ಶಿಕ್ಷಕರ ಪ್ರತಿಭಟನೆಗೆ ಜಿ.ಪಂ. ಅಧ್ಯಕ್ಷ ಗರಂ

7
ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಕೆಡಿಪಿ ಸಭೆ

ಶಿಕ್ಷಕರ ಪ್ರತಿಭಟನೆಗೆ ಜಿ.ಪಂ. ಅಧ್ಯಕ್ಷ ಗರಂ

Published:
Updated:

ಮಡಿಕೇರಿ: ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಿರುಕುಳ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿಕ್ಷಕರು ಪ್ರತಿಭಟನೆ ಮಾಡಿರುವ ಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಶಿವಪ್ಪ ಖಂಡಿಸಿದರು.ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯಿತಿ  ಅಧಿಕಾರಿಗಳ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಕ್ಷರ ದಾಸೋಹದಿಂದ ಶಿಕ್ಷಕರಿಗೆ ಕಿರುಕುಳ ನೀಡುತ್ತಿದ್ದಾರೆಂದು ಸೋಮವಾರಪೇಟೆ ತಾಲ್ಲೂಕಿನ ಶಿಕ್ಷಕರು ಏಕಾಏಕಿ ಪ್ರತಿಭಟನೆ ಮಾಡಿದ್ದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.ಯಾವುದೇ ಸಮಸ್ಯೆಗಳಿದ್ದಲ್ಲಿ ಮೇಲಾಧಿಕಾರಿ ಅವರ ಗಮನಕ್ಕೆ ತಂದು ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಶಿಕ್ಷಕರೇ ಈ ನಿರ್ಧಾರ ಕೈಗೊಳ್ಳುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಂಜನಪ್ಪ ಮಾತನಾಡಿ, ಶಿಕ್ಷಣ ಇಲಾಖೆ ಆಗು ಹೋಗುಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರೇ ಜವಾಬ್ದಾರರಾಗುತ್ತಾರೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.ಅಧ್ಯಕ್ಷ ಬಿ. ಶಿವಪ್ಪ ಮಾತನಾಡಿ, ಜಿಲ್ಲೆಯಲ್ಲಿನ ಸಾಕಷ್ಟು ಬಡವರಿಗೆ ಬಿಪಿಎಲ್ ಕಾರ್ಡು ಇನ್ನೂ ಲಭ್ಯವಾಗಿಲ್ಲ. ಅಂತಹ ಕುಟುಂಬದವರಿಗೆ ಬಿಪಿಎಲ್ ಕಾರ್ಡು ನೀಡಿ ಅನ್ನಭಾಗ್ಯ ಯೋಜನೆ ಕಲ್ಪಿಸಬೇಕು. ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸಗಟು ಸಾಗಾಣಿಕೆ ವೆಚ್ಚ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಆಹಾರ ಇಲಾಖೆ ಉಪನಿರ್ದೇಶಕ ಎಸ್.ಇ.ಮಹದೇವಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶದ ನ್ಯಾಯಬೆಲೆ ಅಂಗಡಿಗಳಿಗೆ 1 ಕ್ವಿಂಟಾಲ್ ಅಕ್ಕಿಗೆ ರೂ.1 ಮತ್ತು ರೂ.6 ಅಮಾಲಿ ವೆಚ್ಚವನ್ನು ಭರಿಸಲಾಗುತ್ತದೆ. ಇನ್ನೂ ಹೆಚ್ಚಿಸಬೇಕೆಂದು ಅಂಗಡಿ ಮಾಲೀಕರು ಒತ್ತಾಯಿಸುತ್ತಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.ಅನ್ನಭಾಗ್ಯ ಯೋಜನೆಯಡಿ ರೂ1 ಗಿಂತ ಹೆಚ್ಚು ಹಣ ಪಡೆಯುತ್ತಿದ್ದ 12 ನ್ಯಾಯ ಬೆಲೆ ಅಂಗಡಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. 1 ನ್ಯಾಯ ಬೆಲೆ ಅಂಗಡಿಯ ಪರವಾನಗಿಯನ್ನು ಈಗಾಗಲೇ ರದ್ದುಪಡಿಸಲಾಗಿದೆ. ಎಪಿಎಲ್ ಕುಟುಂಬದಲ್ಲಿ ಅಡುಗೆ ಅನಿಲ ಇಲ್ಲದಿರುವ ಕುಟುಂಬಗಳಿಗೆ 3 ಲೀಟರ್ ಸೀಮೆ ಎಣ್ಣೆ, ಬಿಪಿಎಲ್ ಕುಟುಂಬಗಳಿಗೆ 5 ಲೀಟರ್ ವಿತರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಾರಾವ್ ಮಾತನಾಡಿ, ಕೆಲವು ಅಂಗಡಿಗಳು ಗ್ರಾಹಕರಿಗೆ ಪಡಿತರ ವಿತರಣೆ ಮಾಡದೆ ಬಾಗಿಲು ಮುಚ್ಚಿರುತ್ತವೆ. ತಿಂಗಳ 30 ದಿನವೂ ಸಹ ಬಾಗಿಲು ತೆರೆದು ಗ್ರಾಹಕರಿಗೆ ಪಡಿತರ ವಿತರಣೆ ಮಾಡಬೇಕು ಎಂದರು.2008-09ರಲ್ಲಿ ಅನುಮೋದನೆ ದೊರೆತ ವಸತಿ ಯೋಜನೆಗಳು ಪೂರ್ಣಗೊಳ್ಳದಿರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿದ ಅಧ್ಯಕ್ಷ ಬಿ.ಶಿವಪ್ಪ, ಬಾಕಿ ಉಳಿದಿರುವ ವಸತಿ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಿ ಹೊಸ ಮನೆಗಳನ್ನು ನಿರ್ಮಾಣ ಮಾಡುವತ್ತ ಕಾರ್ಯ ಪ್ರವೃತ್ತರಾಗುವಂತೆ ಸೂಚಿಸಿದರು.ಕನ್ನಡ ಜಾಗೃತಿ ಸಮಿತಿಯ ಸದಸ್ಯ ಟಿ.ಪಿ.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿನ ಗಡಿ ಪ್ರದೇಶ ಸೇರಿದಂತೆ ನಾನಾ ಕಡೆಗಳಲ್ಲಿ ನಾಮಫಲಕಗಳಲ್ಲಿ ಕನ್ನಡ ಭಾಷಾ ಬಳಕೆ ಸಂಬಂಧಿಸಿದಂತೆ  ಹಲವು ಬಾರಿ ಚರ್ಚೆ ನಡೆದಿದ್ದರೂ ಸಹ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲೆಯ ಅಂಗಡಿ ಮುಂಗಟ್ಟು ಮತ್ತಿತರ ಭಾಗಗಳಲ್ಲಿ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಆಯಾ ಗ್ರಾಮ ಪಮಚಾಯಿತಿ ಪಿ.ಡಿ.ಓಗಳು ಪರವಾನಗಿ ನೀಡುವಾಗ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry