ಶಿಕ್ಷಕರ ನೇಮಕಕ್ಕೆ ಕ್ರಮ: ಕಾಗೇರಿ

7

ಶಿಕ್ಷಕರ ನೇಮಕಕ್ಕೆ ಕ್ರಮ: ಕಾಗೇರಿ

Published:
Updated:

ಧಾರವಾಡ: “ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ಸರ್ಕಾರ ತೀವ್ರ ಗಮನ ಹರಿಸಿದೆ. ಶಾಲೆಗಳಲ್ಲಿನ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿ ಬೋಧನಾ ಅಗತ್ಯತೆಗೆ ಪೂರಕವಾಗಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು” ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಇಲ್ಲಿನ ಡಯಟ್‌ನಲ್ಲಿ ಈಚೆಗೆ ಆಯೋಜಿಸಿದ್ದ ಡಿಇಡಿ ಪ್ರಶಿಕ್ಷಣಾರ್ಥಿಗಳ ಜಿಲ್ಲಾಮಟ್ಟದ ಯುವಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ರಾಜ್ಯದಲ್ಲಿರುವ ಆರು ಲಕ್ಷ ಸರ್ಕಾರಿ ಉದ್ಯೋಗಿಗಳಲ್ಲಿ ಅರ್ಧದಷ್ಟು ನಮ್ಮ ಶಿಕ್ಷಣ ಇಲಾಖೆಯ ಬೋಧಕ-ಬೋಧಕೇತರ ಸಿಬ್ಬಂದಿಯೇ ಇದೆ. ಶಿಕ್ಷಕರ ಹಾಗೂ ಮಕ್ಕಳ ಅನುಪಾತ 1:40 ಇರಬೇಕೆಂಬ ಬದ್ಧತೆ ಇತ್ತು. ಆದರೆ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಹಕ್ಕು ಕಾಯ್ದೆ-2009ರ ಪ್ರಕಾರ ಈ ಅನುಪಾತ 1:30 ಇರಬೇಕಾಗಿದೆ. ಆದರೆ ಸದ್ಯದ ನಮ್ಮ ರಾಜ್ಯದ ಶಾಲಾ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ 28 ಮಕ್ಕಳಿಗೆ ಒಬ್ಬ ಶಿಕ್ಷಕರು ಬೋಧಿಸುತ್ತಿದ್ದಾರೆ’ ಎಂದರು.‘ನಿವೃತ್ತಿ ವಯೋಮಾನದ ಹೆಚ್ಚಳದಿಂದಾಗಿ ಶಿಕ್ಷಕರ ಹುದ್ದೆಗಳು ಖಾಲಿಯಾಗದೇ ಇರುವ ಕಾರಣದಿಂದ ಇತ್ತಿಚೆಗೆ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿಲ್ಲ. ಬರುವ ಶೈಕ್ಷಣಿಕ ವರ್ಷದ ಅವಶ್ಯಕತೆಗಳನ್ನು ಗಮನಿಸುವ ಮೂಲಕ ಶಿಕ್ಷಕರ ನೇಮಕ ಮಾಡಿಕೊಳ್ಳಲು ಕ್ರಮ ಕೈಕೊಳ್ಳಲಾಗುವುದು’ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಡಯಟ್‌ನ ಸೇವಾಪೂರ್ವ ಶಿಕ್ಷಣ ವಿಭಾಗ ಹೊರತಂದ ದಾರಿದೀಪ ವಿಶೇಷ ಅಧ್ಯಯನ ಸಂಚಿಕೆಯನ್ನು ಸಚಿವರು ಬಿಡುಗಡೆ ಮಾಡಿದರು. ಅಪರ ಆಯುಕ್ತ ವೆಂಕಟೇಶ ಮಾಚಕನೂರ ಅಧ್ಯಕ್ಷತೆ ವಹಿಸಿದ್ದರು. ವೈ.ಟಿ. ಗುರುಮೂರ್ತಿ, ಜಿ.ಎಸ್. ನಾಯ್ಕ, ಶಿವಶಂಕರ ಹಿರೇಮಠ. ಭಾಸ್ಕರ ಭಟ್, ಶ್ರೀನಿವಾಸ ಪಾಟೀಲ ಹಾಜರಿದ್ದರು.ಎಸ್.ಬಿ. ಗಾಮನಗಟ್ಟಿ ಸಚಿವರಿಗೆ ಮನವಿ ಸಲ್ಲಿಸಿದರು. ಮನೋಹರ ದೇಶಪಾಂಡೆ ಸ್ವಾಗತಿಸಿದರು. ವಿದ್ಯಾ ಕುಂದರಗಿ ನಿರೂಪಿಸಿದರು. ಆರ್.ಎಚ್. ಶಿವಳ್ಳಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry