ಸೋಮವಾರ, ಜೂನ್ 14, 2021
22 °C

ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲು ಸರ್ಕಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ರಾಜ್ಯದಲ್ಲಿ ಹೊಸ ಸರ್ಕಾರ ಬಂದ ನಂತರ ಶಿಕ್ಷಣದ ಸುಧಾರಣೆ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂಬ ನಿರೀಕ್ಷೆಯು ಹುಸಿಯಾಗಿದೆ. ಸರ್ಕಾರ ಬಂದು 9 ತಿಂಗಳು ಗತಿಸಿದರೂ ಶಿಕ್ಷಕರ ಸಮಸ್ಯೆಗಳು ಹಾಗೆಯೇ ಇವೆ ಎಂದು ಸರ್ಕಾರದ ವಿಳಂಬ ಧೋರಣೆಯನ್ನು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪೂರ ಟೀಕಿಸಿದರು.ಶಿವಯೋಗಮಂದಿರದಲ್ಲಿ ಭಾನುವಾರ ಕರ್ನಾಟಕ  ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಮುಗಿದ ನಂತರ ಪತ್ರಿಕಾ ಗೋಷ್ಠಿಯಲ್ಲಿ ಅವರು ಹೇಳಿದರು.ಶಿಕ್ಷಕರ ವೇತನ ಸೌಲಭ್ಯ ಕುರಿತು ₨ 280 ಕೋಟಿ ಮಂಜೂರು ಮಾಡಿದ ಬಗ್ಗೆ ಸರ್ಕಾರ ಹೇಳಿದೆ. ಈ ಸೌಲಭ್ಯಗಳನ್ನು ಶಿಕ್ಷಕರಿಗೆ ಯಾವ ರೀತಿಯಲ್ಲಿ ಕೊಡ ಬೇಕು ಎಂಬುದರ ಬಗ್ಗೆ ಶಿಕ್ಷಣ ಸಚಿವರು ವಿಧಾನ ಪರಿಷತ್‌ನಲ್ಲಿ ಚರ್ಚೆ ಕೈಗೊಂಡು ಪರಿಹಾರ ಕೊಡ ಬೇಕು ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.ಜೆಒಸಿ ಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಸರ್ಕಾರ ವಿವಿಧ ಖಾಸಗಿ ಶಾಲೆ ಕಾಲೇಜುಗಳಿಗೆ ಹಾಜರಾಗುವಂತೆ ಆದೇಶಿಸಿದೆ. ಆದರೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಯವರು ಹಾಜರು ಪಡಿಸಿಕೊಂಡಿಲ್ಲ. ಇದರಿಂದ ಜೆಒಸಿ ಸಿಬ್ಬಂದಿಗೆ ಅನ್ಯಾಯವಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಜೆಒಸಿ ಸಿಬ್ಬಂದಿಯನ್ನು ಹಾಜರುಪಡಿಸಿಕೊಳ್ಳದಿದ್ದರೆ ಆ ಹುದ್ದೆಯು ರದ್ದಾಗು ತ್ತದೆ ಎಂದು  ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ಕೊಡಬೇಕು ಎಂದು ಶಹಾಪೂರ ಅವರು ಒತ್ತಾಯಿಸಿದರು.ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ತೆರವಾದ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮೋದನೆ ಕೊಡಬೇಕು. ಮಾಧ್ಯಮಿಕ ಶಾಲೆಯಲ್ಲಿ 2008 ರಿಂದ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ 2010 ರಿಂದ ಖಾಲಿ ಹುದ್ದೆಗಳನ್ನು ತುಂಬಿಲ್ಲ. ಸರ್ಕಾರ ಗುಣಮಟ್ಟದ ಶಿಕ್ಷಣವನ್ನು ಬಯಸುತ್ತದೆ. ತೆರವಾದ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಮಿತವ್ಯಯವನ್ನು ಸರ್ಕಾರ ಹೇರಿರುವುದರಿಂದ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.ಸರ್ಕಾರ ನೂತನವಾಗಿ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ (ಕೆಎಸ್ ಕ್ಯೂಎಎಸಿ ) ಶಾಲಾ ಗುಣಮಟ್ಟದ ಮೌಲ್ಯಾಂಕನ ಜಾರಿಗೆ ತಂದಿದೆ. ಈ ಪದ್ಧತಿಯನ್ನು ಸ್ವಾಗತಿಸಿದ ಶಹಾಪೂರ ಅವರು ಖಾಸಗಿ ಶಾಲೆಗಳಲ್ಲಿ ಸಿಬ್ಬಂದಿಯ ಕೊರತೆ ಇರುವಾಗ ಶಾಲಾ ಗುಣಮಟ್ಟದ ಮೌಲ್ಯಾಂಕನ ಬರಲು ಹೇಗೆ ಸಾಧ್ಯ. ಮೊದಲು ಸಿಬ್ಬಂದಿಯನ್ನು ಭರ್ತಿ ಮಾಡಲು ಅನುಮತಿ ಕೊಡಿ ಎಂದರು.ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಮೌಲ್ಯಾಂಕನ ಪ್ರಕ್ರಿಯೆ ಮಾಡುವರು. ಆದರೆ ಖಾಸಗಿ ಶಿಕ್ಷಣ ಸಂಸ್ಥೆಯ ಶಾಲೆಗಳು ₨ 12000 ಭರಿಸಬೇಕು. ಇದು ಯಾವ ನ್ಯಾಯ. ಖಾಸಗಿ ಶಾಲೆಗಳಿಗೂ ಉಚಿತ ಮೌಲ್ಯಾಂಕನ ಕೈಗೊಳ್ಳುವ ಕುರಿತು ಸರ್ಕಾರಕ್ಕೆ ಆಗ್ರಹಿಸುವುದಾಗಿ ತಿಳಿಸಿದರು.ಮಕ್ಕಳ ಶಿಕ್ಷಣದ ಗುಣಮಟ್ಟದ ಸುಧಾರಣೆಗೆ ನಿರಂತರ ಮೌಲ್ಯಮಾಪನ (ಸಿಸಿಇ) ಅಳವಡಿಸಿದೆ. ನಿರಂತರ ಮೌಲ್ಯಮಾಪನ ಪದ್ಧತಿಯ ಬಗ್ಗೆ ಸ್ವಾಗತಿಸಿದ ಅರುಣ ಶಹಾಪೂರ ನಿರಂತರ ಮೌಲ್ಯಮಾಪನ ಕುರಿತು ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ತರಬೇತಿ ನೀಡಿದ್ದಾರೆ. ಖಾಸಗಿ ಶಾಲೆಗಳ ಶಿಕ್ಷಕರಿಗೆ ಯಾಕೆ ತರಬೇತಿ ನೀಡಿಲ್ಲ ಎಂದು ಪ್ರಶ್ನಿಸಿದರು.ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ  ಮಹಾ ಸಂಘದ ಅಧ್ಯಕ್ಷ ಕೆ. ನರಹರಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಚಿದಾನಂದ ಪಾಟೀಲ, ಗುರುನಾಥ ತಳವಾರ, ಡಾ. ಅವಿನಾಶ ಮಮದಾಪೂರ, ದಯಾನಂದ ಶಿಕ್ಕೇರಿ, ಅಶೋಕ ಚಿಮಲ, ಎಸ್‌.ಎ. ಭರಮಗೌಡರ ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.