ಶಿಕ್ಷಕ ರೇವಣಸಿದ್ದಪ್ಪ ಜಾತ್ರೆ ಇಂದಿನಿಂದ

7

ಶಿಕ್ಷಕ ರೇವಣಸಿದ್ದಪ್ಪ ಜಾತ್ರೆ ಇಂದಿನಿಂದ

Published:
Updated:

ತಾಂಬಾ: ಸನ್ಯಾಸಿಗಳಾಗಿ ಪವಾಡ ಮಾಡಿದವರನ್ನು ಮಠಾಧೀಶರನ್ನು, ವೈರಾಗಿಗಳನ್ನು, ದೇವತೆಗಳ ವಿಗ್ರಹಗಳನ್ನು ಪೂಜೆ ಮಾಡಿರುವುದನ್ನು ನೋಡಿದ್ದೇವೆ ಆದರೆ  ಅಕ್ಷರವನ್ನು ಕಲಿಸಿ ಊರಿನ ಮನೆ-ಮನಗಳಲ್ಲಿ ಜ್ಞಾನದ ಹಣತೆ ಹಚ್ಚಿದ ಶಿಕ್ಷಕನೊಬ್ಬರ ಮೂರ್ತಿಯನ್ನು ಪೂಜಿಸಿ  ಪ್ರತಿವರ್ಷ ಅವರ ಹೆಸರಲ್ಲಿ ಜಾತ್ರೆ ನಡೆಯುತ್ತದೆ.ತಾಂಬಾ ಸಮೀಪದ ಅರ್ಥಗಾದಲ್ಲಿ ಶಿಕ್ಷಕರಾಗಿದ್ದ ರೇವಣಸಿದ್ದಪ್ಪ ಅವರ ಜಾತ್ರೆ ನಡೆಯುತ್ತಿದೆ. `ವರ್ಣ ಮಾತ್ರ ಕಲಿಸಿದಾತಂ ಗುರು~ ಎಂದ ಈ ಮಣ್ಣಿನ ಜನ ತಮ್ಮನ್ನು ತಮ್ಮ ಮಕ್ಕಳ ಬದುಕನ್ನು ಹಸನು ಮಾಡಲು ಶ್ರಮಿಸಿದ ಶಿಕ್ಷಕನನ್ನು ಮಹಾನ್ ಗುರು ಎಂದು 85 ವರ್ಷಗಳಿಂದ ಪೂಜಿಸುತ್ತಿದ್ದಾರೆ.1889 ರಲ್ಲಿ ಅರ್ಥಗಾದಲ್ಲಿ ಜನಿಸಿದ ರೇವಣಸಿದ್ದಪ್ಪ ಶಿಕ್ಷಕರಾಗಿ ಅದೇ ಗ್ರಾಮದಲ್ಲಿ ವೃತ್ತಿ ಆರಂಭಿಸಿದರು. ಮಕ್ಕಳಿಗೆ ಓದು ಬರಹ ಕಲಿಸುವುದರೊಂದಿಗೆ  ಜನರಲ್ಲಿ ಮೂಢನಂಬಿಕೆ, ಅಜ್ಞಾನ, ಮಾಟ, ಮಂತ್ರಗಳನ್ನು ಹೊಡೆದೊಡಿಸಿದ್ದರು. ಗ್ರಾಮದ ಪ್ರತಿಯೊಬ್ಬರ ಎದೆಯಲ್ಲೂ ಅಕ್ಷರದ ಹಣತೆ ಹಚ್ಚಿ, ಆ ಬೆಳಕಿನ ಮೂಲಕ ಜಗವ ಕಾಣುವ ಬಗೆಯನ್ನು ಕಲ್ಪಿಸಿಕೊಟ್ಟರು.

 

ಗ್ರಾಮಸ್ಥರಿಗೆ ಅಕ್ಷರಶಃ ಪವಾಡವೇ ಎನ್ನಿಸುತ್ತಿದ್ದ ಶಿಕ್ಷಕ ರೇವಣಸಿದ್ದಪ್ಪ ಅವರನ್ನು ಎಲ್ಲರೂ ದೈವಾಂಶ ಸಂಭೂತನೆಂದೇ ಭಾವಿಸುತ್ತಾರೆ. ರೇವಣಸಿದ್ಧಪ್ಪ 1925ರಲ್ಲಿ ನಿಧನರಾದ ನಂತರ ಅವರ ಅಭಿಮಾನಿಗಳೆಲ್ಲ  ಅವರ ಭಕ್ತರಾದರು.ಅದರ ಪರಿಣಾಮವಾಗಿ  ಶಿಕ್ಷಕರ ಸಮಾಧಿಯ ಮೇಲೆ ದೇವಾಲಯ ತಲೆ ಎತ್ತಿತು, ಆಳೆತ್ತರದ ಪಂಚಲೋಹದ ಮೂರ್ತಿಯನ್ನು ಪ್ರತಿಷ್ಠಾಪಿಸಿ, ನಂದಾದೀಪ  ಹಚ್ಚಿಟ್ಟು ದಿಕ್ಕೆರಡು ಪೂಜೆ  ಮಾಡುತ್ತಾರೆ. ಪ್ರತಿವರ್ಷ ಜಾತ್ರೆ ಪಲ್ಲಕ್ಕಿ ಉತ್ಸವ, ಭಕ್ತರ ಉರುಳು ಸೇವೆ, ಭಜನೆ, ನಾಟಕ, ಶಿವಾನುಭವ ಮುಂತಾದ ಕಾರ್ಯಕ್ರಮಗಳು ನಡೆಯುತ್ತದೆ. ತಮ್ಮೂರಿನ್ನಲ್ಲಿ ಹುಟ್ಟಿ ಬೆಳೆದು ಊರನ್ನೇ ಬೆಳೆಸಿದ ಶಿಕ್ಷಕ ರೇವಣಸಿದ್ಧಪ್ಪ ಅವರನ್ನು ಸ್ಮರಿಸುವಾಗ ಪ್ರತಿಯೊಬ್ಬರಲ್ಲೂ ಹಿಗ್ಗು ಮೂಡುತ್ತದೆ ಆ ಹಿಗ್ಗನ್ನೇ ಅವರು ಹಬ್ಬವಾಗಿ ಆಚರಿಸಿ ಸಂಭ್ರಮಿಸುತ್ತಾರೆ.ಅರ್ಥಗಾದ ಪ್ರತಿ ಮನೆಯ ಹೆಬ್ಬಾಗಿಲು, ಜಗುಲಿ, ಅಂಗಡಿಗಳ, ಮೇಲೆ ರೇವಣಸಿದ್ಧಪ್ಪ ಸಿಗುತ್ತಾರೆ ಮನೆಯಲ್ಲೊಂದು ಮಗುವಿಗೆ ತಾಯಂದಿರು `ರೇವಣಸಿದ್ದಪ್ಪ~ ಎಂದು ಕರೆದು ಮಗುವಿನ ಜೀವನದ ಸಾರ್ಥಕ್ಯವನ್ನು ಕಂಡಿದ್ದಾರೆ.ಜಾತ್ರಾ ಕಾರ್ಯಕ್ರಮಗಳು: ಇದೇ 20ರಂದು ಮಹಾ ಶಿವರಾತ್ರಿ ಶಿವಯೋಗದ ನಿಮಿತ್ತ ರಾತ್ರಿ ಕರ್ತೃ ಗದ್ದುಗೆಗೆ ಪಂಚಮಹಾಪೂಜೆ, ರಾತ್ರಿ 9ಕ್ಕೆ `ಹಸಿರು ಬಳೆ~  ನಾಟಕ ಪ್ರದರ್ಶನವಾಗಲಿದೆ.21ರಂದು  ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಮುರುಘೆಂದ್ರ ಸ್ವಾಮೀಜಿಗಳಿಂದ ನಡೆಯುವುದು. ಸಂಜೆ 6ಕ್ಕೆ ಶ್ರೀ ರೇವಣಸಿದ್ಧೇಶ್ವರ   ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವಗಳೊಂದಿಗೆ ಜರುಗುವುದು.22ರಂದು ಬೆಳಗ್ಗೆ 9-30ಕ್ಕೆ ಭಾರ ಎತ್ತುವ ಸ್ಪರ್ಧೆ ವಿಜೇತ ಸ್ಪರ್ಧಾಳುಗಳಿಗೆ ಬಹುಮಾನ ನೀಡಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry