ಶಿಕ್ಷಣ ಕ್ಷೇತ್ರದ ಸುಧಾರಣೆ ಕ್ರಮಕ್ಕೆ ಅಸಮಾಧಾನ

ಶನಿವಾರ, ಜೂಲೈ 20, 2019
28 °C

ಶಿಕ್ಷಣ ಕ್ಷೇತ್ರದ ಸುಧಾರಣೆ ಕ್ರಮಕ್ಕೆ ಅಸಮಾಧಾನ

Published:
Updated:

ಬೆಂಗಳೂರು: ವಿವಿಧ ರಾಜ್ಯಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸದೆಯೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಮುಂದಾಗಿದೆ ಎಂದು ಸಂಸದ ಪ್ರಕಾಶ್ ಜಾವಡೇಕರ್ ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಶನಿವಾರ ಇಲ್ಲಿ ಆಯೋಜಿಸಿದ್ದ `ಉನ್ನತ ಶಿಕ್ಷಣದಲ್ಲಿ ಸುಧಾರಣೆ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ~ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, `ಶಿಕ್ಷಣದ ಹಕ್ಕು ಕಾಯ್ದೆಯ ಕುರಿತು ಮಾನವ ಸಂಪನ್ಮೂಲ ಸಚಿವಾಲಯ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಿಲ್ಲ. ಈ ಕಾರಣದಿಂದಲೇ ಉದ್ದೇಶಿತ ಬದಲಾವಣೆಗಳನ್ನು ತರಲು ಈ ಕಾಯ್ದೆಗೆ ಸಾಧ್ಯವಾಗಿಲ್ಲ~ ಎಂದು ವಿಶ್ಲೇಷಿಸಿದರು.ದೇಶದ ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಖಾಸಗಿ ರಂಗ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರ ಪೂರ್ವಭಾವಿ ಚರ್ಚೆ ನಡೆಸದ ಕಾರಣ ಉನ್ನತ ಶಿಕ್ಷಣದಲ್ಲಿ ಉದ್ದೇಶಿತ ಬದಲಾವಣೆಗಳನ್ನು ತರಲು ಸಾಧ್ಯವಾಗಿಲ್ಲ ಎಂದು ಹೇಳಿದರು.ಶಿಕ್ಷಣ ಸಂಸ್ಥೆಗಳ ನ್ಯಾಯಯುತವಲ್ಲದ ಚಟುವಟಿಕೆಗಳನ್ನು ನಿಯಂತ್ರಿಸಲು ಮಸೂದೆಯೊಂದು ಸಿದ್ಧವಾಗಿದೆ. ಆದರೆ ಈ ಮಸೂದೆ ಅಲ್ಪಸಂಖ್ಯಾತರಿಗೆ ಸೇರಿದ ಶಿಕ್ಷಣ ಸಂಸ್ಥೆಗಳನ್ನು ಒಳಗೊಳ್ಳುವುದಿಲ್ಲ. ಖಾಸಗಿ ಸಂಸ್ಥೆಗಳು ಅತಿಯಾದ ಶುಲ್ಕ ವಿಧಿಸುವುದು ಈ ಮಸೂದೆಯ ವ್ಯಾಪ್ತಿಯಲ್ಲಿಲ್ಲ.

 

ಮಾನವ ಸಂಪನ್ಮೂಲ ಇಲಾಖೆಯ ಸ್ಥಾಯಿ ಸಮಿತಿಯ ಎಲ್ಲ ಸದಸ್ಯರು ಇದನ್ನು ವಿರೋಧಿಸಿದ್ದಾರೆ ಎಂದು ತಿಳಿಸಿದರು.ಶಿಕ್ಷಣ ಸಂಸ್ಥೆಗಳ ಮಾನ್ಯತೆ ಕಡ್ಡಾಯ ಮಾಡುವ ಮಸೂದೆಯಲ್ಲೂ ಸಮಸ್ಯೆಗಳಿವೆ.

 

ಈ ಮಸೂದೆಯ ಪ್ರಕಾರ ಶಿಕ್ಷಣ ಸಂಸ್ಥೆಗಳು ಲಾಭದ ಉದ್ದೇಶವಿಲ್ಲದ ಖಾಸಗಿ ಸಂಸ್ಥೆಗಳಿಂದಲೂ ಮಾನ್ಯತೆ ಪಡೆಯಬಹುದು. ಆದರೆ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ವಿಚಾರದಲ್ಲಿ ಖಾಸಗಿ ಸಂಸ್ಥೆಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹ. ಇದರ ಬದಲು ಸರ್ಕಾರಿ ಸಂಸ್ಥೆಗಳನ್ನೇ ಇನ್ನಷ್ಟು ಬಲಪಡಿಸಬಹುದು ಎಂದು ಸಲಹೆ ಮಾಡಿದರು.`ಕಪಿಲ್ ಸಿಬಲ್ ಅವರು ಮಾನವ ಸಂಪನ್ಮೂಲ ಸಚಿವರಾಗಿ ಆರಂಭದಲ್ಲಿ ಮಾಡಿದ ಕೆಲಸ ನನಗೆ ಮೆಚ್ಚುಗೆಯಾಗಿತ್ತು. ಆದರೆ ಅವರ ಕೆಲಸಗಳು ಸರ್ವರನ್ನೂ ಒಳಗೊಳ್ಳುತ್ತಿಲ್ಲ ಎಂಬುದು ನಂತರ ತಿಳಿಯಿತು~ ಎಂದರು.ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಮಾತನಾಡಿ, ವಿಶ್ವವಿದ್ಯಾಲಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಷ್ಟು ಅನುದಾನ ನೀಡಬೇಕು ಎಂಬ ಬಗ್ಗೆ ಸೂಕ್ತ ಮಾದರಿಯೇ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಐದು ವರ್ಷಗಳ ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ 4 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿತ್ತು, ಈಗ ಅದು 12 ಸಾವಿರ ಕೋಟಿ ರೂಪಾಯಿಗಳಿಗೆ ಏರಿದೆ. ಶಿಕ್ಷಣ ರಂಗದಲ್ಲೂ ಖಾಸಗಿ ಮತ್ತು ಸರ್ಕಾರಿ ಪಾಲುದಾರಿಕೆ ಅಗತ್ಯ ಎಂದರು.ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡುವ ಅಗತ್ಯವಿಲ್ಲ, ಅವರಿಗೆ ಮೌಲ್ಯಗಳ ಕುರಿತು ಪಾಠ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.ರಾಜ್ಯಸಭಾ ಸದಸ್ಯ ನ್ಯಾ.ಎಂ. ರಾಮಾ ಜೋಯಿಸ್, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರಿ ನಿರ್ದೇಶಕ ಪ್ರೊ.ಕೆ.ಎಂ. ಕಾವೇರಿಯಪ್ಪ, ಉಪಾಧ್ಯಕ್ಷ ಡಾ.ಎಸ್.ಸಿ. ಶರ್ಮಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry