ಶನಿವಾರ, ಜನವರಿ 25, 2020
28 °C

ಶಿಕ್ಷಕರ ವೇತನ ನೀಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕರ ವೇತನ ನೀಡಲು ಮನವಿ

ಗುಲ್ಬರ್ಗ: ಶಿಕ್ಷಕ-ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸುವಂತೆ ಮತ್ತು ಪಿಯು ಉಪನ್ಯಾಸಕರ ಮುಷ್ಕರ ನಿರತ ದಿನಗಳ ವೇತನವನ್ನು (ಕಡಿತಗೊಂಡ) ನೀಡುವಂತೆ ಸರ್ಕಾರಕ್ಕೆ ಸೂಚಿಸಲು ಗುಲ್ಬರ್ಗಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪನವರಿಗೆ ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಗುಲ್ಬರ್ಗ  ಕಾರ್ಯಾಧ್ಯಕ್ಷ ಎಂ.ಬಿ. ಅಂಬಲಗಿ ಮನವಿ ಸಲ್ಲಿಸಿದರು.ರಾಜ್ಯದ ಸರಕಾರಿ ಮತ್ತು ಅನುದಾನಿತ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಉಪನ್ಯಾಸಕರು ಮತ್ತು ಪ್ರಾಚಾರ್ಯರು ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ, ತಮಿಳು ನಾಡು, ಕೇರಳ ಮತ್ತು ಕೇಂದ್ರ ಸರ್ಕಾರಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ  ಉಪನ್ಯಾಸಕರಿಗಿಂತ ಪ್ರತಿ ತಿಂಗಳು 10ರಿಂದ 30ಸಾವಿರ ರೂಪಾಯಿ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಂದು ಜಿಲ್ಲಾಧಿಕಾರಿಗಳ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಯಿತು. ಆಗ ಪ್ರಸ್ತುತ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಬಂದು 15 ದಿನಗಳಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದಾಗ ಚಳವಳಿ ನಿಲ್ಲಿಸಲಾಯಿತು. ಬಳಿಕ ಮೂರು ತಿಂಗಳವರೆಗೆ ಸಮಸ್ಯೆ ಪರಿಹರಿಸಲು ಸರ್ಕಾರ ಮುಂದಾಗದಿದ್ದಾಗ ಡಿಸೆಂಬರ್ 8ರಿಂದ ತರಗತಿ ಬಹಿಷ್ಕಾರ ಚಳವಳಿ ಪ್ರಾರಂಭಿಸಿದ್ದು ಅನಂತರ ಸರ್ಕಾರ ನೀಡಿದ ಭರವಸೆಯಂತೆ ಚಳವಳಿ ನಿಲ್ಲಿಸಲಾಯಿತು.ಚಳವಳಿ ಮಾಡಿದ 7ದಿನಗಳ ವೇತನ ಕಡಿತಗೊಳಿಸುವಂತೆ ಶಿಕ್ಷಣ ಇಲಾಖೆಯಿಂದ ಈಗಾಗಲೇ ಆದೇಶ ಬಂದಿದೆ. ವೇತನ ಕಡಿತಗೊಳಿಸಲು ಮುಂದಾಗಿರುವ  ಸರ್ಕಾರದ ಧೋರಣೆಯನ್ನು ರಾಜ್ಯದ ಉಪನ್ಯಾಸಕರು, ಪ್ರಾಚಾರ್ಯರು ಮತ್ತು ಶಿಕ್ಷಕ ವರ್ಗ ಖಂಡಿಸುತ್ತಿದೆ.

 

ಯಾವ ಸರ್ಕಾರಗಳೂ ಇಂತಹ ಕಠೋರ ನಿರ್ಣಯ ತೆಗೆದುಕೊಂಡಿಲ್ಲ ಆದ್ದರಿಂದ ಮುಷ್ಕರ ನಿರತ ದಿನಗಳ ವೇತನ ಬಿಡುಗಡೆ ಮಾಡಿ ಮುಷ್ಕರ ನಿರತ 7ದಿನಗಳ ಕೆಲಸವನ್ನು ಸಾರ್ವತ್ರಿಕ ರಜೆ ಮತ್ತು ರವಿವಾರಗಳಂದು ಪಡೆಯುವುದರ ಮೂಲಕ ತಡೆಹಿಡಿದ ವೇತನ ಬಿಡುಗಡೆ ಮಾಡಬೇಕೆಂದು ವೇದಿಕೆ ಬಿ. ಎಸ್. ಯಡಿಯೂರಪ್ಪನವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.

ಪ್ರತಿಕ್ರಿಯಿಸಿ (+)