ಬುಧವಾರ, ನವೆಂಬರ್ 20, 2019
22 °C

ಶಿಕ್ಷಣ, ಆರೋಗ್ಯ, ನೀರಾವರಿಗೆ ಆದ್ಯತೆ: ಎಚ್‌ಡಿಕೆ

Published:
Updated:

ಚನ್ನರಾಯಪಟ್ಟಣ: ಮಾಧ್ಯಮದಲ್ಲಿ ಬರುತ್ತಿರುವ ವರದಿಯನ್ನು ನಂಬಬೇಡಿ. ಜೆಡಿಎಸ್ ಈ ಚುನಾವಣೆಯಲ್ಲಿ 125-130 ಸ್ಥಾನಗಳಿಸಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಸೋಮವಾರ ರಾತ್ರಿ ಪಟ್ಟಣದಲ್ಲಿ ನಡೆದ ಜೆಡಿಎಸ್ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಘೋಷಿಸಿದರು.

ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಎನ್. ಬಾಲಕೃಷ್ಣ ಅವರನ್ನು ಕಣಕ್ಕಿಳಿಸಿರುವುದು ನಮ್ಮ ಕುಟುಂಬದ ನಿರ್ಧಾರವಲ್ಲ. ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಅವರು 2008ರ ಚುನಾವಣೆಯ ಸಂದರ್ಭದಲ್ಲಿ ಮುಂದಿನ ಬಾರಿ ಬಾಲಕೃಷ್ಣ ಅವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದರು.

ಆದರೆ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು, ಮಂತ್ರಿಯಾಗಬಹುದು ಎಂಬ ಆಸೆಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಟೀಕಿಸಿದರು. ಜಿಲ್ಲೆಯಲ್ಲಿ ಎಚ್.ಎಂ. ವಿಶ್ವನಾಥ್, ಎಚ್.ಕೆ. ಜವರೇಗೌಡ ಪಕ್ಷ ತೊರೆದಿದ್ದಾರೆ. ಇವರಾರಿಗೂ ದೇವೇಗೌಡ ಅವರಿಂದ ಸಣ್ಣ ಪ್ರಮಾಣದಲ್ಲಿಯೂ ಅಪಚಾರ ಆಗಿಲ್ಲ ಎಂದು ಹೇಳಿದರು.

ಜೆಡಿಎಸ್ ಅಭ್ಯರ್ಥಿ ಸಿ.ಎನ್. ಬಾಲಕೃಷ್ಣ ಮಾತನಾಡಿ, ವಿರೋಧಿಗಳು ತಮ್ಮ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದರು.

ಎಪಿಎಂಸಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ ಮಾತನಾಡಿ, ಜೆಡಿಎಸ್‌ನಿಂದ  ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಈಗ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಎನ್.ಡಿ. ಕಿಶೋರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಅಂಬಿಕಾ ರಾಮಕೃಷ್ಣ, ಮಲ್ಲೇಗೌಡ, ಪರಮದೇವರಾಜೇಗೌಡ, ಬಿ. ಪುಟ್ಟರಾಜು, ಕೆ.ಎಲ್. ಶ್ರೀಧರ್, ವಿ.ಎನ್. ರಾಜಣ್ಣ, ಎಚ್.ಬಿ. ಗಂಗರಾಜ್, ಕೆಂಪನಂಜೇಗೌಡ, ಎಂ.ಎಲ್. ಜಗದೀಶ್, ಎಸ್.ಬಿ. ಜಗದೀಶ್, ಪರಮ ಕೃಷ್ಣೇಗೌಡ, ಬಿ.ಎಚ್. ಶಿವಣ್ಣ ಮಾತನಾಡಿದರು. ಕುಸುಮ ಬಾಲಕೃಷ್ಣ, ಶಿವಶಂಕರ್‌ಕುಂಟೆ, ಹೇಮಾವತಿ ಕೃಷ್ಣನಾಯಕ್ ಇದ್ದರು.

ಪ್ರತಿಕ್ರಿಯಿಸಿ (+)