ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲೇ ದೋಷ!

7

ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲೇ ದೋಷ!

Published:
Updated:

ಗುಲ್ಬರ್ಗ: ಶಿಕ್ಷಕರ ವರ್ಗಾವಣೆ ಸಂಬಂಧ 2007ರಿಂದ ಜಾರಿಯಾದ ನೂತನ ಕಾಯ್ದೆ ಎಲ್ಲರಿಗೂ ನ್ಯಾಯ ದೊರಕಿಸಿಲ್ಲ. ಗ್ರಾಮೀಣ ಭಾಗದಲ್ಲಿ ಪಾಠ ಹೇಳಿಕೊಡುವ ಆರೋಗ್ಯವಂತ ಶಿಕ್ಷಕನೊಬ್ಬ ಕನಿಷ್ಠ ತಾಲ್ಲೂಕು ವಲಯಕ್ಕೆ ವರ್ಗಾವಣೆಗೊಳ್ಳಲು ಕೂಡಾ ಈ ಕಾಯ್ದೆ ಅವಕಾಶ ನೀಡದಿರುವುದು ಶಿಕ್ಷಕರಿಗೆ ಬಿಸಿತುಪ್ಪವಾಗಿದೆ.

ಈಗ ಜಾರಿಯಲ್ಲಿರುವ ನಿಯಮದ ಪ್ರಕಾರ ಎ, ಬಿ ಮತ್ತು ಸಿ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿದ ನಂತರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರು. ಸೇವೆ ಸಲ್ಲಿಸಿರುವ ಅವಧಿಯನ್ನು ಪರಿಗಣಿಸಿ ಜೇಷ್ಠತಾ ಅಂಕಗಳನ್ನು ನೀಡುವ ಮೂಲಕ ವರ್ಗಾವಣೆ ಕೌನ್ಸೆಲಿಂಗ್ ಪಟ್ಟಿಯನ್ನು ಸಿದ್ಧಗೊಳಿಸಲಾಗುತ್ತದೆ. ಈ ಹಂತದಲ್ಲಿ ಅಂಗವಿಕಲರು, ವಿಧವೆ, ಮಹಿಳೆ, ದಂಪತಿ ಮತ್ತು ಗಂಭೀರ ಅನಾರೋಗ್ಯ ಪೀಡಿತ ಶಿಕ್ಷಕರನ್ನು ಕೌನ್ಸೆಲಿಂಗ್‌ನಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ‘ಎ’ ಹಾಗೂ ‘ಬಿ’ ವಲಯದ ಖಾಲಿ ಸ್ಥಾನಗಳು ಆದ್ಯತೆಯಲ್ಲಿದ್ದವರಿಗೇ ದೊರೆಯುತ್ತವೆ. ‘ಸಿ’ ವಲಯದ ಸಾಮಾನ್ಯ ಶಿಕ್ಷಕನಿಗೆ ಕೌನ್ಸೆಲಿಂಗ್ ಪಾಳಿ ಬರುವಷ್ಟರಲ್ಲಿ ಮತ್ತೆ ‘ಸಿ’ ವಲಯದಲ್ಲೇ ಖಾಲಿ ಜಾಗ ಕಾಣುತ್ತದೆ!

ಆದ್ಯತೆ ಪಡೆಯುವವರ ಪಟ್ಟಿಯ ಹೊರತಾಗಿರುವ ‘ಸಿ’ ವಲಯದ ಗ್ರಾಮೀಣ ಭಾಗದ ಸಾಮಾನ್ಯ ಶಿಕ್ಷಕನೊಬ್ಬ ವರ್ಗಾವಣೆಗೆ ಅರ್ಜಿ ಸಲ್ಲಿಸಿದರೆ ಪ್ರತಿ ವರ್ಷವೂ ಅದು ಮುಂದೂಡಿಕೆಯಾಗುವ ಅನಿವಾರ್ಯತೆ ಕಾಯ್ದೆಯಲ್ಲೇ ಇದೆ. ಹೀಗಾಗಿ ‘ಸಿ’ ವಲಯದ ಶಿಕ್ಷಕರು ‘ಬಿ’ ವಲಯಕ್ಕೆ ಬರಲು ಎಷ್ಟು ವರ್ಷ ಕಳೆದರೂ ಅವಕಾಶವಾಗುವುದೇ ಇಲ್ಲ.

25ಕ್ಕಿಂತ ಹೆಚ್ಚು ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದರೂ ‘ಬಿ’ ವಲಯಕ್ಕೆ ಬರಲು ಸಾಧ್ಯವಾಗದ ಶಿಕ್ಷಕರು ರಾಜ್ಯದಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ಸೇವೆ ಆರಂಭಿಸಿದ ಶಾಲೆಯಲ್ಲೇ ನಿವೃತ್ತಿಯಾಗಬೇಕಾದ ಅನಿವಾರ್ಯತೆ ಇಂಥ ಶಿಕ್ಷಕರಿಗೆ ಇದೆ. ನಿವೃತ್ತಿ ಅಂಚಿನಲ್ಲಿ ಸ್ವಂತ ಊರಿಗೆ ಹೋಗಬೇಕೆಂದು ಹಿರಿಯ ಶಿಕ್ಷಕರು ಕಾಣುತ್ತಿರುವ ಕನಸು ನೂತನ ಕಾಯ್ದೆಯಿಂದಾಗಿ ನನಸಾಗುತ್ತಿಲ್ಲ.

 ‘ಕಾಯ್ದೆಯಲ್ಲಿ ಪಾರದರ್ಶಕತೆ ಇದೆ. ಆದರೆ ಏನು ಮಾಡುವುದು; ಕಳೆದ 28ವರ್ಷದಿಂದ ಪೇಠಶಿರೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಗುಲ್ಬರ್ಗಕ್ಕೆ ಹತ್ತಿರದ ಕನಿಷ್ಠ ‘ಬಿ’ ವಲಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ’ ಎನ್ನುವುದು ಪ್ರೌಢಶಾಲಾ ಶಿಕ್ಷಕ ಹಸೀನ್ ಸಾಬ್ ಅವರ ಅಸಹಾಯಕತೆ.

 ‘ಎಷ್ಟು ವರ್ಷ ನಾವು ಹಳ್ಳಿಯೊಳಗ್ ಸಾಯ್ಬೇಕು. ಹೊರಟ್ಟಿಯವರು ಮಾಡಿರೋ ಕಾಯ್ದೆಯಿಂದ ನಮಗೇನು ಅನುಕೂಲ ಆಗಿಲ್ಲ. ವರ್ಷಕ್ಕೊಮ್ಮೆ ವರ್ಗಾವಣೆಗೆ ಅರ್ಜಿ ಕೊಡ್ತಾನೆ ಇದ್ದೀವಿ’ ಎನ್ನುವುದು ಅಳಂದ ತಾಲ್ಲೂಕು ಢಂಗಾಪುರದಲ್ಲಿ 27ವರ್ಷದಿಂದ ಕೆಲಸ ಮಾಡುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕ ಸಿದ್ರಾಮಪ್ಪ ಕಂಬಾರರ ಆಳಲು.

 ನೂತನ ಕಾಯ್ದೆಗೆ ತಿದ್ದುಪಡಿ ತಂದು ‘ಬಿ’ ವಲಯದ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ಮಾಡಬೇಕು. ಆದ್ಯತಾ ಪಟ್ಟಿಯನ್ನು ಕಡಿಮೆಗೊಳಿಸಬೇಕು. ಹಾಗಾದಾಗ ಮಾತ್ರ ಗ್ರಾಮೀಣ ವಲಯದಲ್ಲಿ ಬಹಳ ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಿಗೂ ವರ್ಗಾವಣೆ ಪಡೆದುಕೊಳ್ಳಲು ಅವಕಾಶವಾಗಬಹುದು’ ಎನ್ನುತ್ತಾರೆ ಗುಲ್ಬರ್ಗ ಜಿಲ್ಲಾ ಡಿಡಿಪಿಐ ಡಿ.ಪಿ. ಪರಮೇಶ್ವರ.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ಹಾರ್ನಳ್ಳಿ ರಾಮಸ್ವಾಮಿ ಅವರು ‘ಸರ್ಕಾರಿ ಸೇವೆಯಲ್ಲಿರುವವರ ವರ್ಗಾವಣೆ’ಗೆ ಸಂಬಂಧಿಸಿದಂತೆ ಕೆಲವು ಶಿಫಾರಸು ಮಾಡಿದ್ದರು. 2001ರಲ್ಲಿ ಎಲ್ಲ ಶಿಫಾರಸುಗಳನ್ನು ಜಾರಿಗೊಳಿಸಲಾಗಿದೆ.

ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿನ ನೌಕರ ಒಂದು ಪ್ರದೇಶದಲ್ಲಿ ಕನಿಷ್ಠ ಹಾಗೂ ಗರಿಷ್ಠ ಎಷ್ಟು ವರ್ಷ ಸೇವೆ ಸಲ್ಲಿಸಿದ ಬಳಿಕ ವರ್ಗಾವಣೆ ಮಾಡಬೇಕು ಎಂಬುದನ್ನು ವಿವರವಾಗಿ ನೀಡಲಾಗಿದೆ. ಶಿಕ್ಷಣ ಇಲಾಖೆಯನ್ನು ಮಾತ್ರ ಶಿಫಾರಸು ಪಟ್ಟಿಯಲ್ಲಿ ಸೇರಿಸಿಲ್ಲ.

‘ಡಿಪಿಆರ್‌ಎ ಸಿದ್ಧಪಡಿಸಿದ ಸರ್ಕಾರಿ ಅಧಿಕಾರಿಗಳ ಸೇವಾ ಪಟ್ಟಿಯಲ್ಲಿ ‘ಡಿ’ ಗುಂಪಿನಲ್ಲಿ ಶಿಕ್ಷಣ ಇಲಾಖೆಯನ್ನು ಪರಿಗಣಿಸಿದರೆ ಖಂಡಿತವಾಗಿಯೂ ಎಲ್ಲರಿಗೂ ನ್ಯಾಯ ಒದಗಿಸಬಹುದಾಗಿದೆ. ಒಂದು ವಲಯದಲ್ಲಿ ಏಳು ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡ್ಡಾಯವಾಗಿ ಮುಂದಿನ ವಲಯಕ್ಕೆ ವರ್ಗಾವಣೆ ಮಾಡುವ ಅವಕಾಶ ಇದರಲ್ಲಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಶಫಿ ಅಹ್ಮದ್.

ತೀರಾ ಒತ್ತಡ ಎದುರಿಸುವ ಕೆಲವು ಶಿಕ್ಷಕರು ‘ಸಿ’ ವಲಯದಿಂದ ವರ್ಗಾವಣೆ ಪಡೆಯಲು ‘ಸುಳ್ಳು’ ಗಂಭೀರ ಅನಾರೋಗ್ಯ ಸಾಬೀತುಪಡಿಸುವ ಸಾಹಸಕ್ಕೆ ಇಳಿಯುವುದು ಕೂಡಾ ಕಂಡು ಬರುತ್ತಿದೆ. ಇದಕ್ಕಾಗಿ ಹಣದ ಆಮಿಷಗಳು ಕೆಲವು ಕಡೆ ನಡೆಯುತ್ತಿದೆ ಎನ್ನುವುದು ಕೆಲವು ಶಿಕ್ಷಕರ ಅಭಿಮತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry