ಶಿಕ್ಷಣ ಕ್ಷೇತ್ರ ಬಲಿಷ್ಠವಾದರೆ ಸಮಸ್ಯೆ ಪರಿಹಾರ
ಪುತ್ತೂರು: ಶಿಕ್ಷಣ ಕ್ಷೇತ್ರ ಬಲಿಷ್ಠವಾದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಂದು ರಕ್ಷಣಾ ಕ್ಷೇತ್ರಕ್ಕೆ ನೀಡುವಷ್ಟು ಆದ್ಯತೆಯನ್ನು ಶಿಕ್ಷಣ ಕ್ಷೇತ್ರಕ್ಕೂ ನೀಡಬೇಕಾದ ಅಗತ್ಯವಿದೆ ಎಂದು ಮೂಡುಬಿದಿರೆಯ ದಿಗಂಬರ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಪುತ್ತೂರಿನ ವಿವೇಕಾನಂದ ತಾಂತ್ರಿಕ ವಿದ್ಯಾಲಯದಲ್ಲಿ ಗುರುವಾರ ನಡೆದ ರಜತ ಮಹೋತ್ಸವ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು. ರಾಜಕೀಯದಲ್ಲಿ ಸ್ವಚ್ಚತೆ ಮತ್ತು ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಇದ್ದರೆ ಮಾತ್ರ ಭಾರತ ದೇಶ ವಿಶ್ವದಲ್ಲಿ ಅಗ್ರಸ್ಥಾನಕ್ಕೇರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿ ಎಲ್ಲಾ ಕ್ಷೇತ್ರಗಳಲ್ಲೂ ಇಂದು ತರಬೇತಿ ವ್ಯವಸ್ಥೆಯಿದೆ. ಆದರೆ ರಾಜಕೀಯ ಕ್ಷೇತ್ರದವರಿಗೆ ತರಬೇತಿ ನೀಡುವ ವ್ಯವಸ್ಥೆಯಿಲ್ಲ. ಇಂದು ರಾಜಕೀಯ ಕ್ಷೇತ್ರ ಎಂದರೆ ಎಲ್ಲರೂ ದೂರ ಸರಿಯುವಂತಹ ವಾತಾವರಣ ನಿರ್ಮಾಣವಾಗಿದ್ದು, ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳಿಗೂ ಸಚ್ಛಾರಿತ್ರ್ಯದ ರಾಜಕಾರಣದ ಬಗ್ಗೆ ಹಾಗೂ ದೇಶದ ಚಿಂತನೆಯ ಕುರಿತು ತರಬೇತಿ ನೀಡಲು ವಿದ್ಯಾಸಂಸ್ಥೆಗಳು ಮುಂದೆ ಬರಬೇಕು ಎಂದರು.
ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ವಿ.ಧನಂಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ನಮ್ಮ ದೇಶ ಇನ್ನಷ್ಟೂ ಪ್ರಗತಿ ಕಾಣಲು ಸಾಧ್ಯ ಎಂದು ಅವರು ಹೇಳಿದರು.
ಶ್ರದ್ಧಾಂಜಲಿ: ರಜತ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಬೇಕಾಗಿದ್ದ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ಅಗಲಿದ ಹಿನ್ನಲೆಯಲ್ಲಿ ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆಚಾರ್ಯರದ್ದು ಸರಳ, ಸಜ್ಜನಿಕೆಯ ವಿರಳ ವ್ಯಕ್ತಿತ್ವ. ಅವರು ಶ್ರೇಷ್ಠ ಚಿಂತನೆ , ಸಂಸ್ಕಾರದ ಆದರ್ಶ ರಾಜಕಾರಣಿ ಎಂದು ಅತಿಥಿಗಳು ಸ್ಮರಿಸಿದರು.
ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಕೆ.ರಾಮ ಭಟ್, ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ, ಪ್ರಾಂಶುಪಾಲ ಗೋಪಿನಾಥ ಶೆಟ್ಟಿ, ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರಮುಖರಾದ ಎ.ವಿ.ನಾರಾಯಣ, ಮುರಳೀಧರ್ ಭಟ್ , ಶಿವಪ್ರಸಾದ್, ಗುಣಪಾಲ್ ಜೈನ್, ಹರಿಕೃಷ್ಣ, ಕೃಷ್ಣ ನಾಯ್ಕ ಅಗರ್ತಬೈಲು, ಗಿರೀಶ್, ಮಹಾದೇವ ಶಾಸ್ತ್ರಿ, ತಾರಾನಾಥ್, ಸಂತೋಷ್ ಕುಮಾರ್, ಸೌಮ್ಯಶ್ರೀ, ಹರೀಶ್ ಭಟ್, ಸುಧಾ ರಾವ್, ಉಷಾ ಮತ್ತಿತರರು ಇದ್ದರು.
ಬರಹ ಇಷ್ಟವಾಯಿತೆ?
0
0
0
0
0