು ಇವರಿಗೆ.ಆತ ಮತ್ತೆ ಬಂದಾಗ, ‘ನನಗೆ ತಾವು ಬಂಗಾಳಿ ಭಾಷೆಯಲ್ಲಿ ಮಾತನಾಡುವುದನ್ನು ಕಲಿಸುತ್ತೀರಾ?’ ಎಂದು ಕೇಳಿಕೊಂಡರು. ಆತ ಅರ್ಧ ಹೆದರಿಕೆಯಿಂದ ಅರ್ಧ ಸಂಕೋಚದಿಂದ, ‘ನನ್ನಿಂದ ಆ ಕಾರ್ಯ ಸಾಧ್ಯವೇ? ಅದೂ ತಮ್ಮಂಥವರಿಗೆ?’ ಎಂದು ಕೇಳಿದ. ‘ಪರವಾಗಿಲ್ಲ ಮೊದಲು ಸಣ್ಣ ಸಣ್ಣ ಶಬ್ದಗಳು, ವಾಕ್ಯಗಳು ಇವುಗಳಿಂದ ಪ್ರಾರಂಭ ಮಾಡಿದರಾಯಿತು’ ಎಂದರು ರಾನಡೆ. ಆತ ಒಪ್ಪಿ ನಡೆದ.ಈ ಸಂವಾದವನ್ನು ಕೇಳಿದ ರಾನಡೆಯವರ ಧರ್ಮಪತ್ನಿ, ‘ಇದೇನು ನೀವು ಬಂಗಾಳಿ ಭಾಷೆಯನ್ನು ಅವನಿಂದ ಕಲಿಯುವುದು? ನೀವು ಹೈಕೋರ್ಟಿನ ನ್ಯಾಯಾಧೀಶರು. ನಿಮಗೆ ಅಷ್ಟು ಒಳ್ಳೆಯ ವಿದ್ವಾಂಸರೆಂಬ ಹೆಸರಿದೆ. ಯಾರಾದರೂ ವಿದ್ವಾಂಸರನ್ನು ನಿಯುಕ್ತಿಗೊಳಿಸಿಕೊಂಡು ಭಾಷೆ ಕಲಿಯಬಾರದೇ. ನೀವು ಕ್ಷೌರಿಕನಿಂದ ಭಾಷೆ ಕಲಿಯುತ್ತಿದ್ದೀರಿ ಎಂದು ಗೊತ್ತಾದರೆ ಜನ ಏನೆಂದುಕೊಳ್ಳುತ್ತಾರೆ?’ ಎಂದು ಗೊಣಗಿದರು. ಅದಕ್ಕೆ ರಾನಡೆಯವರು, ‘ಇದನ್ನು ಸ್ಪಷ್ಟವಾಗಿ ತಿಳಿದುಕೊಂಡು ಬಿಡು.ಶಿಷ್ಯನಾಗಲು, ಗುರುವಾಗಲು ಯಾವ ಜಾತಿ, ಕೆಲಸ ಅಡ್ಡ ಬರುವುದಿಲ್ಲ. ಶಿಷ್ಯನಾದವನು ಕೇವಲ ಜ್ಞಾನವನ್ನೇ ಅಪೇಕ್ಷಿಸಬೇಕೇ ವಿನಾ ಗುರುವಿನ ಗೋತ್ರ, ಜಾತಿ, ಮತಗಳನ್ನು ಗಣಿಸಬಾರದು. ಗುರುಗೆ ಜಾತಿಯಿಲ್ಲ. ಗುರುಗಳ ಜಾತಿ ಒಂದೇ-ಅದು ಪ್ರೀತಿಯಿಂದ, ನಿರಪೇಕ್ಷೆಯಿಂದ ಕೇಳಿದವರಿಗೆ ಜ್ಞಾನ ನೀಡುವುದು.’ಶಿಕ್ಷಕತ್ವಕ್ಕೆ ಜಾತಿಯಿಲ್ಲ, ಕುಲವಿಲ್ಲ, ಹಿರಿಮೆ, ಗರಿಮೆಗಳಿಲ್ಲ. ಜ್ಞಾನಾರ್ಥಿಯಾಗಿ ಬಂದವರಿಗೆ ನಿರ್ವ್ಯಾಜ ಅಂತಃಕರಣದಿಂದ ತಮ್ಮ ಜೀವನದಲ್ಲಿ ಸಂಪಾದಿಸಿದ ಜ್ಞಾನವನ್ನು ಧಾರೆಯೆರೆಯುವುದೇ ಶಿಕ್ಷಕರ ಕುಲಕಸುಬು. ಅದು ಹಾಗಾದಾಗಲೇ ಜೀವನ ಸಮೃದ್ಧಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.