ಶಿಕ್ಷಣ ಕ್ಷೇತ್ರದ ಕೇಸರೀಕರಣ ಪ್ರತಿಭಟಿಸಿ

7

ಶಿಕ್ಷಣ ಕ್ಷೇತ್ರದ ಕೇಸರೀಕರಣ ಪ್ರತಿಭಟಿಸಿ

Published:
Updated:

ದಾವಣಗೆರೆ: ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದ ಕೇಸರೀಕರಣ ಮಾಡುತ್ತಿದ್ದು, ಆ ಮೂಲಕ ಎಳೆಯ ಮನಸ್ಸುಗಳಲ್ಲಿ ಕೋಮುವಾದದ ವಿಷಬೀಜ ಬಿತ್ತುತ್ತಿದೆ. ಇದನ್ನು ಪ್ರತಿಯೊಬ್ಬರೂ ಪ್ರತಿಭಟಿಸಬೇಕು ಎಂದು ಸಾಹಿತಿ ಪ್ರೊ.ಡಿ.ಬಿ. ಬಡಿಗೇರ್ ಅಭಿಪ್ರಾಯಪಟ್ಟರು.ಎಸ್‌ಎಫ್‌ಐ, ಡಿವೈಎಫ್‌ಐ, ವಿದ್ಯಾರ್ಥಿ ಜನತಾದಳ, ಯುವ ಜನತಾದಳ, ಯುವ ಕಾಂಗ್ರೆಸ್, ಎನ್‌ಎಸ್‌ಯುಐ, ಎಐಎಸ್‌ಎಫ್, ಎಐವೈಎಫ್ ಸೇರಿದಂತೆ ಪ್ರಗತಿಪರ ವಿದ್ಯಾರ್ಥಿ-ಯುವಜನ ವೇದಿಕೆ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ, `ಶಿಕ್ಷಣದ ಕೇಸರೀಕರಣ, ವ್ಯಾಪಾರೀಕರಣ ವಿರೋಧಿಸಿ ಜಿಲ್ಲಾ ಶೈಕ್ಷಣಿಕ ಸಮಾವೇಶ~ ಉದ್ಘಾಟಿಸಿ ಅವರು ಮಾತನಾಡಿದರು.ಪಠ್ಯಪುಸ್ತಕಗಳ ರಚನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಚಿಸಲಾಗಿರುವ ಸಮಿತಿಗೆ ಸರ್ಕಾರ ಸಲಹಾ ಸಮಿತಿ ಮಾಡುವ ಮೂಲಕ ಹಿಂದೂ ಮೂಲಭೂತವಾದವನ್ನು ಹೇರಲು ಹೊರಟಿದೆ ಎಂದು ಅವರು ಆರೋಪಿಸಿದರು. ಆರ್‌ಎಸ್‌ಎಸ್ ವಿಚಾರಧಾರೆಯ ಪಾಷಾಣವನ್ನು ಮಕ್ಕಳ ಮನಸ್ಸಿನಲ್ಲಿ ಬೆರೆಸುವ ಕೆಲಸವಾಗುತ್ತಿದೆ. ಪಠ್ಯಪುಸ್ತಕಗಳಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಹೊಗಳುವ ಅಧ್ಯಾಯಗಳಿವೆ. ಕಮ್ಯುನಿಸ್ಟ್ ವಿರೋಧಿ ಚಿಂತನೆಗಳನ್ನು ತುಂಬಲಾಗುತ್ತಿದೆ ಎಂದು ಹರಿಹಾಯ್ದರು.ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿರುವ ರಾಜ್ಯ ಸರ್ಕಾರ ಶಿಕ್ಷಣದ ಕೇಸರೀಕರಣ, ಕೋಮುವಾದೀಕರಣ ಮಾಡಹೊರಟಿದೆ. ಮಕ್ಕಳ ಮನಸ್ಸು ಕೆಡದಂತೆ, ಇಡೀ ದೇಶದ ಆಶೋತ್ತರ ಬಿಂಬಿಸುವ ಕೆಲಸ ಪಠ್ಯಕ್ರಮದಲ್ಲಿ ಆಗಬೇಕು ಎಂದು ಅವರು ಸಲಹೆ ನೀಡಿದರು.ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ  ಅನಂತ ನಾಯ್ಕ ಮಾತನಾಡಿ, ರಾಜ್ಯ ಸರ್ಕಾರ  5 ಮತ್ತು 8ನೇ ತರಗತಿಗಳ ಪಠ್ಯಪುಸ್ತಕಗಳ ಕರಡು ಸಿದ್ಧಪಡಿಸಿಕೊಂಡಿದ್ದು, ಅವುಗಳಲ್ಲಿ ದೇಗುಲಗಳನ್ನು ವರ್ಣಿಸುವ ವಿಚಾರಗಳಿವೆ. ತಳ ಸಮುದಾಯಗಳನ್ನು ಕಡೆಗಣಿಸಲಾಗಿದೆ. ತಪ್ಪು ಮಾಹಿತಿಗಳನ್ನು ತುಂಬಲಾಗಿದೆ ಎಂದು ದೂರಿದರು.

ಈಗಲೂ ದಾವಣಗೆರೆ ಪ್ರಸಿದ್ಧ ಜವಳಿ ಕೇಂದ್ರ, ಮಲ್ಲಾಡಿಹಳ್ಳಿ ದಾವಣಗೆರೆ ಜಿಲ್ಲೆಯಲ್ಲಿದೆ ಎಂದು  ತಪ್ಪು ಮಾಹಿತಿ ನೀಡಲಾಗಿದೆ. ರಾಜ್ಯದ ಎಲ್ಲ  ಜಿಲ್ಲೆಗಳನ್ನು ಸಮಗ್ರವಾಗಿ ಪರಿಚಯಿಸದೇ ಅದರಲ್ಲೂ ವ್ಯತ್ಯಾಸ ಮಾಡಲಾಗಿದೆ. ವರ್ಣಾಶ್ರಮ ವ್ಯವಸ್ಥೆ ಗಟ್ಟಿಗೊಳಿಸುವ ಹುನ್ನಾರವಿದೆ ಎಂದು ಗುಡುಗಿದರು.ಆರ್ಥಿಕ ಭ್ರಷ್ಟಾಚಾರಕ್ಕಿಂತ ಬೌದ್ಧಿಕ ಭ್ರಷ್ಟಾಚಾರ ಇನ್ನೂ ಅಪಾಯಕಾರಿ ಎಂದು ಹೇಳಿದ ಅವರು, ಆ ರೀತಿಯ ಪ್ರಯತ್ನಗಳಿಗೆ ಅಂತ್ಯ ಹಾಡಬೇಕಿದೆ ಎಂದು ಪ್ರತಿಪಾದಿಸಿದರು.ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷ ಪ್ರೊ.ಎಸ್.ಎಚ್. ಪಟೇಲ್, ಕಾರ್ಯದರ್ಶಿ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಯುವ ಜೆಡಿಎಸ್ ಮುಖಂಡ ಬಾತಿ ಶಂಕರ್ ಭಾಗವಹಿಸಿದ್ದರು. ವಿದ್ಯಾರ್ಥಿ ಜನತಾದಳ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry