ಶಿಕ್ಷಕರ ಹುದ್ದೆ ಭರ್ತಿಗೆ ಪೋಷಕರ ಆಗ್ರಹ

6

ಶಿಕ್ಷಕರ ಹುದ್ದೆ ಭರ್ತಿಗೆ ಪೋಷಕರ ಆಗ್ರಹ

Published:
Updated:
ಶಿಕ್ಷಕರ ಹುದ್ದೆ ಭರ್ತಿಗೆ ಪೋಷಕರ ಆಗ್ರಹ

ಕೊಯಿಲ(ಉಪ್ಪಿನಂಗಡಿ): ಕಳೆದ 3 ವರ್ಷದ ಹಿಂದೆ ವರ್ಗಾವಣೆ ಹೊಂದಿರುವ ಶಿಕ್ಷಕಿಯೋರ್ವರ ಹುದ್ದೆ ಭರ್ತಿ ಆಗಿಲ್ಲ, ಇದೀಗ ಮತ್ತೆ ಶಿಕ್ಷಕರೋರ್ವರನ್ನು ನಿಯೋಜನೆ ಮಾಡಲಾಗಿದ್ದು ಹೀಗಾಗಿ ಇಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಮುನ್ನ ಶಿಕ್ಷಕರ ಖಾಲಿ ಹುದ್ದೆ ಭರ್ತಿ ಮಾಡಬೇಕು ಎಂದು ಗಂಡಿಬಾಗಿಲು ಶಾಲಾ ಪೋಷಕರು ಆಗ್ರಹಿಸಲಾಗಿ ನಿರ್ಣಯ ಅಂಗೀಕರಿಸಲಾಯಿತು.ಗುರುವಾರ ಗಂಡಿಬಾಗಿಲು ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯನ್ನು ಆಗ್ರಹಿಸಿ ಈ ನಿರ್ಣಯ ಅಂಗೀಕರಿಸಲಾಯಿತು. ವಿಷಯ ಪ್ರಸ್ತಾಪಿಸಿದ ಪೋಷಕರು ಬಹಳ ಸಮಯದಿಂದ 1 ಹುದ್ದೆ ಖಾಲಿ ಇದೆ. ಇದೀಗ ಇದ್ದ 7 ಶಿಕ್ಷಕರ ಪೈಕಿ ಓರ್ವರನ್ನು ನಿಯೋಜನೆ ಮಾಡಲಾಗಿದೆ. ಮತ್ತೊಬ್ಬ ಶಿಕ್ಷಕಿ ಹೆರಿಗೆ ನಿಮಿತ್ತ ದೀರ್ಘ ರಜೆಯಲ್ಲಿದ್ದಾರೆ. ಹೀಗಾಗಿ ಇಲ್ಲಿ ಇದೀಗ ಕೇವಲ 5 ಶಿಕ್ಷಕರು ಮಾತ್ರ ಇದ್ದು ಇವರಲ್ಲಿ ಇಬ್ಬರು ನಲಿಕಲಿ ಪಾಠಗಳಿಗೆ ಮೀಸಲು ಆಗುತ್ತಾರೆ. 

 

 ಉಳಿದ ಮೂರು ಮಂದಿ ಐದು ತರಗತಿಗಳಿಗೆ ಪಾಠ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಮುಂದೆ ರಜೆ ಮುಗಿದ ಬಳಿಕ ಮತ್ತೆ ಮುಂದಿನ ವರ್ಷದ ಶಾಲೆ ಪ್ರಾರಂಭೋತ್ಸವಕ್ಕೆ ಮುನ್ನ ಶಿಕ್ಷಕರ ಹುದ್ದೆ ಭರ್ತಿ ಆಗಬೇಕು ಎಂದು ಆಗ್ರಹಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು. ಮಾರ್ಗದರ್ಶಿ ಅಧಿಕಾರಿ ವಸಂತ ಪಾಲನ್ ಮಾತನಾಡಿ, ಮಕ್ಕಳ ಸಾಮಾನ್ಯ ಜ್ಞಾನವೃದ್ಧಿ, ಮನೋಸ್ಥಿತಿಯನ್ನು ಹೊರತರುವ ಜವಾಬ್ದಾರಿ ಶಿಕ್ಷಕರಿಗೆ ಇರುವಷ್ಟು ಪಾಲಕರು, ಪೋಷಕರಿಗೂ ಇದೆ. ಸಮುದಾಯ ಕಾರ್ಯಕ್ರಮ ಶಾಲೆಗೆ ಸೀಮಿತ ಆಗದಿರಲಿ ಅದು ಶಾಲೆಯ ಗುಣಮಟ್ಟ ವೃದ್ಧಿಸಲು ಸಹಕಾರಿ ಆಗಲಿ ಎಂದರು. 

 

 ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಕುಶಾಲಪ್ಪ ಗೌಡ, ಶಿಕ್ಷಕರಾದ ಗೋವರ್ಧನ್, ಉಮೇಶ್ ಗೌಡ, ವೀರೇಂದ್ರ ಜೋಗಿ, ವಿಶ್ವೇಶ್ವರ ಭಟ್ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಉಷಾ ಶೆಟ್ಟಿ, ಮಾಜಿ ಅಧ್ಯಕ್ಷ ಕೆವಿ. ಜಾರ್ಜ್, ಆರೋಗ್ಯ ಸಹಾಯಕಿ ಶಂಪಾವತಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಾದ ಮಹಾಬಲೇಶ್ವರ ಭಟ್, ಈಶ್ವರ ಗೌಡ, ಆದಂ ಕುಂಞ್, ಅಬ್ದುಲ್ ರಜಾಕ್, ಗಂಗಮ್ಮ, ಗಿರಿಜಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry