ಶಿಕ್ಷಕರ ನಿಯೋಜನೆ ಜ.1ರಿಂದ ರದ್ದು

7
ವಿಜಾಪುರ ಜಿಲ್ಲಾ ಪಂಚಾಯ್ತಿ ನಿರ್ಣಯ

ಶಿಕ್ಷಕರ ನಿಯೋಜನೆ ಜ.1ರಿಂದ ರದ್ದು

Published:
Updated:

ವಿಜಾಪುರ: ಮೂಲ ಸ್ಥಾನ ಬಿಟ್ಟು ವಿವಿಧ ಶಾಲೆ ಹಾಗೂ ವಿವಿಧ ಇಲಾಖೆಗಳಿಗೆ ನಿಯೋಜನೆಗೊಂಡಿರುವ ಶಿಕ್ಷಕರ ನಿಯೋಜನೆ ಆದೇಶವನ್ನು ರದ್ದುಗೊಳಿಸಲು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.ಜಿ.ಪಂ. ಅಧ್ಯಕ್ಷೆ  ಕಾವ್ಯಾ ದೇಸಾಯಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ಜರುಗಿದ ಸಭೆಯಲ್ಲಿ, ನಿಯೋಜಿತಗೊಂಡ ಶಿಕ್ಷಕರು 2013ರ ಜನವರಿ 1ರೊಳಗೆ ಮೂಲ ಸ್ಥಾನಗಳಿಗೆ ಹಿಂತಿರುಗಿ ಕಾರ್ಯನಿರ್ವಹಿಸುವಂತೆ ತ್ವರಿತವಾಗಿ ಆದೇಶ ಹೊರಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಯಿತು.`ಪ್ರಭಾವ ಬಳಸಿ, ಹಣ ನೀಡಿ ಅಗತ್ಯವಿಲ್ಲದಿದ್ದರೂ ನಗರ ಪ್ರದೇಶಕ್ಕೆ ನಿಯೋಜನೆ ಮೇರೆಗೆ ಶಿಕ್ಷಕರು ತೆರಳುತ್ತಿರುವುದು, ಶೈಕ್ಷಣಿಕ ಅಸಮಾನತೆಗೆ ಕಾರಣವಾಗಿದೆ. ನಗರದ ಕೆಲ ಶಾಲೆಗಳಲ್ಲಿ 33 ವಿದ್ಯಾರ್ಥಿಗಳಿಗೆ 6 ರಿಂದ 7 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ 100 ವಿದ್ಯಾರ್ಥಿಗಳಿಗೆ ಕೇವಲ ಒಬ್ಬ ಶಿಕ್ಷಕರು ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಇಂಗ್ಲಿಷ್  ಹಾಗೂ ವಿಜ್ಞಾನ ಶಿಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ನಿಯೋಜನೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವ್ಯವಹಾರದಲ್ಲಿ ತೊಡಗಿದ್ದಾರೆ' ಎಂದು ಜಿ.ಪಂ. ಸದಸ್ಯರಾದ ದೇವಾನಂದ ಚವ್ಹಾಣ, ಯಲ್ಲಪ್ಪ ಹಾದಿಮನಿ, ಶ್ರಿಶೈಲಗೌಡ ಬಿರಾದಾರ, ಅನುಸೂಯಾ ಜಾಧವ, ಉಮೇಶ ಕೋಳಕೂರ ಮತ್ತಿತರ ಸದಸ್ಯರು ಗಂಭೀರ ಆರೋಪ ಮಾಡಿದರು.`ವಾಸ್ತವವಾಗಿ ಶಿಕ್ಷಕರ ಕೊರತೆಯನ್ನು ನೀಗಿಸಲು ಶೈಕ್ಷಣಿಕ ಹಿತ ದೃಷ್ಟಿಯಿಂದ ಮಾತ್ರ ನಿಯೋಜನೆ ಮಾಡಿದರೆ ಅಭ್ಯಂತರವಿಲ್ಲ. ಈಗಾಗಲೇ ನಿಯೋಜನೆಗೊಂಡಿರುವ ಎಲ್ಲ ಶಿಕ್ಷಕರನ್ನು ವಾಪಸ್ ಕರೆಸಬೇಕು. ನಿಯೋಜನೆ ಆದೇಶವನ್ನು ರದ್ದುಗೊಳಿಸಬೇಕು' ಎಂದು ಸದಸ್ಯರು ಪಟ್ಟು ಹಿಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಅಧ್ಯಕ್ಷರ ಪರವಾಗಿ ಹೇಳಿಕೆ ನೀಡಿ ಶಿಕ್ಷಕರ ನಿಯೋಜನೆಯನ್ನು ರದ್ದುಗೊಳಿಸಲಾಗುವುದು ಎಂದು ಪ್ರಕಟಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುತ್ತಿ ಜಂಬುನಾಥ್, ಶಿಕ್ಷಕರ ನಿಯೋಜನೆ ಆದೇಶವನ್ನು ಜನವರಿ 1ರೊಳಗಾಗಿ ರದ್ದುಗೊಳಿಸುವಂತೆ ಡಿಡಿಪಿಐಗೆ ನಿರ್ದೇಶನ ನೀಡಿದರು.ಅಕ್ಷರ ದಾಸೋಹ ಬಿಸಿಯೂಟಕ್ಕೆ ಸಿಲಿಂಡರ್‌ಗಳ ತೀವ್ರ ಕೊರತೆ ಉಂಟಾಗಿದ್ದು, ಈ ಸಮಸ್ಯೆಯನ್ನು ತ್ವರಿತವಾಗಿ ಬಗೆ ಹರಿಸಲು ಸದಸ್ಯರು ಸಭೆಯಲ್ಲಿ ಮನವಿ ಮಾಡಿಕೊಂಡರು. ಈ ಸಮಸ್ಯೆ ತ್ವರಿತವಾಗಿ ಬಗೆಹರಿಸುವಂತೆ ಜಿ.ಪಂ. ಯೋಜನಾ ಧಿಕಾರಿ ಬಾಗವಾನ ಅವರಿಗೆ ಸಿಇಒ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರತಿ ತಿಂಗಳು ಒಂದೊಂದು ತಾಲ್ಲೂಕಿನ ಪ್ರಗತಿ ಪರಿಶೀಲನೆ ಸಭೆ ನಡೆಸಲು ತೀರ್ಮಾನಿಸಲಾಯಿತು.ಜಿಲ್ಲಾ ಪಂಚಾಯಿತಿ ಸಭೆಗೆ ವಿವಿಧ ತಾಲ್ಲೂಕುಗಳ ಶಿಕ್ಷಣ, ವಿವಿಧ ಯೋಜನೆಗಳ ಪ್ರಗತಿಯ ಕುರಿತಂತೆ ಮಾಹಿತಿ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತ ರಾಜ್ ಸಹಾಯಕ ಎಂಜಿನಿಯರರನ್ನು ಜಿ.ಪಂ. ಸಭೆಗೆ ಆಹ್ವಾನಿಸಲು ನಿರ್ಣಯಿಸಲಾಯಿತು. ಜಿಲ್ಲಾ ಪಂಚಾಯ್ತಿ ವಿವಿಧ ಸ್ಥಾಯಿ ಸಮಿತಿಗಳನ್ನು ಪುನರ್ ರಚಿಸಲು  ನಿರ್ಣಯಿಸಲಾಯಿತು.ಸಾಹಿತ್ಯ ಸಮ್ಮೇಳನಕ್ಕೆ ರೂ.1ಲಕ್ಷ  

ವಿಜಾಪುರದಲ್ಲಿ ಜರುಗಲಿರುವ ಸಾಹಿತ್ಯ ಸಮ್ಮೇಳನಕ್ಕೆ ರೂ.1ಲಕ್ಷ ನೆರವನ್ನು ಜಿಲ್ಲಾ ಪಂಚಾಯ್ತಿಯಿಂದ ನೀಡಲು ಹಾಗೂ ತೊರವಿಯಲ್ಲಿ ಜರುಗಲಿರುವ  ಸಿದ್ಧೇಶ್ವರ ಜಾನುವಾರು ಜಾತ್ರೆಯ ಜಾನುವಾರುಗಳಿಗೆ ನೀಡುವ ಬಹುಮಾನಕ್ಕೆ 10 ಗ್ರಾಂ ಚಿನ್ನ ಖರೀದಿಸಿ ನೀಡಲು ತೀರ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry