ಶಿಕ್ಷಣ ಶಿಕ್ಷೆ ಅನಿವಾರ್ಯವೇ?

7

ಶಿಕ್ಷಣ ಶಿಕ್ಷೆ ಅನಿವಾರ್ಯವೇ?

Published:
Updated:

ಮ ಕ್ಕಳಿಗೆ ಕಲಿಸಲು ಶಿಕ್ಷೆ ಅನಿವಾರ್ಯವೇ ಎಂಬ  ಪ್ರಶ್ನೆ, ಪ್ರತಿ ಬಾರಿ ಶಿಕ್ಷೆ ಪಡೆದ ದೇಶದ ಯಾವುದೋ ಮೂಲೆಯ ಮಗು ತೊಂದರೆಗೀಡಾದಾಗ ನಮ್ಮಲ್ಲಿ ಉದ್ಭವಿಸುತ್ತದೆ. ಮನದಲ್ಲಿ ಏನೋ ಒಂದು ಬಗೆಯ ನೋವು ಕೆಲವು ದಿನ ಎಲ್ಲರಲ್ಲೂ ಮನೆ ಮಾಡುತ್ತದೆ. ಆದರೆ ಆ ಘಟನೆ ಮಾಸಿದ ನಂತರ ಮತ್ತೆ ನೆನಪಾಗುವುದು ಮತ್ತೊಂದು ಅಂತಹ ಘಟನೆ ಸಂಭವಿಸಿದಾಗಲೇ.

ಈಚೆಗೆ ಬಿಜಾಪುರ ಜಿಲ್ಲೆಯ ಶಾಲೆಯೊಂದರ ಬಾಲಕ ಶಿಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗ ಹಾಗೂ ಇನ್ಯಾವುದೋ ಇಂತಹ ಘಟನೆ ನಡೆದಾಗ ಶಾಲೆಯ ಶಿಕ್ಷಕರು/ ಆಡಳಿತ ವರ್ಗ ಹಾಗೂ ಕುಟುಂಬದವರು ಪರಸ್ಪರ ದೂಷಿಸಿಕೊಳ್ಳುತ್ತಾರೆ. ಹಾಗಾದರೆ ನಿಜವಾಗಲೂ ತಪ್ಪು ಯಾರದು ಎಂಬ ಪ್ರಶ್ನೆ ಎದುರಾಗುತ್ತದೆ.`ಬೈಯದೆ, ಹೊಡೆಯದೆ ಮಕ್ಕಳಲ್ಲಿ ಶಿಸ್ತು ತರಲು ಅಥವಾ ಕಲಿಸಲು ಸಾಧ್ಯವೇ ಇಲ್ಲ. ನಮ್ಮ ಶಾಲೆಯಲ್ಲಿ ದಂಡನೆ ನೀಡುವ ಶಿಕ್ಷಕರ ತರಗತಿಗಳಲ್ಲಿ ಉತ್ತಮ ಶಿಸ್ತು ಇರುತ್ತದೆ, ಇತರ ಶಿಕ್ಷಕರ ತರಗತಿಗಳಲ್ಲಿ ಅಸಾಧ್ಯ ಗಲಾಟೆ ಇರುತ್ತದೆ.' ಹೀಗೆಂದು ಕೆಲವು ಶಾಲೆಗಳ ಶಿಕ್ಷಕರು ಶಿಸ್ತು ಅನಿವಾರ್ಯ ಎಂದು ಸಮರ್ಥಿಸಿಕೊಳ್ಳುತ್ತಾರೆ. `ನನ್ನ ಮಗನ ಶಾಲೆಯ ಶಿಕ್ಷಕರು ಹೊಡೆಯದೇ ಇರುವುದರಿಂದ ಅವನು ಸರಿಯಾಗಿ ಕಲಿಯುತ್ತಿಲ್ಲ.

ಅನೇಕ ಬಾರಿ ಚೆನ್ನಾಗಿ ಹೊಡೆದು ಕಲಿಸಿ ಎಂದರೂ ಶಿಕ್ಷಕಿ ನನ್ನ ಮಾತು ಕೇಳುತ್ತಿಲ್ಲ' ಎಂದು ಪೋಷಕರೊಬ್ಬರು ಅಳಲು ತೋಡಿಕೊಳ್ಳುತ್ತಾರೆ. ಈ ರೀತಿ `ಶಿಕ್ಷೆಯು ಅನಿವಾರ್ಯ, ಶಿಕ್ಷೆ ಇಲ್ಲದೇ ಶಿಸ್ತು, ಕಲಿಕೆ ಅಸಾಧ್ಯ' ಎಂಬ ಮನೋಭಾವ ಹೆಚ್ಚಿನ ಪೋಷಕರು ಮತ್ತು ಶಿಕ್ಷಕರಲ್ಲಿ ಮನೆ ಮಾಡಿರುತ್ತದೆ. ಶಿಕ್ಷೆ ಇಲ್ಲದೆ ಶಿಸ್ತು ತರಲು, ಶಿಕ್ಷಣ ನೀಡಲು ಇರುವ ಪರ್ಯಾಯ ಮಾರ್ಗಗಳ ಬಗ್ಗೆ ಹೆಚ್ಚಿನ ಶಿಕ್ಷಕರು ಮತ್ತು ಪೋಷಕರಿಗೆ ತಿಳಿವಳಿಕೆ ಇಲ್ಲ.ಅಷ್ಟಕ್ಕೂ ಅನೇಕರು ಭಾವಿಸುವ ಶಿಸ್ತಾದರೂ ಯಾವುದು? ತರಗತಿಗಳಲ್ಲಿ ಮಕ್ಕಳು ಒಂದು ಚೂರೂ ಗಲಾಟೆ ಇಲ್ಲದೆ ಗಂಭೀರವಾಗಿ ಗೊಂಬೆಗಳಂತೆ ಕುಳಿತು ಪಾಠ ಕೇಳಿಸಿಕೊಳ್ಳಬೇಕು ಹಾಗೂ ಪ್ರಶ್ನೆ ಕೇಳಿದಾಕ್ಷಣ ಉತ್ತರ ನೀಡಬೇಕು ಎಂಬುದೇ. ನಿಜಕ್ಕೂ ಯೋಚಿಸಿ, ದೊಡ್ಡವರೇ ಆಗಲಿ ಯಾವುದೇ ಚಟುವಟಿಕೆ ಇಲ್ಲದೆ ಗಂಭೀರವಾಗಿ ಬಹಳ ಹೊತ್ತು ಸುಮ್ಮನೆ ಇರಲು ಸಾಧ್ಯವೇ? ಅದರಲ್ಲೂ ಸದಾ ಚೈತನ್ಯದ ಚಿಲುಮೆಗಳಾದ ಮಕ್ಕಳು ಗಂಟೆಗಟ್ಟಲೆ ಮಾತನಾಡದೇ ಇರಬೇಕೆಂದು ಅಪೇಕ್ಷಿಸುವುದು ಎಷ್ಟು ಸರಿ?

ಮನೋವಿಜ್ಞಾನಿಗಳ ಪ್ರಕಾರ ಮಕ್ಕಳು ಚಟುವಟಿಕೆಯೇ ಇಲ್ಲದೆ ತಣ್ಣಗೆ ಇರುವ ತರಗತಿಗಳಲ್ಲಿ ಹೆಚ್ಚು ಕಲಿಕೆ ಸಾಧ್ಯವಾಗುವುದಿಲ್ಲ. ತರಗತಿಗಳು ಹೆಚ್ಚು ಸಹಜ ಸಂವಹನ ಹಾಗೂ ಅಂತರ್‌ಕ್ರಿಯೆಗೆ ಅವಕಾಶ ಮಾಡಿಕೊಡುವಂತೆ ಇರಬೇಕು. ನೀರಸವಾದ ತರಗತಿ ವಾತಾವರಣವು ಮಕ್ಕಳಿಗೆ ರುಚಿಸುವುದಿಲ್ಲ ಹಾಗೂ ಅಲ್ಲಿ ಸಂತಸದಾಯಕ ಕಲಿಕೆ ಮತ್ತು ಶಿಸ್ತು ಇರಲು ಸಾಧ್ಯವಿಲ್ಲ.

ಪ್ರತಿ ಮಗುವೂ ಭಿನ್ನವಾಗಿದ್ದು, ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಬೇರೆ ಬೇರೆ ಸಾಮಾಜಿಕ, ಆರ್ಥಿಕ ಹಾಗೂ ಕೌಟಂಬಿಕ ಹಿನ್ನೆಲೆಯಿಂದ ಬರುವ ಮಕ್ಕಳಲ್ಲಿ ಭಿನ್ನತೆ ಸಹಜವಾಗಿಯೇ ಇರುತ್ತದೆ. ಮಗುವಿನ ಪ್ರತಿ ವರ್ತನೆಯ ಹಿಂದೆ ಯಾವುದಾದರೂ ಒಂದು ಕಾರಣ ಇರುತ್ತದೆ. ಮಕ್ಕಳ ವರ್ತನೆ ಹಾಗೂ ಮನಸ್ಸನ್ನು ವಿಶ್ಲೇಷಿಸುವ ಮನೋವಿಜ್ಞಾನದ ಜ್ಞಾನ ಶಿಕ್ಷಕರಿಗೆ ಅಗತ್ಯವಾಗಿ ಇರಬೇಕಾಗುತ್ತದೆ. ಶಿಕ್ಷಕರ ಮನದಾಳದಲ್ಲಿ ಬೇರು ಬಿಟ್ಟಿರುವ `ಶಿಕ್ಷೆಯಿಂದಲೇ ಶಿಸ್ತು ಮತ್ತು ಶಿಕ್ಷಣ ಸಾಧ್ಯ' ಎಂಬ ನಂಬಿಕೆಯ ಬುಡವನ್ನು ಅಲುಗಾಡಿಸುವುದು ಕಷ್ಟವಾದರೂ ಸಾಧ್ಯವಿದೆ.ಮಕ್ಕಳ ಅಶಿಸ್ತಿಗೆ ಅಥವಾ ಕಲಿಕೆಯಲ್ಲಿನ ಹಿಂದುಳಿಯುವಿಕೆಗೆ ಅನೇಕ ಕಾರಣಗಳಿರಬಹುದು. ಮಕ್ಕಳಿಗೆ ಸಮಯ ನೀಡದ ಪೋಷಕರು ಅವನ/ಳ ಬೇಕು- ಬೇಡಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಾರೆ. ಅವರಿಗೆ ಮನೆಯಲ್ಲಿ ಸಿಗಬೇಕಾದಷ್ಟು ಪ್ರೀತಿ, ಗಮನ ದೊರೆಯದೇ ಇದ್ದಾಗ ಅವರ ವರ್ತನೆಯಲ್ಲಿ ವ್ಯತ್ಯಾಸವಾಗುತ್ತದೆ.

ಮಕ್ಕಳ ತೀವ್ರ ಅಶಿಸ್ತಿಗೆ ಕೆಲವೊಮ್ಮೆ ಮಾನಸಿಕ ಸಮಸ್ಯೆಗಳು ಕಾರಣ ಇರಬಹುದು. ಕೆಲವು ಮಕ್ಕಳ ವಿಪರೀತದ ವರ್ತನೆಗೆ ಹಾಗೂ ಗಮನ ಕೇಂದ್ರೀಕರಿಸಲು ಸಾಧ್ಯವಾಗದೇ ಇರುವುದಕ್ಕೆ ಅವರಿಗೆ ಅಠಿಠಿಛ್ಞಿಠಿಜಿಟ್ಞ ಈಛ್ಛಿಜ್ಚಿಜಿಛ್ಞಿಠಿ ಏಛ್ಟಿಚ್ಚಠಿಜಿಛಿ ಈಜಿಟ್ಟಛ್ಟಿ(ಅಈಏಈ)ಎಂಬ ಸಮಸ್ಯೆ ಕಾರಣ ಇರಬಹುದು. ಕುಟುಂಬದಲ್ಲಿನ ಬಡತನ, ಅಶಾಂತಿ, ಕ್ಷೋಭೆ, ಖಿನ್ನತೆಗಳು ಮಕ್ಕಳ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಈ ಕಾರಣಗಳಿಂದ ಮಕ್ಕಳು ತುಂಬಾ ಸೂಕ್ಷ್ಮ ಮನಃಸ್ಥಿತಿಯವರಾಗುತ್ತಾರೆ.

ಆಧುನಿಕ ಜೀವನದಲ್ಲಿ ಮಕ್ಕಳನ್ನು ಗಮನಿಸಲು, ಅವರಿಗೆ ಸಮಯ ನೀಡಲು ಯಾರಿಗೂ ವೇಳೆ ಇಲ್ಲ. ಇದರ ಜೊತೆಗೆ ಕೆಲವು ಪೋಷಕರು ಅತಿ ಎನಿಸುವಷ್ಟು ಪ್ರೀತಿ ತೋರಿ, ಕೇಳಿದ್ದನ್ನೆಲ್ಲಾ ಕೊಡಿಸಿ, ಮಕ್ಕಳು ಯಾರ ಮಾತನ್ನೂ ಕೇಳದ ಸ್ಥಿತಿ ತಲುಪುವಂತೆ ಮಾಡಿರುತ್ತಾರೆ. ಇಂತಹ ಮಕ್ಕಳು ಶಾಲೆಗಳಲ್ಲಿ ಸಮಸ್ಯಾತ್ಮಕ ವರ್ತನೆ ತೋರುತ್ತಾರೆ. ಇವರು ದಾರಿ ತಪ್ಪಿದ ಮಕ್ಕಳಾಗಿ ಸಮಾಜಕ್ಕೆ ಕಂಟಕಪ್ರಾಯರಾಗುತ್ತಾರೆ.ಅನೇಕ ಕುಟುಂಬಗಳಲ್ಲಿ ಮಕ್ಕಳನ್ನು ಒತ್ತಾಯ ಮಾಡಿ, ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಲಾಗುತ್ತದೆ. ಅವರಿಗೆ ಹೋಮ್‌ವರ್ಕ್ ಮಾಡಿಸಲು ಅಥವಾ ಇತರ ರೀತಿಯಲ್ಲಿ ಸಹಕರಿಸಲು ಪೋಷಕರಿಗೆ ಸಮಯ ಇರುವುದಿಲ್ಲ ಅಥವಾ ಸ್ವತಃ ಅವರಿಗೇ ಇಂಗ್ಲಿಷ್ ಜ್ಞಾನ ಇರುವುದಿಲ್ಲ. ಇದರಿಂದ ಕಲಿಯುವಂತೆ ಮಕ್ಕಳ ಮೇಲೆ ತೀವ್ರ ಒತ್ತಡ ಹೇರಿದಾಗಲೂ ಅವರಲ್ಲಿ ಭಯ, ಅಭದ್ರತೆ ಮನೆ ಮಾಡುತ್ತದೆ.

ಶಾಲೆ ಮತ್ತು ಕುಟುಂಬ ಎರಡು ಕಡೆಯೂ ಒತ್ತಡ ಉಂಟಾದಾಗ ಮಕ್ಕಳು ತೀವ್ರ ದುಃಖ, ಹತಾಶೆ, ಖಿನ್ನತೆಗೆ ಈಡಾಗುತ್ತಾರೆ. ಆ ಸಮಯದಲ್ಲಿ ಅವರಿಗೆ ಪ್ರೀತಿ, ಆತ್ಮೀಯತೆ ಹಾಗೂ ಭದ್ರತೆಯ ಭಾವ ನೀಡದೇ ಹೋದಾಗ ಅವರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕಬಹುದು.ಮೊದಲು ಮಾನವನಾಗು

ಮಕ್ಕಳು ದೇಶದ ಆಸ್ತಿ. ಅವರನ್ನು ಪ್ರೀತಿಯಿಂದ ನೋಡಿಕೊಂಡು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆ ಸಮಾಜದ ಎಲ್ಲರದ್ದು. `ಶಿಕ್ಷೆ ರಹಿತ ಸಂತಸದಾಯಕ ಶಿಕ್ಷಣ' ನೀಡುವ ಧ್ಯೇಯದೊಂದಿಗೆ ಶಾಲೆಗಳು ಮತ್ತು ಕುಟುಂಬಗಳು ಕಾರ್ಯ ನಿರ್ವಹಿಸಬೇಕು. ಮಕ್ಕಳನ್ನು ಕ್ರೂರವಾಗಿ ನಡೆಸಿಕೊಳ್ಳದೆ `ಮೊದಲು ಮಾನವೀಯತೆ, ನಂತರ ಶಿಸ್ತು, ಕಲಿಕೆ' ಎಂಬ ಮಂತ್ರವನ್ನು ನೆನಪಿನಲ್ಲಿ ಇಡಬೇಕು. ಈ ನಿಟ್ಟಿನಲ್ಲಿ ಕೆಲವು ಮಾರ್ಗೋಪಾಯಗಳು ಇಲ್ಲಿವೆ:`ಶಿಕ್ಷೆಯಿಂದ ಶಿಕ್ಷಣ, ಸದ್ವರ್ತನೆ' ಎಂಬ ಶಿಕ್ಷಕರ ಮನಃಸ್ಥಿತಿಯನ್ನು ಬದಲಾಯಿಸಲು ತರಬೇತಿ ನೀಡಬೇಕು. ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ಹಿನ್ನೆಲೆಯಲ್ಲಿ ಮಕ್ಕಳ ವರ್ತನೆಯನ್ನು ವಿಶ್ಲೇಷಿಸಿ ಕಾರಣ ಕಂಡುಹಿಡಿಯುವ ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಜ್ಞಾನ, ಕೌಶಲಗಳ ಮಾಹಿತಿ ಈ ತರಬೇತಿಯಲ್ಲಿ ಇರಬೇಕು.ಮಕ್ಕಳಿಗೆ ಸಮಯ ನೀಡಿ, ಅವರನ್ನು ಸರಿದಾರಿಯಲ್ಲಿ ಬೆಳೆಸಲು ತರಬೇತಿ ಹೊಂದಿದ ಶಿಕ್ಷಕರಿಂದ ಪೋಷಕರಿಗೆ ಮಾಹಿತಿ ನೀಡಬೇಕು.ಶಿಕ್ಷಕರು ಮತ್ತು ಪೋಷಕರ ಸಭೆ ನಡೆಸಿ ಚರ್ಚಿಸಬೇಕು. ಮಕ್ಕಳಲ್ಲಿ ಸಮಸ್ಯಾತ್ಮಕ ವರ್ತನೆ ಇದ್ದರೆ ಪರಸ್ಪರ ಮಾಹಿತಿ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು. ತೀವ್ರ ಸಮಸ್ಯೆಗಳಿದ್ದರೆ ಮನೋವಿಜ್ಞಾನಿ ಅಥವಾ ತಜ್ಞ ಸಲಹಾಗಾರರ ನೆರವು ಪಡೆಯಬೇಕು.ಹೆಚ್ಚು ಮಕ್ಕಳಿರುವ ದೊಡ್ಡ ಶಾಲೆಗಳು ಸಲಹಾಗಾರರನ್ನು ಹೊಂದಿರಬೇಕು. ಅವರು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಬೇಕು. ಹತ್ತಿರದ ಇತರ ಶಾಲೆಗಳಿಗೂ ಅವರು ತಮ್ಮ ಸೇವೆಯನ್ನು ನೀಡಬೇಕು.

ಸೂಕ್ಷ್ಮ ಮನಃಸ್ಥಿತಿಯ ಅಥವಾ ಸಮಸ್ಯಾತ್ಮಕ ಮಕ್ಕಳ ವಿವರವಾದ ಮಾಹಿತಿಯನ್ನು ಶಾಲೆ ಹೊಂದಿದ್ದು, ಅಗತ್ಯ ಬಂದಾಗ ಕುಟುಂಬದವರಿಗೆ ದೂರವಾಣಿ ಮೂಲಕ ಬೆಂಬಲ ನೀಡಬೇಕು.ಹೆಚ್ಚಿನ ಮಕ್ಕಳ ಸಮಸ್ಯಾತ್ಮಕ ವರ್ತನೆಗೆ ಅವರ ಕಲಿಕಾ ನ್ಯೂನತೆಗಳು ಕಾರಣ ಇರಬಹುದು. ಈ ನಿಟ್ಟಿನಲ್ಲಿ ಅವರ ಕಲಿಕೆಗೆ ಸಹಾನುಭೂತಿಯಿಂದ ಬೆಂಬಲ ನೀಡಬೇಕು.ಮಕ್ಕಳಿಗೆ ಬಲವಂತ ಅಥವಾ ಒತ್ತಡದಿಂದ ಕಲಿಸದೆ, ಅವರು ಸಂತಸದಿಂದ ಕಲಿಯುವಂತೆ ಮಾಡಲು ಶಿಕ್ಷಕರು ಗಮನ ಹರಿಸಬೇಕು.

ಮಕ್ಕಳನ್ನು ಎಲ್ಲರೆದುರು ಅವಮಾನ ಮಾಡದೆ, ವೈಯಕ್ತಿಕವಾಗಿ ತಿಳಿಹೇಳಬೇಕು.ಪೋಷಕರು ಮಕ್ಕಳಿಗೆ ಮಾದರಿಯಾಗಬೇಕು. ಈ ಸಂಬಂಧ, ಜಿಮ್ ಹೆನ್ಸನ್‌ರವರ ಈ ಮಾತು ಪ್ರಸ್ತುತ `ಮಕ್ಕಳು ನೀವು ಏನನ್ನು ಕಲಿಸಲು ಪ್ರಯತ್ನಿಸುವಿರೋ ಅದನ್ನು ನೆನಪಿಡದೇ ಹೋಗಬಹುದು. ಆದರೆ ನೀವು ಏನಾಗಿರುವಿರೋ ಅದನ್ನು ಖಂಡಿತವಾಗಿ ನೆನಪಿನಲ್ಲಿ ಇಡುತ್ತಾರೆ'.ಪೋಷಕರು ಮತ್ತು ಶಿಕ್ಷಕರು ತಮ್ಮ ನಡವಳಿಕೆಯಲ್ಲಿ ಸ್ಥಿರತೆ ತೋರಬೇಕು. ಮಕ್ಕಳ ಕೆಲವು ವರ್ತನೆಗೆ ಒಮ್ಮೆ ಶಿಕ್ಷಿಸಿ, ಅದೇ ರೀತಿಯ ವರ್ತನೆಯನ್ನು ಅವರು ಇನ್ನೊಮ್ಮೆ ತೋರ್ಪಡಿಸಿದಾಗ ಲಘುವಾಗಿ ಪರಿಗಣಿಸಿ ಸುಮ್ಮನಿದ್ದರೆ, ಮಕ್ಕಳಿಗೆ ತಪ್ಪು ಸಂದೇಶ ಹೋಗುತ್ತದೆ. ಇದು ಮುಂದೆ ಅವರು ಅಶಿಸ್ತು ತೋರಲು ಕಾರಣವಾಗುತ್ತದೆ.ನಾವು ಯಾವ ರೀತಿಯ ವರ್ತನೆಯನ್ನು ಮಕ್ಕಳಿಂದ ಅಪೇಕ್ಷಿಸುತ್ತೇವೆ ಎಂಬುದನ್ನು ಅವರಿಗೆ ಮೊದಲೇ ತಿಳಿಸುವುದು ಪರಿಣಾಮ ಬೀರುತ್ತದೆ. ಮಕ್ಕಳು ತಪ್ಪು ವರ್ತನೆ ತೋರಿದಾಗ ನಾವು ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ಅವರ ಮುಂದಿನ ವರ್ತನೆ ನಿರ್ಧಾರವಾಗುತ್ತದೆ.ಅನೇಕ ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕ ಪಡೆಯಲಿ ಎಂದು ಅವರನ್ನು ಚಿಕ್ಕ ವಯಸ್ಸಿನಲ್ಲೇ ಬೋರ್ಡಿಂಗ್ ಶಾಲೆ ಅಥವಾ ಮನೆ ಪಾಠಕ್ಕೆ ಕಳುಹಿಸಿ ಕೈತೊಳೆದುಕೊಳ್ಳುತ್ತಾರೆ. ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಹೊಣೆಯನ್ನು ನಾವೇ ತೆಗೆದುಕೊಂಡು, ಆಸ್ಥೆ ವಹಿಸಿ, ಸಮಯ ನೀಡಿ, ಸುಧಾರಣೆಗೆ ಪ್ರಯತ್ನಿಸಬೇಕು.ಮಕ್ಕಳ ಚಿಕ್ಕಪುಟ್ಟ ಸಾಧನೆ, ಯಶಸ್ಸು, ಸದ್ವರ್ತನೆಗಳನ್ನು ಗಮನಿಸಿ, ಒಳ್ಳೆಯ ಮಾತುಗಳಿಂದ ಪ್ರೋತ್ಸಾಹಿಸಿ ಹುರಿದುಂಬಿಸಬೇಕು. ಇದು ಅವರ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಸರಿದಾರಿಯಲ್ಲಿ ಸಾಗಲು ಸಹಾಯ ಮಾಡುತ್ತದೆ.ಮಕ್ಕಳ ಚಿಕ್ಕಪುಟ್ಟ ದೋಷಗಳನ್ನು ಉದಾರವಾಗಿ ಕ್ಷಮಿಸಿ, ಅವರ ಬೆಳವಣಿಗೆಯಲ್ಲಿ ನಂಬಿಕೆ ಇಡಬೇಕು. ತಪ್ಪುಗಳಾದಾಗ ತಕ್ಷಣವೇ ಎಚ್ಚರಿಸಿ, ತಿಳಿವಳಿಕೆ ಕೊಡುವ ಕೆಲಸ ಮುಖ್ಯವಾದುದು. ಇಲ್ಲದಿದ್ದರೆ ಅಂತಹ ತಪ್ಪುಗಳನ್ನು ಪುನರಾವರ್ತಿಸುವ ಸಾಧ್ಯತೆ ಹೆಚ್ಚಿರುತ್ತದೆ.ಮಕ್ಕಳನ್ನು ಅವರ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನಡೆಸಿಕೊಳ್ಳಬೇಕು. ಎಲ್ಲರೆದುರೂ ಅವರನ್ನು ಅವಮಾನಿಸುವುದರಿಂದ ಅವರ ಆತ್ಮಗೌರವಕ್ಕೆ ಪೆಟ್ಟು ಬಿದ್ದು, ಆತ್ಮವಿಶ್ವಾಸ ಕುಂದುತ್ತದೆ.

ಮಕ್ಕಳು ಹೀಗೆಯೇ ವರ್ತಿಸಬೇಕು, ಗಲಾಟೆ ಮಾಡದೆ ರೋಬೋಟ್‌ಗಳಂತೆ ಇರಬೇಕು ಎಂಬ ಪೂರ್ವಗ್ರಹ ಮನಃಸ್ಥಿತಿ ಹೊಂದದೆ, ಮುಕ್ತ ಮನಸ್ಸಿನಿಂದ ಇರಬೇಕು.ಎಷ್ಟೋ ವೇಳೆ ಮಕ್ಕಳು ಮಾಡುವ ಚಿಕ್ಕಪುಟ್ಟ ತರಲೆಗಳನ್ನು ದೊಡ್ಡವರಾದ ನಾವು ಅತಿ ಗಂಭೀರವಾಗಿ ಪರಿಗಣಿಸಿ, ಕ್ರೂರವಾಗಿ ಶಿಕ್ಷಿಸುತ್ತೇವೆ. ಅದರ ಬದಲು ನಾವು ಸಹ ಅವರೊಂದಿಗೆ ಮಕ್ಕಳಂತಾಗಿ ಖುಷಿಯಿಂದ ಇರಬಾರದೇಕೆ? ಕ್ರೂರ ಶಿಕ್ಷೆಯಿಂದ ಮೂಡುವ ಶಿಸ್ತಿಗಿಂತಲೂ ತಿಳಿವಳಿಕೆ ನೀಡುವ ಮೂಲಕ ಬೆಳೆಯುವ ಸ್ವಯಂ ಶಿಸ್ತು ಹೆಚ್ಚು ಪರಿಣಾಮಕಾರಿ. ಹೀಗಾಗಿ, ಮಕ್ಕಳ ಮುಗ್ಧ ಮನಸ್ಸುಗಳನ್ನು ಅರಳಿಸಿ, ವಿಕಸಿಸಲು ನಮ್ಮ ಶಾಲೆ- ಕುಟುಂಬಗಳನ್ನು ಸಜ್ಜುಗೊಳಿಸುವತ್ತ ನಾವೆಲ್ಲ ಗಂಭೀರವಾಗಿ ಚಿಂತಿಸಬೇಕು.       

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry