ಶಿಕ್ಷಣಕ್ಕೆ ಕೇಂದ್ರದಿಂದ 85ಸಾವಿರ ಕೋಟಿ ವ್ಯಯ

7

ಶಿಕ್ಷಣಕ್ಕೆ ಕೇಂದ್ರದಿಂದ 85ಸಾವಿರ ಕೋಟಿ ವ್ಯಯ

Published:
Updated:

ವಿಜಯಪುರ: ಕೇಂದ್ರ ಸರ್ಕಾರವು ಶಿಕ್ಷಣಕ್ಕಾಗಿ 85 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದು, ಮಕ್ಕಳು ಕಲಿಕೆಯಲ್ಲಿ ಹಿಂದುಳಿಯದೆ ಸದೃಢರಾಗಿ ಬೆಳೆಯಬೇಕು ಎಂದು  ಕೇಂದ್ರ ಕಾನೂನು ಸಚಿವ ಎಂ.ವೀರಪ್ಪಮೊಯಿಲಿ ಸಲಹೆ ನೀಡಿದರು.ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಿರುವ ಹೆಚ್ಚುವರಿ ಕೊಠಡಿಗಳನ್ನು  ಉದ್ಘಾಟಿಸಿ ಅವರು ಮಾತನಡಿದರು. ಮಕ್ಕಳಲ್ಲಿ ಆತ್ಮಸ್ಥೈರ್ಯ, ಕಲಿಕೆಯಲ್ಲಿ ಆಸಕ್ತಿ, ಉತ್ತಮ ಮೌಲ್ಯಗಳನ್ನು ಬಿತ್ತುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.ರಸ್ತೆ, ನೀರು, ಚರಂಡಿ ಒದಗಿಸುವುದಕ್ಕಿಂತಲೂ ಪ್ರಮುಖವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳನ್ನು ಸುಶಿಕ್ಷಿತರನ್ನಾಗಿಸಬೇಕು. ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಸ್‌ಸಿ, ದ್ವಿತೀಯ ಪಿಯುಸಿ, ಸಿಇಟಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.ಅಧ್ಯಕ್ಷತೆವಹಿಸಿದ್ದ ಶಾಸಕ ಕೆ.ವೆಂಕಟಸ್ವಾಮಿ ಮಾತನಾಡಿ, ಶಿಕ್ಷಣದ ಮೂಲಕ ದೇಶದ ಅಭಿವೃದ್ಧಿ ಸಾಧ್ಯ. ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಗುಣಾತ್ಮಕ ಶಿಕ್ಷಣ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು.ಜಿ.ಪಂ. ಸದಸ್ಯ ಬಿ.ರಾಜಣ್ಣ ಮಾತನಾಡಿ, ತಾಲ್ಲೂಕಿನ ಪ್ರತಿ ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕನಿಷ್ಠ 100 ಕೊಳವೆಬಾವಿಗಳನ್ನು ಕೇಂದ್ರದಿಂದ ಮಂಜೂರು ಮಾಡಿಸಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಬಚ್ಚೇಗೌಡ, ಪುರಸಭೆ ಅಧ್ಯಕ್ಷೆ ಮಂಜುಳಾ ಎ.ನಾರಾಯಣಸ್ವಾಮಿ, ಉಪಾಧ್ಯಕ್ಷ ಎಂ.ಎಲ್.ಕೃಷ್ಣಪ್ಪಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೀರಣ್ಣ, ಭಾವಾ,  ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ನಂಜುಂಡಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ವಿ.ವೆಂಕಟೇಶಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಹನುಮಂತಪ್ಪ, ಬೈರಾಪುರ ರಾಜಣ್ಣ, ರೋಡಳ್ಳಿ ರಾಜಣ್ಣ, ಪ್ರಾಂಶುಪಾಲ ಪಿ.ಎಸ್.ನಾಗರಾಜು, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಬಸವರಾಜು, ಪುರಸಭಾ ಸದಸ್ಯರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಇದ್ದರು.ಇದೇ ಸಂದರ್ಭದಲ್ಲಿ ಹೆಣ್ಣುಮಕ್ಕಳ ಸರ್ಕಾರಿ ಪ್ರೌಢಶಾಲೆಯ ಹೆಚ್ಚವರಿ ಕೊಠಡಿಗಳನ್ನು ಮತ್ತು ಪ್ರವಾಸಿ ಮಂದಿರದ ಹೆಚ್ಚುವರಿ ಕಟ್ಟಡವನ್ನು ಉದ್ಘಾಟಿಸಲಾಯಿತು.ಪ್ರಾಂಶುಪಾಲ ಪಿ.ಎಸ್.ನಾಗರಾಜು ಸ್ವಾಗತಿಸಿದರು. ಆನಂದಕುಮಾರ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry