ಶುಕ್ರವಾರ, ಜೂನ್ 25, 2021
24 °C

ಶಿಕ್ಷಣ ವ್ಯವಸ್ಥೆ ಪುನಃರಚನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಶಿಕ್ಷಣ ವ್ಯವಸ್ಥೆ ಪುನಃರಚನೆಯಾಗದೆ ಸಾಮಾಜಿಕ ನ್ಯಾಯ ಅಸಾಧ್ಯ ಎಂದು  ಶಿಕ್ಷಣ ತಜ್ಞ ಎಚ್.ಎಸ್. ನಿರಂಜನಾರಾಧ್ಯ ಪ್ರತಿಪಾದಿಸಿದರು.ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಗುರುವಾರ ಗ್ರಾಮ ವಿಕಾಸ ಸಂಸ್ಥೆಯು ಏರ್ಪಡಿಸಿದ್ದ ಎಸ್‌ಡಿಎಂಸಿ ಸದಸ್ಯರ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯವಾದ ಸಮಾನತೆ, ತಾರತಮ್ಯ ರಹಿತ ಧೋರಣೆ ಮತ್ತು ಸಾಮಾಜಿಕ ನ್ಯಾಯವನ್ನು ಸ್ಥಾಪಿಸದೆ ಶಿಕ್ಷಣದಲ್ಲಿ ಬದಲಾವಣೆ ತರುವುದು ಸಾಧ್ಯವಿಲ್ಲ ಎಂದರು.ಇತ್ತೀಚೆಗಷ್ಟೆ ಶಾಲಾ ಜೋಡಣೆ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ. ವಿಪರ್ಯಾಸವೆಂದರೆ ಆ ಸಮಿತಿಯಲ್ಲಿ ಶಿಕ್ಷಣ ಕ್ಷೇತ್ರದ ಮೂಲ ವಾರಸುದಾರರಾದ ಪೋಷಕರು, ಶಿಕ್ಷಕರು, ಮಕ್ಕಳು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೇ ಅವಕಾಶ ಇಲ್ಲ. ಕೇವಲ ನಿವೃತ್ತ ಅಧಿಕಾರಿಗಳನ್ನು ಮಾತ್ರ ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಸನ್ನಿವೇಶ ಹೀಗಿರುವಾಗ ಬದಲಾವಣೆ ಹೇಗೆ ಸಾಧ್ಯ ಎಂದರು.ಸರ್ಕಾರಿ ಶಾಲೆಗಳಿಗೆ ಸೇರಿದರೆ ಗುಣಮಟ್ಟ ಶಿಕ್ಷಣ ದೊರಕುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಹಾಗಿದ್ದರೂ ಶಿಕ್ಷಕರು, ಇಲಾಖೆ ಅಧಿಕಾರಿಗಳು ಇತರರಿಗೆ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಹೇಳುತ್ತಾರೆ ಎಂದು ಆಕ್ಷೇಪಿಸಿದರು.ಸರ್ವಶಿಕ್ಷಣ ಅಭಿಯಾನ ಇನ್ನೂ ತನ್ನ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಅಭಿಯಾನದ ಶೇ 40ರಷ್ಟು ಹಣ ಖನಿಜಯುಕ್ತ ನೀರು ಮತ್ತು ದೂರವಾಣಿಗೆ ಖರ್ಚಾಗಿದೆ ಎಂಬ ವರದಿಯೂ ಇದೆ. ಸಮ ಸಮಾಜಕ್ಕಾಗಿ ಸಮಾನ ಶಿಕ್ಷಣ ನೀತಿ ಜಾರಿಗೆ ಬರಬೇಕು ಎಂದರು.ಸಮಾವೇಶವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಮನೋಜ್‌ಕುಮಾರ್‌ಮೀನಾ, ನಮ್ಮೂರ ಶಾಲೆ ಎಂಬುದು ಕೇವಲ ಫಲಕಗಳಲ್ಲಿದೆ. ಆ ಭಾವನೆ ಪೋಷಕರಲ್ಲಿ ಮೂಡಿಸಲು ಎಸ್‌ಡಿಎಂಸಿ ಸದಸ್ಯರು ಶ್ರಮಿಸಬೇಕು ಎಂದರು.ಶಿಕ್ಷಣಾಧಿಕಾರಿ ಸುಬ್ರಹ್ಮಣ್ಯ, ಶೇ 5ರಷ್ಟು ಎಸ್‌ಡಿಎಂಸಿಗಳು ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದರು. ಗ್ರಾಮೀಣ ಮಹಿಳಾ ಒಕ್ಕೂಟದ ಜಯಲಕ್ಷ್ಮಿ ಮಾತನಾಡಿದರು.  ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಮುಖ ಎಂವಿಎನ್ ರಾವ್, ಎಸ್‌ಡಿಎಂಸಿ ರಾಜ್ಯ ಒಕ್ಕೂಟದ ಖಜಾಂಚಿ ಖಲೀಲ್, ಲಕ್ಷ್ಮಿ,ದೇವಿ ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.