ಶಿಕ್ಷಣ ಇಲಾಖೆ: ತರಾತುರಿಯಲ್ಲಿ ಕ್ರೀಡಾಕೂಟ

7

ಶಿಕ್ಷಣ ಇಲಾಖೆ: ತರಾತುರಿಯಲ್ಲಿ ಕ್ರೀಡಾಕೂಟ

Published:
Updated:

ಗುಲ್ಬರ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವು ತರಾತುರಿಯಲ್ಲಿ ಆರಂಭಗೊಂಡಿದೆ.ನಗರದ ತಾಜ್‌ಸುಲ್ತಾನಪುರದ ಪೊಲೀಸ್ ವಸತಿ ಆವರಣದ ಮೈದಾನದಲ್ಲಿ ಶುಕ್ರವಾರ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಆರಂಭಗೊಂಡಿದೆ. ಪ್ರಾಥಮಿಕ ಮಕ್ಕಳ ಕ್ರೀಡಾಕೂಟವು ಶನಿವಾರ ನಡೆಯಲಿದೆ.  ಸೆ. 5ರಂದು ಚಿತ್ತಾಪುರದ ತಾಲ್ಲೂಕು ಕ್ರೀಡಾಕೂಟ ನಡೆದಿತ್ತು. ಮರುದಿನವೇ ಜಿಲ್ಲಾ ಮಟ್ಟದಲ್ಲಿ ಪಾಲ್ಗೊಳ್ಳಬೇಕಾದ ತುರ್ತು ವಿದ್ಯಾರ್ಥಿಗಳಿಗೆ ಎದುರಾಗಿತ್ತು.  `ಸಾಕಷ್ಟು ಸಿದ್ಧತೆ ಇಲ್ಲದೇ ಕ್ರೀಡಾಕೂಟ ನಡೆಸಲಾಗಿದೆ. ಕ್ರೀಡಾಕೂಟದ ಉದ್ಘಾಟನೆ ಮಾಹಿತಿಯೂ ಹಲವರಿಗೆ ತಲುಪಿರಲಿಲ್ಲ' ಎಂದು ಹಲವು ಶಿಕ್ಷಕರು ದೂರಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ. ಜಯರಾಮ, `'ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಲಭ್ಯವಿಲ್ಲದ ಕಾರಣ ತಾಜ್‌ಸುಲ್ತಾನಪುರ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಇದರಿಂದ ಸ್ವಲ್ಪ ತೊಂದರೆ ಆಗಿರಬಹುದು' ಎಂದರು.  ವಾರ್ಷಿಕ ಕ್ಯಾಲೆಂಡರ್‌ಗೆ ಅನುಗುಣವಾಗಿ ನಾವು ತಾಲ್ಲೂಕು ಮಟ್ಟದ ಕ್ರೀಡಾಕೂಟ ಮುಗಿಸಿದ್ದೇವೆ.ಆದರೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ತಂಡವನ್ನು ಕಳುಹಿಸಿಕೊಡುವ ಸಲುವಾಗಿ ಬಾಗಲಕೋಟೆಯಲ್ಲಿ ಅವಧಿಗೂ ಮೊದಲೇ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಸೆಪ್ಟೆಂಬರ್ 10ಕ್ಕೆ ವಿಭಾಗೀಯ ಮಟ್ಟದ ಕ್ರೀಡಾಕೂಟ ನಡೆಯಲಿದೆ.ಅಲ್ಲಿಗೆ ತಂಡ ಕಳುಹಿಸಬೇಕು ಎಂದು ತುರ್ತು ಕರೆ ಬಂದಿತ್ತು. ಮಕ್ಕಳು ಅವಕಾಶ ಕಳೆದುಕೊಳ್ಳುವುದು ಬೇಡ ಎಂಬ ನಿಟ್ಟಿನಲ್ಲಿ ನಾವು ತರಾತುರಿಯಲ್ಲಿ ಸಿದ್ಧತೆ ಮಾಡಿಕೊಂಡು ಕ್ರೀಡಾಕೂಟ ಆಯೋಜಿಸಿದ್ದೇವೆ. ಇದರಿಂದ ತೊಂದರೆ ಆಗಿರಬಹುದು. ಆದರೆ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಬಾರದು' ಎಂದು ಇಲಾಖೆಯ ಪ್ರಭಾರ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಜಿ. ಬಿರಾದಾರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry