ಶನಿವಾರ, ನವೆಂಬರ್ 23, 2019
23 °C

`ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ'

Published:
Updated:

ಬಳ್ಳಾರಿ: ಶಿಕ್ಷಣದ ಮೂಲಕ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ವಿಜಯಕುಮಾರ್ ಅಭಿಪ್ರಾಯಪಟ್ಟರು.ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಪ್ರತಿಭಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣವು ತ್ವರಿತ ಆರ್ಥಿಕ ಬೆಳವಣಿಗೆಗೆ ರಹದಾರಿಯಾಗಿದೆ. ಯುವಜನತೆ ಇದನ್ನು ಅರ್ಥೈಸಿ ಕೊಂಡು, ಉತ್ತಮ, ಉನ್ನತ ಶಿಕ್ಷಣ ಪಡೆಯುವ ಮೂಲಕ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ದುಡಿಯುವ ಶಿಕ್ಷಕರ ಸಲಹೆ- ಸೂಚನೆ ಸ್ವೀಕರಿಸಿ  ಸುಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು ಎಂದು ಸಾಹಿತಿ ಪ್ರೊ. ಇಟಗಿ ಈರಣ್ಣ ತಿಳಿಸಿದರು.ರಂಗಭೂಮಿಯ ಹಿರಿಯ ಕಲಾವಿದೆ ಸುಭದ್ರಮ್ಮ ಮನ್ಸೂರ್ ಅವರನ್ನು ಇದೇ ಸಂದರ್ಭ ಸತ್ಕರಿಸಲಾಯಿತು. ಪ್ರಾಚಾರ್ಯ ಪ್ರೊ.ಡಿ.ಗಂಗಣ್ಣ ಅಧ್ಯಕ್ಷತೆ ವಹಿಸಿದ್ದರು.  ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಗೋಪಾಲ್, ಗಣಿತ ಶಾಸ್ತ್ರ ವಿಭಾಗದ  ಮುಖ್ಯಸ್ಥ ನಾಗರಾಜ ಉಪಸ್ಥಿತರಿದ್ದರು.

ಪ್ರೇರಣಾ ಪ್ರಾರ್ಥಿಸಿದರು. ಆರ್.ಪಿ. ಮಂಜುನಾಥ ನಾಡಗೀತೆ ಪ್ರಸ್ತುತ ಪಡಿಸಿದರು. ಡಾ.ಮಾನಕರಿ ಶ್ರೀನಿವಾಸಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ.ಟಿ.ವೀರಭದ್ರಪ್ಪ ಸ್ವಾಗತಿಸಿದರು. ಡಾ.ಕಲಾವತಿ ಮತ್ತು ಡಾ.ಸರೋಜಾ ವಾರ್ಷಿಕ ವರದಿ ವಾಚಿಸಿದರು.

ಕೆ.ಎನ್. ರಾಮಾಂಜನೇಯ, ಸೋಮನಾಥ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)