ಶಿಕ್ಷಕರ ಸಮಸ್ಯೆ: ಗ್ರಾಮಸ್ಥರಿಂದ ಶಾಲೆಗೆ ಬೀಗ

ಶನಿವಾರ, ಜೂಲೈ 20, 2019
22 °C

ಶಿಕ್ಷಕರ ಸಮಸ್ಯೆ: ಗ್ರಾಮಸ್ಥರಿಂದ ಶಾಲೆಗೆ ಬೀಗ

Published:
Updated:

ದೇವದುರ್ಗ: ಒಂದು ಕಡೆ ನಿರಂತರ ಶಿಕ್ಷಕರ ವರ್ಗಾವಣೆ ಇನ್ನೂಂದು ಕಡೆ ಪ್ರಭಾವಿಗಳ ಕುಮ್ಮಕುನಿಂದ ಶಿಕ್ಷಕರು ಕೇಳಿದ ಸ್ಥಳಕ್ಕೆಲ್ಲ ಎರವಲು ಸೇವೆಗೆ ಆದೇಶ ನೀಡಿರುವ ಪರಿಣಾಮವೇ ಇಂದು ತಾಲ್ಲೂಕಿನಲ್ಲಿ ಶಿಕ್ಷಕರ ಸಮಸ್ಯೆ ದಿನಕ್ಕಿಷ್ಟು ಉಲ್ಬಣಗೊಂಡಿದ್ದು, ಗುರುವಾರ ತಾಲ್ಲೂಕಿನ ಕೊಪ್ಪರ ಗ್ರಾಮದಲ್ಲಿ ಶಿಕ್ಷಕರ ಕೊರತೆಗೆ ಅಧಿಕಾರಿಗಳು ಗಮನ ಹರಿಸದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ.ಶಿಕ್ಷಕರ ಕೊರತೆ ಸೇರಿದಂತೆ ಇತರ ಮೂಲ ಸೌಕರ್ಯಗಳನ್ನು ಒದಗಿಸಲು ಪಾಲಕರು, ಗ್ರಾಮಸ್ಥರು ಮತ್ತು ಇತರ ಸಂಘಟನೆಗಳ ಮುಖಂಡರು ಜೂನ್ ತಿಂಗಳಲ್ಲಿ ಶಾಲೆ ಆರಂಭವಾದ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಖುದ್ದಾಗಿ ಭೇಟಿಯಾಗಿ ಸಮಸ್ಯೆ ತಿಳಿಸಿ ಹೇಳಿದರೂ ಕ್ರಮಕ್ಕೆ ಮುಂದಾಗಿಲ್ಲ ಮತ್ತು ಪ್ರತಿಭಟನೆ ಕುರಿತು ಮಾಹಿತಿ ನೀಡಿದರೂ ನಿರ್ಲಕ್ಷ್ಯಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪರ ಘಟಕದ ಅಧ್ಯಕ್ಷ ಎಂ. ಗುರುನಾಥರೆಡ್ಡಿ ಪತ್ರದಲ್ಲಿ ಆರೋಪಿಸಿದ್ದಾರೆ.ಶಾಲೆಯಲ್ಲಿ ಮಕ್ಕಳ ಸಂಖ್ಯೆ 300ಕ್ಕೂ ಹೆಚ್ಚು ಇದ್ದು, ಇಲಾಖೆಯೇ ಹೇಳುವ ಪ್ರಕಾರ ಮಕ್ಕಳ ದಾಖಲಾತಿಗೆ ತಕ್ಕಂತೆ ಕನಿಷ್ಟ ಇಂತಿಷ್ಟು ಶಿಕ್ಷಕರು ಇರಬೇಕೆಂಬ ನಿಯಮವನ್ನು ಅನುಸರಿದೆ ಇರುವುದರಿಂದ ನೂರಾರು ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

ಕೊಪ್ಪರ ವಲಯದ ಸಿಆರ್‌ಪಿ, ಬಿಆರ್‌ಪಿ ಮತ್ತು ಇಲಾಖೆಯ ಅಧಿಕಾರಿಗಳಿಗೆ ಪ್ರತಿಭಟನೆ ಬಗ್ಗೆ ಪೂರ್ವ ಮಾಹಿತಿ ಇದ್ದರೂ ಪರಿಹಾರ ಕಂಡುಕೊಳ್ಳದೆ ಮತ್ತು ಇತ್ತಕಡೆ ಗಮನ ಹರಿಸದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಲಿಖಿತ ಪತ್ರ: ಪ್ರತಿಭಟನೆಯ ಸುದ್ದಿ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಅವರು ಸ್ಥಳಕ್ಕೆ ಆಗಮಿಸಿದಾಗ ವಿದ್ಯಾರ್ಥಿಗಳು ಮತ್ತು ಪ್ರತಿಭಟನಕಾರರು ಧಿಕ್ಕಾರ್ ಕೂಗಿದರು ನಂತರ ಸಮಸ್ಯೆಯನ್ನು ಪರಿಶೀಲಿಸಿದ ಬಿಇಒ ಅವರು, ತಾಲ್ಲೂಕಿನಲ್ಲಿ ಸುಮಾರು ಐದು ನೂರು ಜನ ಶಿಕ್ಷಕರ ಕೊರತೆ ಇದೆ ಹಂತ,ಹಂತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳುವ ಮೂಲಕ ಕೊಪ್ಪರ ಶಾಲೆಗೆ ಕೂಡಲೇ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ವ್ಯವಸ್ಥೆ ಮಾಡಲಾಗುವುದು ಎಂದು ಲಿಖಿತ ಪತ್ರ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.ಆರೋಪ: ಪ್ರಭಾವಿ ವ್ಯಕ್ತಿಗಳ ಕೃಪೆಯಿಂದ ತಾಲ್ಲೂಕಿನಿಂದ ಎಷ್ಟೊ ಜನ ಶಿಕ್ಷಕರು ಯರವಲು ಸೇವೆ ಮೇಲೆ ಹೋದವರು ಇಂದಿಗೂ ಇತ್ತಕಡೆ ಸುಳಿದಿಲ್ಲ. ಈ ಮೊದಲೇ ಶಿಕ್ಷಕರ ಕೊರತೆಯಿಂದ ತತ್ತರಿಸಿರುವ ಇಲಾಖೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೆ ಇರುವುದಕ್ಕೆ ಒಳಕೈ ಕೆಲಸ ಮಾಡಿದೆ ಎಂಬುವುದು ಗ್ರಾಮಸ್ಥರು ಆರೋಪಿಸಿದರು.ತಾಪಂ ಸದಸ್ಯ ಬಸವರಾಜ ನಾಯಕ, ಗ್ರಾಪಂ ಅಧ್ಯಕ್ಷ ಸಿದ್ದಲಿಂಗಪ್ಪಗೌಡ, ಗ್ರಾಪಂ ಸದಸ್ಯ ಶರಣಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಸರಸ್ವತೆಮ್ಮ, ಮಾಜಿ ಗ್ರಾಪಂ ಅಧ್ಯಕ್ಷ ಸುಲ್ತಾನ್‌ಬಾಬು, ಗ್ರಾಮಸ್ಥರಾದ ಬಿ. ಗುರುನಾಥರೆಡ್ಡಿ, ಎಂ. ಶಿವನಗೌಡ ಪಾಟೀಲ, ವೈ.ಎಸ್. ಪಾಟೀಲ ಹಾಗೂ ಮಕ್ಕಳು ಅನೇಕ ಜನ ಪಾಲಕರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry