ಬುಧವಾರ, ಜನವರಿ 29, 2020
28 °C

ಶಿಕ್ಷಣವಂಚಿತ ವಲಸೆ ಕಾರ್ಮಿಕರ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಣವಂಚಿತ ವಲಸೆ ಕಾರ್ಮಿಕರ ಮಕ್ಕಳು

ಆಳಂದ: ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕಾಗಿದೆ. ಅದಕ್ಕಾಗಿ 6ರಿಂದ 14 ವರ್ಷದ ಪ್ರತಿಯೊಂದು ಮಗು ಶಾಲೆಯಲ್ಲಿರಬೇಕು. ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಆದರೆ ಹಲವು ತಿಂಗಳುಗಳಿಂದ ಕೇಂದ್ರಿಯ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿಯಲ್ಲಿ ವಲಸೆ ಬಂದಿರುವ ನೂರಾರು ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು ಕಂಡುಬಂದಿದೆ.ತಾಲ್ಲೂಕಿನ ಕಡಗಂಚಿ ಬಳಿ ಕೇಂದ್ರ ಸರ್ಕಾರವು ಸುಮಾರು 287 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕೇಂದ್ರಿಯ ವಿ.ವಿ. ಕಟ್ಟಡ ಕಾಮಗಾರಿಯನ್ನು ಕಳೆದ ವರ್ಷ ಮಾನವ ಸಂಪನ್ಮೂಲ ಮಂತ್ರಿ ಕಪಿಲ್ ಸಿಬಲ್ ಉದ್ಘಾಟಿಸಿದ್ದರು. ಆಂಧ್ರ ಮೂಲದ ಸಂಸ್ಥೆಯೊಂದು ಈ ಬೃಹತ್ ಯೋಜನೆಯು ಗುತ್ತಿಗೆ ಪಡೆದು ಈಗಾಗಲೇ ಮೊದಲ ಹಂತದ ಕಾಮಗಾರಿ ಪ್ರಾರಂಭಿಸಿ 10 ತಿಂಗಳಾಗುತ್ತಿವೆ.

 

ಕಾಮಗಾರಿ ನಿರ್ಮಾಣಕ್ಕಾಗಿ ಆಂಧ್ರದ ಮಹಿಬೂಬ ನಗರ, ಕರೀಮ ನಗರ, ತಾಂಡೂರ ಮತ್ತಿತರ ಭಾಗದಿಂದ ನೂರಾರು ಕಾರ್ಮಿಕರು ಕೆಲಸ ಅರಸಿ ವಲಸೆ ಬಂದಿದ್ದಾರೆ. ಇವರು ಕುಟುಂಬ ಸಮೇತ ವಲಸೆ ಬಂದಿದ್ದು, ಈ ಕುಟುಂಬಗಳ ಹತ್ತಾರು ಮಕ್ಕಳು ಶಾಲೆಯಿಂದ ವಂಚಿತರಾಗಿ ಆವರಣದಲ್ಲಿ ಸುತ್ತಾಡುವುದು ಕಂಡು ಬರುತ್ತಿದೆ.ಕೆಲಸ ಮಾಡುವ ಪ್ರತಿ ಗಂಡು-ಹೆಣ್ಣು ಮಕ್ಕಳಿಗೆ 320 ರೂಪಾಯಿ ಕೂಲಿ ನೀಡುವುದಲ್ಲದೇ ಊಟ, ವಸತಿ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದರಿಂದ ಪಾಲಕರಿಗೆ ಸರಿಯಾದ ಕೂಲಿ ದೊರೆಯಲಿದೆ. ಇವರು ವಿಶಾಲವಾದ ಮೈದಾನದಲ್ಲಿ ವಾಸಿಸಲು ಗುಡಿಸಲುಗಳನ್ನು ಆಶ್ರಯಸಿದ್ದಾರೆ.ಈ ಬಡ ಕುಟುಂಬಗಳ ಮಕ್ಕಳು ಮಾತ್ರ ಓದು, ಬರಹ, ಶಿಕ್ಷಣವಿಲ್ಲದೆ ಸುತ್ತಮುತ್ತಲಿರುವ ಕಲ್ಲು, ಮಣ್ಣಿನಲ್ಲಿ ಆಡುವುದು, ಕುಣಿಯುವುದು, ಬಿಸಿಲು, ಮಳೆ, ಚಳಿ ಲೆಕ್ಕಿಸಿದೇ ಸುಳಿದಾಡುತ್ತಿದ್ದಾರೆ. ವಾಹನಗಳ ಸದ್ದು, ಯಂತ್ರ ಭರಾಟೆ ಬಿಟ್ಟರೆ ಮಕ್ಕಳೊಂದಿಗೆ ಕಾಲಕಳೆಯಲು ಪಾಲಕರಿಗೂ ಪುರುಸೊತ್ತಿಲ್ಲ. ಮನರಂಜನೆಯ ಯಾವ ಸೌಲಭ್ಯವು ಹೊಂದದ ಈ ಮಕ್ಕಳು ತಮ್ಮಟ್ಟಿಗೆ ಇರುತ್ತಾರೆ. ವಲಸೆ ಬಂದ ತಂದೆ-ತಾಯಿಗಳಿಂದ ಮಕ್ಕಳ ಶಾಲೆಯನ್ನು ಮಧ್ಯದಲ್ಲಿಯೇ ಬಿಡಿಸಿ ಕರೆದುಕೊಂಡು ಬಂದಿದ್ದಾರೆ ಎಂದು 8ನೇ ತರಗತಿಯ ಮಹಾಲಕ್ಷ್ಮಿ ತಿಳಿಸಿದಳು.ದಿನಾಲು ನೂರಾರು ಉನ್ನತ ಅಧಿಕಾರಿಗಳು, ಎಂಜಿನಿಯರ್‌ಗಳ ಮುಂದೆ ಕಿರುಚಾಡುವ ಅರವತ್ತಕ್ಕಿಂತ ಹೆಚ್ಚಿನ ಮಕ್ಕಳು ಶಾಲೆ ಕಲಿಯುವ ವಯಸ್ಸಿನವರು. ಇವರಿಗಾಗಿ ಶಿಕ್ಷಣದ ಪರ್ಯಾಯ ವ್ಯವಸ್ಥೆ ಮಾಡದೆ ಇರುವುದು ಸರಿಯಲ್ಲ ಎಂದು ಪ್ರಜ್ಞಾವಂತರು ಹೇಳುತ್ತಾರೆ.ಬಡತನದ ಅನಿವಾರ್ಯತೆಯಿಂದ ಕೆಲಸ ಹುಡುಕಿಕೊಂಡು ಬಂದಿದ್ದೇವೆ. ನಮ್ಮ ಮಕ್ಕಳನ್ನು ಅಲ್ಲೇ ಹೇಗೆ ಬಿಡೊಕಾಗ್ತದ ಎಂದು ಕಾರ್ಮಿಕ ಗೋಪಿ ಅಸಹಾಯಕತೆಯಿಂದ ನುಡಿದರು. 6ನೇ ವರ್ಗದಲ್ಲಿ ಓದುವ ಪ್ರಭು, ಅಪ್ಪ-ಅಮ್ಮ ಊರಿಗೆ ಹೋದ ಮೇಲೆ ಶಾಲೆ ಕಲಿಯುತ್ತೇನೆ ಎಂದು ಆಟವಾಡುತ್ತ ಹೇಳಿದನು.

ಪ್ರತಿಕ್ರಿಯಿಸಿ (+)