ಭಾನುವಾರ, ಡಿಸೆಂಬರ್ 15, 2019
26 °C

ಶಿಕ್ಷಣ ಕ್ಷೇತ್ರದಲ್ಲಿ ಸೌಕರ್ಯ ಕೊರತೆ: ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಣ ಕ್ಷೇತ್ರದಲ್ಲಿ ಸೌಕರ್ಯ ಕೊರತೆ: ಸಚಿವ

ತುಮಕೂರು: ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮೂಲಸೌಕರ್ಯಗಳ ಕೊರತೆ ಇದ್ದು, ಹಂತಹಂತವಾಗಿ ಪರಿಹರಿಸಲು ಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಇಲ್ಲಿ ಗುರುವಾರ ಹೇಳಿದರು.ಎಂಪ್ರೆಸ್ ಬಾಲಕಿಯರ ಕಾಲೇಜು ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಒಮ್ಮೆಗೆ ಪರಿಹಾರ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆ ಜಾರಿ ಮಾಡಿದೆ ಎಂದರು.ಶಿಕ್ಷಣದಿಂದ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯ. ಶೈಕ್ಷಣಿಕವಾಗಿ ಮುಂದೆ ಬಂದಾಗ ಪರಿವರ್ತನೆ ನಿರೀಕ್ಷಿಸಬಹುದು. ಶೈಕ್ಷಣಿಕ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಆಮೂಲಾಗ್ರ ಬದಲಾವಣೆ ಅಗತ್ಯವಿದೆ. ಶಿಕ್ಷಕರು ಸಮಾಜವನ್ನು ಮನ್ನಡೆಸುವ ರೂವಾರಿಗಳು. ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು.ರಾಜ್ಯದಲ್ಲಿ ಶಾಲಾ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಕಾರಣ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಪ್ರತಿ ನಿತ್ಯ 55 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಯೋಜನೆ ಜಾರಿಯಿಂದ ರೈತರಿಗೂ ಉಪಯೋಗವಾಗಲಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಕಳೆದ 3 ವರ್ಷದಿಂದ ಬರದ ಸ್ಥಿತಿ ಇದೆ. ಮಳೆ ಇಲ್ಲದೆ ಬೆಳೆ ನಾಶವಾಗಿದೆ. ಮತ್ತೊಂದೆಡೆ ಎಲ್ಲ ಕ್ಷೇತ್ರದಲ್ಲಿಯೂ ಆರ್ಥಿಕ ಕುಸಿತ ಕಾಣುತ್ತಿದೆ. ಮಾನವ ಸಂಪನ್ಮೂಲ ಸಮರ್ಪಕ ಬಳಕೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿದರು.ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ಡಾ.ಎಸ್.ರಫಿಕ್‌ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್, ಶಿಕ್ಷಣ ತಜ್ಞ ಪ್ರೊ.ಎಂ.ಆರ್.ನಾಗರಾಜು, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಜಿ.ಪಂ. ಅಧ್ಯಕ್ಷೆ ಪ್ರೇಮಾ, ಸಿಇಒ ಗೋವಿಂದರಾಜು, ಡಿಡಿಪಿಯು ಜಯಪ್ರಕಾಶ್, ಡಿಡಿಪಿಐ ಮೋಹನ್‌ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಣ್ಣಮುದ್ದಯ್ಯ ಇದ್ದರು.`ವ್ಯಂಗ್ಯದ ಮಾತು ಬಿಡಿ'

`ಶಿರಾ ಕ್ಷೇತ್ರದ ಶಾಸಕನಾದ ಮಾತ್ರಕ್ಕೆ ಇತರ ತಾಲ್ಲೂಕುಗಳ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿಲ್ಲ. ಮಾಜಿ ಶಾಸಕ ಎಸ್.ಶಿವಣ್ಣ ಟೀಕೆ ಮಾಡುವುದಕ್ಕಾಗಿ ವ್ಯಂಗ್ಯ ಮಾಡುವುದನ್ನು ಬಿಡಬೇಕು' ಎಂದು ಸಚಿವ ಟಿ.ಬಿ.ಜಯಚಂದ್ರ ಟೀಕಿಸಿದರು.ನಗರ ಸೇರಿದಂತೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ಬದ್ಧ. ಶಿರಾಕ್ಕೆ ಸೀಮಿತವಾಗಿದ್ದೇನೆ ಎಂಬ ವಿರೋಧ ಪಕ್ಷಗಳ ಮುಖಂಡರ ಟೀಕೆಯನ್ನು ಒಪ್ಪುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಪ್ರತಿಕ್ರಿಯಿಸಿ (+)