ಶಿಕ್ಷಕರ ಹುದ್ದೆ ಖಾಲಿ: ಮಕ್ಕಳ ಕನ್ನಡ ಕಲಿಕೆಗೆ ಭಾರಿ ತೊಡಕು

7

ಶಿಕ್ಷಕರ ಹುದ್ದೆ ಖಾಲಿ: ಮಕ್ಕಳ ಕನ್ನಡ ಕಲಿಕೆಗೆ ಭಾರಿ ತೊಡಕು

Published:
Updated:

ಬಳ್ಳಾರಿ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಾವಿರಕ್ಕೂ ಅಧಿಕ ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯಕ್ಕೆ  ನೂರಾರು ಜನ ಶಿಕ್ಷಕರು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.ಜಿಲ್ಲೆಯಲ್ಲಿ 1362 ಸರ್ಕಾರಿ ಪ್ರಾಥಮಿಕ ಶಾಲೆಗಳೂ 161 ಸರ್ಕಾರಿ ಪ್ರೌಢಶಾಲೆಗಳೂ ಇದ್ದು, ಕ್ರಮವಾಗಿ 809 ಹಾಗೂ 225 ಶಿಕ್ಷಕರ ಹುದ್ದೆಗಳು ಸದ್ಯ ಖಾಲಿ ಇವೆ.ವಿವಿಧ ಶೈಕ್ಷಣಿಕ ವಲಯಗಳ ಪೈಕಿ ಸಿರುಗುಪ್ಪದಲ್ಲಿ 197, ಬಳ್ಳಾರಿ ಪೂರ್ವ ವಲಯದಲ್ಲಿ 114, ಪಶ್ಚಿಮ ವಲಯದಲ್ಲಿ 108, ಹೊಸಪೇಟೆಯಲ್ಲಿ 128, ಕೂಡ್ಲಿಗಿಯಲ್ಲಿ 72, ಹೂವಿನ ಹಡಗಲಿಯಲ್ಲಿ 49, ಹಗರಿ ಬೊಮ್ಮನಹಳ್ಳಿಯಲ್ಲಿ 35, ಸಂಡೂರಿನಲ್ಲಿ 55 ಪ್ರಾಥಮಿಕ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಈ ಖಾಲಿ ಹುದ್ದೆಗಳಲ್ಲಿ ಅರ್ಧದಷ್ಟು ಕನ್ನಡ ವಿಷಯದ ಶಿಕ್ಷಕರ ಹುದ್ದೆಗಳೇ ಖಾಲಿ ಇರುವುದು ವಿಶೇಷ.ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಲ್ಲಿ ಕನ್ನಡ ವಿಷಯದ ಹುದ್ದೆಗಳ ಸಂಖ್ಯೆ 484. ಅದರಲ್ಲೂ ವಿಶೇಷವಾಗಿ ರಾಜ್ಯದ ಗಡಿ ಭಾಗದಲ್ಲಿರುವ ಸಿರುಗುಪ್ಪ ಮತ್ತು ಬಳ್ಳಾರಿ ತಾಲ್ಲೂಕುಗಳಲ್ಲೇ ಈ ಪೈಕಿ  ಅರ್ಧದಷ್ಟು ಕನ್ನಡ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ.ಕಳೆದ ಮೂರು ವರ್ಷಗಳಿಂದ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೇ ನಡೆಯದ್ದರಿಂದ ಇಷ್ಟೊಂದು ಸಂಖ್ಯೆಯ ಹುದ್ದೆಗಳು ಖಾಲಿ ಉಳಿದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕುರಿತ ಅಂಕಿ- ಅಂಶಗಳನ್ನು ಸಂಗ್ರಹಿಸುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭಕ್ಕೆ ಮುನ್ನ ಈ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಹಿಂದುಳಿದಲ್ಲೇ ಅಧಿಕ: ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ ಮತ್ತು ಸಂಡೂರು ತಾಲ್ಲೂಕಿನ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಎದುರಾಗಿದೆ ಎಂಬುದು ಪಾಲಕರ ಹಾಗೂ ಜನಪ್ರತಿನಿಧಿಗಳ ಆರೋಪವಾಗಿದೆ.ಕೆಲವು ಶಾಲೆಗಳಲ್ಲಿ ನಿಯುಕ್ತಿಗೊಂಡಿರುವ ಶಿಕ್ಷಕರನ್ನು ಬೇರೆಡೆ ಎರವಲು ಸೇವೆಗೆ (ಡೆಪ್ಯುಟೇಷನ್) ಕಳುಹಿಸಿರುವುದರಿಂದ ಆ ಶಾಲೆಗಳಲ್ಲಿ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುತ್ತ ಬಂದರೂ, ಪಠ್ಯಕ್ರಮ ಪೂರ್ಣಗೊಂಡಿಲ್ಲ ಎಂಬುದು ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಣ್ ಅವರ ದೂರು.ಜಿ.ಪಂ.ನಲ್ಲಿ ನಡೆಯುವ ಸಾಮಾನ್ಯ ಸಭೆಗಳಲ್ಲಿ ಬಹುತೇಕ ಸದಸ್ಯರು ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ಪ್ರಸ್ತಾಪಿಸುತ್ತ, ಎರವಲು ಸೇವೆಗೆ ನಿಯೋಜಿಸುವುದನ್ನು ಅಕ್ರಮ ಎಂದು ಆರೋಪಿಸಿ ವಿರೋಧಿಸುತ್ತಲೇ ಇದ್ದಾರೆ. ಆದರೆ, ನೇಮಕಾತಿ ಪ್ರಕ್ರಿಯೆ ನಡೆಯದ್ದರಿಂದ ಶಿಕ್ಷಕರ ಕೊರತೆ ಎದುರಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಲೇ ಇದ್ದಾರೆ.ಎರವಲು ಸೇವೆ: ಕೆಲವು ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇಲ್ಲ. ಆದರೆ, ಇನ್ನು ಕೆಲವು ಶಾಲೆಗಳಲ್ಲಿ ಒಂದು, ಒಂದಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಒಂದಕ್ಕಿಂತ ಹೆಚ್ಚು ಹುದ್ದೆ ಖಾಲಿ ಇರುವ ಶಾಲೆಗಳಿಗೆ ಪಾಲಕರು ಹಾಗೂ ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ)ಯವರ ಕೋರಿಕೆಯ ಮೇರೆಗೆ ಅದೇ ತಾಲ್ಲೂಕಿನ, ಕೊರತೆ ಇಲ್ಲದ ಬೇರೆ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಎರವಲು ಸೇವೆಗೆ ನಿಯುಕ್ತಿ ಗೊಳಿಸಲಾಗುತ್ತದೆ ಎಂದು ಇಲಾಖೆಯ ಮೂಲಗಳು ಹೇಳುತ್ತವೆಯಾದರೂ, ಈ ರೀತಿ ಎರವಲು ಸೇವೆಗೆ ಕಳುಹಿಸುವುದು ಪಾಲಕರ ಮತ್ತು ಎಸ್‌ಡಿಎಂಸಿ ಕೋರಿಕೆಯ ಮೇರೆಗೆ ಅಲ್ಲ, ಶಿಕ್ಷಕರಿಗೆ ಅನುಕೂಲ ಕಲ್ಪಿಸಲೆಂದೇ ಅವರ ಕೋರಿಕೆಯ ಮೇರೆಗೆ ಕಳುಹಿಸಿಕೊಡಲಾಗಿದೆ ಎಂಬುದು ಜಿಲ್ಲಾ ಪಂಚಾಯಿತಿ ಸದಸ್ಯ ವಸಂತ್ ಅವರ ದೂರು.ಅಲ್ಲದೆ, ಬೇರೆ ತಾಲ್ಲೂಕುಗಳಿಗೂ ಶಿಕ್ಷಕರನ್ನು ಎರವಲು ಸೇವೆ ಆಧಾರದಲ್ಲಿ ಕಳುಹಿಸಲಾಗಿದೆ. ನಾಲ್ಕು ವರ್ಷಗಳಿಂದಲೂ ಈ ರೀತಿ ಎರವಲು ಸೇವೆಯಲ್ಲಿ ನಿಯುಕ್ತಿಗೊಂಡಿರುವ ಶಿಕ್ಷಕರೂ ಇದ್ದಾರೆ ಎಂದು ಅವರು ಹೇಳುತ್ತಾರೆ.ಖಾಸಗಿ ಶಾಲೆಗಳ ಸ್ಪರ್ಧೆ ಇರುವುದರಿಂದ ಹಾಗೂ ಗುಣಮಟ್ಟ ಕುಸಿಯುತ್ತಿರುವುದರಿಂದ ಸರ್ಕಾರಿ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯೇ ಕಡಿಮೆ ಆಗುತ್ತಿದ್ದು, ಕೂಡಲೇ ಸರ್ಕಾರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry