ಶಿಕ್ಷಣದ ಗುಣಮಟ್ಟ ಕಾಪಾಡಲು ಕ್ರಮ: ಶೆಟ್ಟರ್

7
ಕೆಎಲ್‌ಇ ಸಂಸ್ಥೆಯ ನೂತನ ಸಿಬಿಎಸ್‌ಇ ಶಾಲಾ ಕಟ್ಟಡ ಉದ್ಘಾಟನೆ

ಶಿಕ್ಷಣದ ಗುಣಮಟ್ಟ ಕಾಪಾಡಲು ಕ್ರಮ: ಶೆಟ್ಟರ್

Published:
Updated:

ಚಿಕ್ಕೋಡಿ/ನಿಪ್ಪಾಣಿ: ರಾಜ್ಯದಲ್ಲಿ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಸುರಿಯುತ್ತಿದೆ. ಆದರೂ, ಶಿಕ್ಷಣ ಪ್ರಸಾರದಲ್ಲಿ ಗುಣಮಟ್ಟ ಕಾಯ್ದುಕೊಂಡು ಹೋಗಲು ಆಗುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣ ಪ್ರಸಾರಕ್ಕಾಗಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.ಭಾನುವಾರ ತಾಲ್ಲೂಕಿನ ನಿಪ್ಪಾಣಿ ನಗರದಲ್ಲಿ ಕೆಎಲ್‌ಇ ಸಂಸ್ಥೆಯು ನೂತನವಾಗಿ 9 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತವಾದ ಸಿಬಿಎಸ್‌ಇ ಶಾಲಾ ಕಟ್ಟಡ ಮತ್ತು ಅಂಕಲಿಯ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯು ನಿಪ್ಪಾಣಿಯಲ್ಲಿ ಆರಂಭಿಸಿರುವ ನೂತನ ಶಾಖೆಯನ್ನು ಉದ್ಘಾಟಿಸಿ  ಅವರು ಮಾತನಾಡಿದರು.ದೇಶದಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಜಾರಿಗೊಳಿಸಿದ ಸರ್ವ ಶಿಕ್ಷಣ ಅಭಿಯಾನ ಯೋಜನೆಯಿಂದಾಗಿ ಸುಣ್ಣ ಬಣ್ಣ ಕಾಣದ ಶಾಲೆಗಳೂ ಇಂದು ಅಭಿವೃದ್ಧಿ ಕಂಡಿವೆ. ಶಾಲೆಗಳಿಗೆ ನಿರ್ವಹಣಾ ಅನುದಾನ ಹರಿದು ಬರುತ್ತಿದೆ. ರಾಜ್ಯ ಸರ್ಕಾರವೂ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ 1500 ಕೋಟಿ ರೂಪಾಯಿ ಅನುದಾನ ನೀಡಿದೆ. ಸಣ್ಣ ಸಣ್ಣ ಹಳ್ಳಿಗಳಿಗೂ ಶಾಲೆಗಳನ್ನು ಆರಂಭಿಸಿ ಗ್ರಾಮೀಣ ಭಾಗದ ಮಕ್ಕಳಿಗೂ ಶಿಕ್ಷಣ ನೀಡಲಾಗುತ್ತಿದೆ ಎಂದರು.ಸಂಸ್ಥೆಯು ಇಂದು 85 ಸಾವಿರ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, 10 ಸಾವಿರ ಶಿಕ್ಷಕರು ಜ್ಞಾನವನ್ನು ಧಾರೆ ಎರೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ತಾವೂ  ಹುಬ್ಬಳ್ಳಿಯಲ್ಲಿ ಕೆಎಲ್‌ಇ ಸಂಸ್ಥೆಯ ಕಾಲೇಜಿನಲ್ಲೇ ಪದವಿ ಪಡೆದು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 15 ಜನ ಮಂತ್ರಿಗಳು ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳೇ ಆಗಿದ್ದಾರೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.ನಿಪ್ಪಾಣಿ ತಾಲ್ಲೂಕು ರಚನೆಗೆ ಆದ್ಯತೆ

ಸಮಾರಂಭದಲ್ಲಿ ಮಾತನಾಡಿದ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಸಚಿವ ಉಮೇಶ ಕತ್ತಿ ಅವರು ಗಡಿಭಾಗದ ನಿಪ್ಪಾಣಿ ನಗರಕ್ಕೆ ತಾಲ್ಲೂಕು ಸ್ಥಾನಮಾನ ನೀಡಬೇಕು ಎಂದು ಮಾಡಿಕೊಂಡ ಮನವಿಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯೆ ನೀಡಿದ ಜಗದೀಶ ಶೆಟ್ಟರ್, `ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ಸಣ್ಣ ಸಣ್ಣ ತಾಲ್ಲೂಕು, ಜಿಲ್ಲೆ ಅಥವಾ ರಾಜ್ಯಗಳ ರಚನೆ ಅಗತ್ಯವಾಗಿದೆ ಎಂಬುದು ನಮ್ಮ ವೈಯುಕ್ತಿಕ ಅಭಿಪ್ರಾಯ.

ಕಂದಾಯ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ತಾಲ್ಲೂಕುಗಳ ಬೇಡಿಕೆ ವಿಚಾರಗಳನ್ನು ಆ ಸಮಿತಿ ವರದಿ ನೀಡಿದ ನಂತರ ಹೊಸ ತಾಲ್ಲೂಕುಗಳ ರಚನೆಯನ್ನು ಆರಂಭಿಸಲಾಗುತ್ತಿದೆ. ಆ ಸಂದರ್ಭದಲ್ಲಿ ನಿಪ್ಪಾಣಿಯನ್ನು ಪರಿಗಣಿಸಲಾಗುವುದು' ಎಂದು ಭರವಸೆ ನೀಡಿದರು.ಕೃಷಿ ಸಚಿವ ಉಮೇಶ ಕತ್ತಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.

ಕೆಎಲ್‌ಇ ಕಾರ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ,  ಸಪ್ತರ್ಷಿಗಳು ಕಟ್ಟಿದ ಕೆಎಲ್‌ಇ ಸಂಸ್ಥೆ ಇಂದು 227 ಅಂಗಸಂಸ್ಥೆಗಳೊಂದಿಗೆ 90 ಸಾವಿರ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ.ದೇಶದಲ್ಲೇ ಎರಡನೇ ಅತಿದೊಡ್ಡ ಆಸ್ಪತ್ರೆಯನ್ನು ಬೆಳಗಾವಿಯಲ್ಲಿ ತೆರೆದು ಆರೋಗ್ಯ ಸೇವೆ ನೀಡುತ್ತಿದೆ. 60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆ ಮುಂಬರುವ ವರ್ಷ ಪೂರ್ಣಗೊಳ್ಳಲಿದೆ. ನಿಪ್ಪಾಣಿಯಲ್ಲಿ 12 ಎಕರೆ ವಿಸ್ತಿರ್ಣದಲ್ಲಿ 9 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸಿಬಿಎಸ್‌ಇ ಶಾಲೆಯ ಅಭಿವೃದ್ಧಿಗೆ ಇನ್ನೂ 6 ಕೋಟಿ ರೂಪಾಯಿ ವ್ಯಯಿಸಿ ಬರುವ 2 ವರ್ಷಗಳಲ್ಲಿ ವಸತಿ ಶಾಲೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.

ಕೆಎಲ್‌ಇ ಸಂಸ್ಥೆಯ ಗೌರವಾಧ್ಯಕ್ಷ ಶಿವಾನಂದ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕಾಕಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ವೀರಕುಮಾರ ಪಾಟೀಲ, ಕೆಎಲ್‌ಇ ಉಪಾಧ್ಯಕ್ಷ ಅಶೋಕ ಬಾಗೇವಾಡಿ, ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸಿ.ಜಿ. ಕೋಕಾಟೆ, ಡಾ. ರಾಜಶೇಖರನ್, ಎಸ್.ಸಿ. ಮೆಟಗುಡ್ಡ, ಮಾಜಿ ಶಾಸಕರಾದ ರಘುನಾಥರಾವ ಕದಮ, ಬಾಳಾಸಾಹೇಬ ಸಾರವಾಡಿ, ಜಿ.ಪಂ. ಸದಸ್ಯ ಮಹೇಶ ಭಾತೆ, ಸುಜಾತಾ ಖೋತ, ಅಜೀತ ದೇಸಾಯಿ, ಗೋಪಾಳದಾದಾ ಪಾಟೀಲ, ಲಕ್ಷ್ಮಣರಾವ ಚಿಂಗಳೆ, ಶಂಕರಣ್ಣ ಮುನವಳ್ಳಿ ಮುಂತಾದವರು ಉಪಸ್ಥಿತರಿದ್ದರು. ಶ್ರದ್ಧಾ ಪಾಟೀಲ ಮತ್ತು ಅಂಜುಮ್ ಜಮಾದಾರ ನಿರೂಪಿಸಿದರು. ಪ್ರಾಚಾರ್ಯ ಎ.ಎಸ್. ಹುಲಮನಿ ವಂದಿಸಿದರು.ಪಾಲಕರ ಸಭೆ

ಗೋಕಾಕ:
ನಗರದ ವಿದ್ಯಾನಿಕೇತನ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ ಪಾಲಕರ ಸಭೆ ಇತ್ತೀಚೆಗೆ ಜರುಗಿತು. ಅಧ್ಯಕ್ಷತೆಯನ್ನು ನೇಚರ್ ಎಜ್ಯುಕೇಶನ್ ಫೌಂಡೇಷನ್ ಅಧ್ಯಕ್ಷ ಎಲ್.ಟಿ.ತಪಶಿ ವಹಿಸಿದ್ದರು. ಉಪನ್ಯಾಸಕಿ ಶೋಭಾ ತಪಶಿ, ಸುಪ್ರಿಯಾ ಮಾವಿನಗಿಡದ, ಶಿವಪ್ಪ ಅಥಣಿ, ಅರವಿಂದ ಜೋಡಟ್ಟಿ, ಎಸ್ .ಟಿ. ಜಾಧವ, ಐ.ಎಸ್ .ಶೀಗಿಹಳ್ಳಿ, ಬಿ.ವಿ. ಕೊಪ್ಪದ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry