ಶುಕ್ರವಾರ, ನವೆಂಬರ್ 22, 2019
22 °C

ಶಿಕ್ಷಣ, ಆರೋಗ್ಯ ಕ್ಷೇತ್ರ ಸಾರ್ವತ್ರೀಕರಣಕ್ಕೆ ಆಗ್ರಹ

Published:
Updated:

ಬೆಂಗಳೂರು: `ಕುಡಿಯುವ ನೀರು, ಆಹಾರ, ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದ ಸಾಮಾಜಿಕ ಭದ್ರತಾ ಸೇವೆಗಳನ್ನು ಸಾರ್ವತ್ರೀಕರಣಗೊಳಿಸಬೇಕು' ಎಂದು `ಕರ್ನಾಟಕ ವಿಧಾನಸಭಾ ಚುನಾವಣೆ - 2013ರ ಪ್ರಣಾಳಿಕೆಗಾಗಿ ನಾಗರಿಕ ಸಮುದಾಯ ವೇದಿಕೆ' ಆಗ್ರಹಿಸಿದೆ.`ಸಾಮಾಜಿಕ ಭದ್ರತಾ ಸೇವೆಗಳನ್ನು ಖಾಸಗಿಯವರ ಕೈಗೆ ಒಪ್ಪಿಸಬಾರದು. ಅವುಗಳನ್ನು ಸರ್ಕಾರವೇ ಒದಗಿಸಬೇಕು. ಈ ಸೇವೆಗಳಿಗಾಗಿ ಬಜೆಟ್‌ನಲ್ಲಿ ಮೀಸಲಿಡುವ ಹಣವನ್ನು ಬೇರೆ ಕಾರ್ಯಗಳಿಗೆ ಖರ್ಚು ಮಾಡದಂತೆ ಕಾನೂನು ಜಾರಿ ಮಾಡಬೇಕು. ಈ ಬೇಡಿಕೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕು' ಎಂದು ವೇದಿಕೆ ಒತ್ತಾಯಿಸಿದೆ.ವೇದಿಕೆಯು ನಗರದಲ್ಲಿ ಮಂಗಳವಾರ ವಿವಿಧ ರಾಜಕೀಯ ಪಕ್ಷಗಳೊಡನೆ ಮುಖಾಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. `ಮಕ್ಕಳಲ್ಲಿನ ಅಪೌಷ್ಟಿಕತೆ ನಿರ್ಮೂಲನೆ, ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಕನಿಷ್ಠ ಕೂಲಿ, ಮಾನವ ಹಕ್ಕುಗಳ ರಕ್ಷಿಣೆ, ಮೂಲಸೌಕರ್ಯ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ ಸುಧಾರಣೆ ಮತ್ತು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಬೇಕು. ಉದ್ದಿಮೆಗಳು, ಖಾಸಗಿ ವಿದ್ಯಾ ಸಂಸ್ಥೆ ಹಾಗೂ ಆರೋಗ್ಯ ಸಂಸ್ಥೆಗಳಿಗೆ ಅನವಶ್ಯಕವಾಗಿ ತೆರಿಗೆ ವಿನಾಯಿತಿ ನೀಡುವುದನ್ನು ನಿಲ್ಲಿಸಬೇಕು' ಎಂಬ ಬೇಡಿಕೆಗಳನ್ನು ವೇದಿಕೆ, ರಾಜಕೀಯ ಪಕ್ಷಗಳ ಎದುರು ಇಟ್ಟಿದೆ.`ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ, ಗೋಹತ್ಯೆ ನಿಷೇಧ ಮಸೂದೆ ವಾಪಸ್, ಮಡೆಸ್ನಾನ ಮತ್ತು ಅಜಲು ಪದ್ಧತಿಗಳ ನಿಷೇಧ ಸೇರಿದಂತೆ ನಮ್ಮ ಹಲವು ಬೇಡಿಕೆಗಳನ್ನು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಬೇಕು' ಎಂದು ವೇದಿಕೆ ಮನವಿ ಮಾಡಿದೆ.ಸಿಪಿಎಂ ಮುಖಂಡ ಕೆ.ಪ್ರಕಾಶ್ ಮಾತನಾಡಿ, `ಬಡತನ ರೇಖೆಗಿಂತ ಮೇಲಿರುವವರು ಅಥವಾ ಕೆಳಗಿರುವವರು ಎಂಬ ಮಾನದಂಡಗಳನ್ನು ಅನುಸರಿಸದೆ ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕು. ದಲಿತರ ಮೇಲಿನ ದೌರ್ಜನ್ಯ ತಡೆ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಾಚಾರ್ ಸಮಿತಿಯ ವರದಿ ಜಾರಿ, ಬೆಂಗಳೂರು ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಕ್ರಮ ಕೈಗೊಳ್ಳುವುದು ಪಕ್ಷದ ಪ್ರಣಾಳಿಕೆಯಲ್ಲಿ ಇರಲಿವೆ' ಎಂದು ಹೇಳಿದರು.ಎಸ್‌ಡಿಪಿಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮದ್ ಸಾಫಿಕ್ ಮಾತನಾಡಿ, `ಜನರನ್ನು ಭಯ ಹಾಗೂ ಹಸಿವಿನಿಂದ ಮುಕ್ತರನ್ನಾಗಿ ಮಾಡುವುದೇ ನಮ್ಮ ಪಕ್ಷದ ಪ್ರಮುಖ ಗುರಿ' ಎಂದರು. ಜೆಡಿಎಸ್‌ನ ರಮೇಶ್ ಬಾಬು, ಲೋಕಸತ್ತಾ ಪಕ್ಷದ ಮಲ್ಲೇಶ್ವರ ಕ್ಷೇತ್ರದ ಅಭ್ಯರ್ಥಿ ಡಾ.ಮೀನಾಕ್ಷಿ ಭರತ್, ಆಮ್ ಆದ್ಮಿ ಪಕ್ಷದ ಮುಖಂಡ ಸುಮಿತ್ ನೇಗಿ ಮತ್ತಿತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)