ಮಂಗಳವಾರ, ಏಪ್ರಿಲ್ 20, 2021
32 °C

ಶಿಕ್ಷಣ ಇಲಾಖೆಯಲ್ಲಿ ಆಡಳಿತ ಇದೆಯೇ?:ಸಚಿವರೇ ಕ್ಷಣ ಇತ್ತ ಗಮನಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಶೈಕ್ಷಣಿಕ ವಿದ್ಯಮಾನಗಳ ಕುರಿತು ಚರ್ಚಿಸಲು ನಡೆಸುವ ಮಾಸಿಕ ಸಮಾಲೋಚನಾ ಸಭೆಗೆ ಹಾಜರಾಗುವ ಶಿಕ್ಷಕರಿಗೆ ಭತ್ಯೆ ನೀಡುತ್ತಿಲ್ಲ. ಸಂಪನ್ಮೂಲ ವ್ಯಕ್ತಿಗಳಿಗೆ ನಿಗದಿಪಡಿಸಿರುವ ಸಂಭಾವನೆ ಹಣ ಖರ್ಚಾಗುತ್ತಿದೆ ಆದರೆ, ಸಂಪನ್ಮೂಲ ವ್ಯಕ್ತಿಗಳನ್ನೇ ಆಹ್ವಾನಿಸುವುದಿಲ್ಲ- ಇವು ಜಿಲ್ಲೆಯ ಯಾವುದೇ ಶಿಕ್ಷಕರನ್ನು ಕೇಳಿದರೂ ಹೇಳುವ ಮಾತುಗಳು.ಸ್ವತಃ ಶಿಕ್ಷಕರೇ ಹೇಳುವಂತೆ ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದಲೂ ಮಾಸಿಕ ಸಮಾಲೋಚನಾ ಸಭೆಗೆ ಹಾಜರಾಗುತ್ತಿರುವ ಶಿಕ್ಷಕರಿಗೆ ಭತ್ಯೆ ನೀಡುತ್ತಿಲ್ಲ. ಸಭೆ ನಡೆಯುವ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯ ಊಟವನ್ನೇ ಶಿಕ್ಷಕರಿಗೆ ನೀಡಲಾಗುತ್ತಿದೆ ಎಂಬ ದೂರುಗಳು ಸಹ ಶಿಕ್ಷಕರನ್ನು ಮಾತನಾಡಿಸಿದಾಗ ಕೇಳಿ ಬರುತ್ತವೆ.ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರಕಾರ, 40 ಜನ ಶಿಕ್ಷಕರಿಗೆ ಒಂದು ಮಾಸಿಕ ಸಮಾಲೋಚನಾ ಸಭೆ ನಡೆಸಬೇಕು. ಈ ಸಭೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಶಿಕ್ಷಕರಿಗೆ ಸ್ಥಳೀಯ ಭತ್ಯೆ ರೂ. 25 ನೀಡಬೇಕು. ಸಭೆಗೆ ಇಬ್ಬರು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಬೇಕಿದ್ದು, ತಲಾ 150 ರೂಪಾಯಿ ಸಂಭಾವನೆ ನೀಡಬೇಕು.ಜೊತೆಗೆ 40 ರೂಪಾಯಿ ಪ್ರಯಾಣ ಭತ್ಯೆ, 60 ರೂಪಾಯಿ ದಿನ ಭತ್ಯೆ ನೀಡಬೇಕು. ಕಲಿಕೋಪಕರಣಗಳ ತಯಾರಿಕೆಗೆ 200 ರೂಪಾಯಿ, ಮಾಡ್ಯೂಲ್ ತಯಾರಿಕೆಗೆ 400 ರೂಪಾಯಿ, ಲಘು ಉಪಹಾರ, ಕಾಫಿ-ಚಹಕ್ಕೆ 1,800 ರೂಪಾಯಿ ಸೇರಿದಂತೆ ಒಂದು ಮಾಸಿಕ ಸಮಾಲೋಚನಾ ಸಭೆಗೆ ಒಟ್ಟು 4 ಸಾವಿರ ರೂಪಾಯಿ ವೆಚ್ಚ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.ಜಿಲ್ಲೆಯಲ್ಲಿ ಸುಮಾರು 5 ಸಾವಿರ ಜನ ಶಿಕ್ಷಕರಿದ್ದಾರೆ. ಒಂದು ಗುಂಪಿನಲ್ಲಿ 40 ಜನ ಶಿಕ್ಷಕರಂತೆ ಒಟ್ಟು 125 ಗುಂಪುಗಳಿಗೆ ಮಾಸಿಕ ಸಮಾಲೋಚನಾ ಸಭೆ ನಡೆಸಬೇಕು. ಪ್ರತಿ ಗುಂಪಿಗೆ 4 ಸಾವಿರ ರೂಪಾಯಿಯಂತೆ ಒಂದು ತಿಂಗಳಿಗೆ ಒಟ್ಟು 5 ಲಕ್ಷ ರೂಪಾಯಿ ವೆಚ್ಚವಾಗುತ್ತದೆ!ಶಿಕ್ಷಕರೇ ಹೇಳುವಂತೆ ಕಳೆದ 5-6 ವರ್ಷಗಳಿಂದ ನಡೆಯುತ್ತಿರುವ ಮಾಸಿಕ ಸಮಾಲೋಚನಾ ಸಭೆಗೆ ಹಾಜರಾಗುವ ಶಿಕ್ಷಕರಿಗೆ ನೀಡದೇ ಇರುವ ಹಣ ಎಷ್ಟಾಗುತ್ತದೆ ಎಂಬುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳೇ ತಿಳಿಸಬೇಕು.ಇನ್ನು, ಹೆಚ್ಚುವರಿಯಾಗಿ ಫ್ಲೆಕ್ಸ್ ಗಳನ್ನು ಮುದ್ರಿಸಿ ಇಲಾಖೆಗೆ 4.05 ಲಕ್ಷ ರೂಪಾಯಿಗಳನ್ನು ನಷ್ಟ ಉಂಟು ಮಾಡಲಾಗಿದೆ. ಈ ಹಣವನ್ನು ಇಲಾಖೆಗೆ ಮರುಪಾವತಿ ಮಾಡುವಂತೆ ಸರ್ವ ಶಿಕ್ಷಣ ಅಭಿಯಾದನ ಸಹ ನಿರ್ದೇಶಕಿ (ಆಡಳಿತ) ವೀಣಾ ಆರ್. ನಾಯಕ್ ಅವರು ಪದೇಪದೇ ಪತ್ರ ಬರೆಯುತ್ತಿದ್ದರೂ ಇಲ್ಲಿನ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.ಬ್ಲಾಕ್ ಅನುಷ್ಠಾನ ಸಮಿತಿ ಅನುಮೋದನೆ ಇಲ್ಲದೆಯೇ ಹೆಚ್ಚುವರಿ ಕೊಠಡಿ, ಆವರಣ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದ ಅನುದಾನವನ್ನು ಎಸ್‌ಡಿಎಂಸಿ ಖಾತೆಗಳಿಗೆ ಜಮಾ ಮಾಡಲಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ವಿತರಿಸಲಾದ ಬಾವುಟಗಳಿಗೆ ಸಂಬಂಧಿಸಿದ ಎಲ್ಲ ಹಣವನ್ನು ಇನ್ನೂ ಇಲಾಖೆಗೆ ಪಾವತಿಸಿಲ್ಲ. 2007-08ನೇ ಸಾಲಿನಿಂದಲೂ ಈ ಹಣ ಬಾಕಿ ಇದೆ.ಇಂತಹ ಆಡಳಿತಾತ್ಮಕ ಲೋಪಗಳ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇನ್ನಾದರೂ ಕ್ಷಣ ಹೊತ್ತು ಗಮನ ಹರಿಸಿ ಕ್ರಮ ಕೈಗೊಳ್ಳುವಿರಾ ಎಂಬುದು ಜಿಲ್ಲೆಯ ಶಿಕ್ಷಕರ- ಸಾರ್ವಜನಿಕರ ಮನವಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.