ಬುಧವಾರ, ಜೂನ್ 16, 2021
22 °C

ಶಿಕ್ಷಣ ಕ್ಷೇತ್ರದ ಮೌಲ್ಯ ಕುಸಿತ: ಜಿ.ವೆಂ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ~ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ವಿಷಾದಿಸಿದರು.ನಗರದಲ್ಲಿ ಇತ್ತೀಚೆಗೆ ನಡೆದ ಉದಯಭಾನು ಉನ್ನತ ಅಧ್ಯಯನ ಕೇಂದ್ರಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನೀಡಲಾದ ಒಂದು ಸಾವಿರ ಕನ್ನಡ ಪುಸ್ತಕಗಳ ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಇಂದಿನ ಶಿಕ್ಷಣ ಕ್ರಮದಲ್ಲಿಯೇ ಅನೇಕ ಲೋಪಗಳಿದ್ದು, ಅಧ್ಯಾಪಕರೂ ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದ ಆಕರ್ಷಣೆಯಿಂದಾಗಿ ಯುವ ಜನರು ಇಂದು ಅಧ್ಯಾಪನ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ಇದು ಶಿಕ್ಷಣ ಕ್ಷೇತ್ರದ ಆತಂಕಕಾರಿ ಬೆಳವಣಿಗೆ ಆಗಿದೆ~ ಎಂದು ಅವರು ಕಳವಳ ವ್ಯಕ್ತ ಪಡಿಸಿದರು.ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಮಾತನಾಡಿ, `ಭಾರತೀಯ ಭಾಷೆಗಳಲ್ಲಿಯೇ ಪ್ರೊ.ಜಿ.ವೆಂಕಟಸುಬ್ಬಯ್ಯ ಮಹತ್ವದ ನಿಘಂಟು ತಜ್ಞರು. ಅವರು ಕನ್ನಡಕ್ಕೆ ಜೀವ ಕೊಟ್ಟ ಜೀವಿ. ಉದಯಭಾನು ಕಲಾ ಸಂಘ ನನ್ನನ್ನೂ ಸೇರಿದಂತೆ ಹಲವು ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದೆ.ಇಲ್ಲಿರುವ ಅಧ್ಯಾಪಕರು ವಿಶ್ವವಿದ್ಯಾಲಯಗಳಲ್ಲಿನ ಅಧ್ಯಾಪಕರಿಗಿಂತಲೂ ಉತ್ತಮ ಜ್ಞಾನ ಸಂಪತ್ತನ್ನು ಹೊಂದಿದ್ದಾರೆ. ಇಂತಹ ಸಂಸ್ಥೆಗೆ ಪುಸ್ತಕಗಳನ್ನು ನೀಡುವ ಮೂಲಕ ಕನ್ನಡ ಪುಸ್ತಕ ಪ್ರಾಧಿಕಾರ ಹೆಮ್ಮೆಯ ಕೆಲಸ ಮಾಡಿದೆ~ ಎಂದರು.`ಕನ್ನಡ ಪುಸ್ತಕ ಪ್ರಾಧಿಕಾರದಿಂದ ರಾಜ್ಯದ ಗಡಿ ಭಾಗಗಳೂ ಸೇರಿದಂತೆ ಹೊರರಾಜ್ಯಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಉಚಿತವಾಗಿ ಕನ್ನಡ ಪುಸ್ತಕಗಳನ್ನು ನೀಡುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆಧುನಿಕ ನವೋದಯ ಸಾಹಿತ್ಯದ ಮಹತ್ವದ ಕೃತಿಗಳ ಪುನರ್ ಮುದ್ರಣ ಕಾರ್ಯವನ್ನೂ ಪ್ರಾಧಿಕಾರ ಹಮ್ಮಿಕೊಂಡಿದೆ~ ಎಂದರು.ಸಮಾರಂಭದಲ್ಲಿ ವಿವಿಧ ಪ್ರಕಾಶನಗಳ ಸುಮಾರು 50 ಸಾವಿರ ರೂಪಾಯಿಗಳ ಮೌಲ್ಯದ ಒಂದು ಸಾವಿರ ಕನ್ನಡ ಪುಸ್ತಕಗಳನ್ನು ಉದಯಭಾನು ಉನ್ನತ ಅಧ್ಯಯನ ಕೇಂದ್ರಕ್ಕೆ ನೀಡಲಾಯಿತು.  ಉದಯಭಾನು ಕಲಾ ಸಂಘದ ಅಧ್ಯಕ್ಷ ಬಿ.ಕೃಷ್ಣ, ಗೌರವ ಕಾರ್ಯದರ್ಶಿ ಎಂ.ನರಸಿಂಹ, ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಪ್ರೊ.ಎಚ್.ಆರ್.ರಾಮಕೃಷ್ಣರಾವ್ ಇತರರು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.